ಕಳೆದ ಎರಡು ವರ್ಷದಲ್ಲಿ ಬ್ಯಾಂಕಿನಲ್ಲಿ ಹಣ ಇಟ್ಟರೆ ಸಿಗುತ್ತಿದ್ದ ಬಡ್ಡಿಯ ದರ ಹತ್ತಿರತ್ತಿರ ಮೂರು ಪ್ರತಿಶತ ಕುಸಿದಿದೆ. ಬ್ಯಾಂಕಿನ ಠೇವಣಿ ಮೇಲಿನ ಬಡ್ಡಿಯನ್ನಷ್ಟೇ ನಂಬಿ ಬದುಕುತ್ತಿದ್ದ ಕೋಟ್ಯಾಂತರ ಭಾರತೀಯರ ಬದುಕು ಬವಣೆಯಾಗಿ ಮಾರ್ಪಾಟಾಗಿದೆ. ಬಡ್ಡಿ ದರ ಕುಸಿತದಿಂದ ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಾಗಿ ವ್ಯಾಪಾರ ವಹಿವಾಟು ಹೆಚ್ಚಾಗುತ್ತದೆ ಎನ್ನುವ ಪಂಡಿತರ ಲೆಕ್ಕಾಚಾರ ಒಂದಷ್ಟು ತಪ್ಪಾಗಿದೆ. ಚೀನಾಗೆ ಸೆಡ್ಡು ಹೊಡೆದು ಆರ್ಥಿಕತೆಯಲ್ಲಿ ಮತ್ತು ಬೆಳವಣಿಗೆಯ ಮಾಪಕದಲ್ಲಿ "ನಂಬರ್ 1 ನಾವು" ಎಂದು ಬೀಗುತ್ತಿದ್ದ ಭಾರತ ನಿಧಾನವಾಗಿ ಚೀನಾಗೆ ಮತ್ತೆ ತಲೆಬಾಗುತ್ತಿದೆ. ಇತ್ತ ಬಡ್ಡಿ ದರ ಕುಸಿತದಿಂದ ಸಮಾಜದ ಒಂದು ವರ್ಗ ಕುಸಿದರೆ ಅತ್ತ ಬಡ್ಡಿ ದರ ಕುಸಿತದ ಅನುಕೂಲ ಪಡೆದು ವಿತ್ತ ಪ್ರಪಂಚದಲ್ಲಿ ಮೆರೆಯುವ ಅವಕಾಶವನ್ನೂ ಭಾರತದ ಕಾರ್ಪೊರೇಟ್ ಜಗತ್ತು ಕೈ ಚಲ್ಲಿದೆ. ಬ್ಯಾಂಕ್ಗಳ ಸ್ಥಿತಿಯಂತೂ ಅತಂತ್ರವಾಗಿದೆ. ವಿಲೀನ ಎನ್ನುವ ನವೀನ ನಾಟಕ ಕೂಡ ಹೆಚ್ಚಿನ ಫಲ ನೀಡಿಲ್ಲ.
ಉರ್ಜಿತ್ ಪಟೇಲ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಗವರ್ನರ್ ಆದ ಮರು ಕ್ಷಣವೇ ರೆಪೋ ರೇಟ್ ಕಡಿಮೆ ಆಗುತ್ತದೆ ಎನ್ನುವುದು ವಿತ್ತ ಜಗತ್ತಿಗೆ ಈಗಷ್ಟೆ ಅಡಿಯಿಟ್ಟ ವಿದ್ಯಾರ್ಥಿಗೂ ತಿಳಿದ ವಿಷಯವಾಗಿತ್ತು. ಬಡ್ಡಿ ಕಡಿತ ನಿರ್ಧಾರ ಪ್ರಕಟಿಸಿದ ದಿನ ಮಾರುಕಟ್ಟೆಯಲ್ಲಿ ಗರಿಗೆದರಿದ ಹೊಸ ಉತ್ಸಾಹ ಎರಡು ದಿನ ಮುಂದುವರಿಯುತ್ತದೆ. ಮತ್ತೆ ಮೂರನೇ ದಿನ ಯಥಾಪ್ರಕಾರ ಕುಸಿತ ಕಾಣುತ್ತದೆ. ಭಾರತದಲ್ಲಿ ಮಾತ್ರ ಇಂತಹ ಚಮತ್ಕಾರ ನೆಡೆಯಲು ಸಾಧ್ಯ. ವರ್ಷದಲ್ಲಿ ಬಡ್ಡಿಯ ದರವನ್ನ ಮೂರು ಪ್ರತಿಶತ ಇಳಿಸುವುದು ಸಾಮಾನ್ಯ ನಿರ್ಧಾರವಲ್ಲ. ಕೇಂದ್ರ ಸರಕಾರದ ಮೇಲಿನ ನಂಬಿಕೆಯೋ ಅಥವಾ ಜನರಲ್ಲಿರುವ ಆರ್ಥಿಕ ಮೌಢ್ಯವೋ ತಿಳಿಯದು, ಗಲಾಟೆ ಗದ್ದಲವಿಲ್ಲದೆ ಈ ವಿಷಯ ತಿಳಿಯಾಗಿ ಹೋಗಿದೆ. ಇದು ಅರ್ಥ ಆಗಲು ಮೊದಲು ಒಂದಷ್ಟು ಬೇಸಿಕ್ ವಿಷಯದ ತಿಳುವಳಿಕೆ ಅತಿ ಅವಶ್ಯಕ. ರೆಪೋ ರೇಟ್ ಎಂದರೇನು? ಅದನ್ನ ಹೆಚ್ಚು ಅಥವಾ ಕಡಿಮೆ ಏಕೆ ಮಾಡುತ್ತಾರೆ? ಎನ್ನುವುದು ಅವಶ್ಯವಾಗಿ ತಿಳಿದಿರಬೇಕಾದ ವಿಷಯ.
ರೆಪೋ ರೇಟ್ ಎಂದರೇನು, ಅದನ್ನು ಏಕೆ ಕಡಿಮೆ ಮಾಡುತ್ತಾರೆ?
ದೇಶದ ಸೆಂಟ್ರಲ್ ಬ್ಯಾಂಕ್ ಇತರ ಬ್ಯಾಂಕ್ ಗಳಿಗೆ ಹಣದ ಅವಶ್ಯಕತೆ ಬಿದ್ದರೆ ಹಣವನ್ನ ಎರವಲು (ಸಾಲ) ಕೊಡುತ್ತದೆ. ಹಾಗೆ ಕೊಟ್ಟ ಹಣಕ್ಕೆ ವಿಧಿಸುವ ಬಡ್ಡಿ ದರಕ್ಕೆ ರೆಪೋ ರೇಟ್ ಎನ್ನುತ್ತಾರೆ. ಬ್ಯಾಂಕುಗಳ ಕೆಲಸ ಗ್ರಾಹಕರಿಂದ ಹಣವನ್ನ ಠೇವಣಿ ರೂಪದಲ್ಲಿ ಪಡೆಯುವುದು ಮತ್ತು ಅವಶ್ಯಕತೆ ಇದ್ದವರಿಗೆ ಹಣವನ್ನ ಸಾಲದ ರೂಪದಲ್ಲಿ ನೀಡುವುದು ಈ ಕ್ರಿಯೆಯ ನಡುವೆ ತಾನು ಒಂದಷ್ಟು ಲಾಭ ಮಾಡುವುದು. ಆದರೆ ಕೆಲವೊಮ್ಮೆ ಬೇಡಿಕೆ ಕಡಿಮೆ ಆಗುತ್ತದೆ. ಠೇವಣಿ ಮೊತ್ತ ಹೆಚ್ಚಾಗಿ, ಸಾಲ ಪಡೆಯುವ ಮೊತ್ತ ಕಡಿಮೆ ಆಗುತ್ತದೆ. ಸರಳವಾಗಿ ಹೇಳಬೇಕಾದರೆ ಸಪ್ಲೈ ಹೆಚ್ಚಾಗುತ್ತದೆ ಡಿಮ್ಯಾಂಡ್ ಕಡಿಮೆ ಆಗುತ್ತದೆ. ಕುಸಿದ ಬೇಡಿಕೆಯನ್ನ ಹೆಚ್ಚಿಸಲು ಸೆಂಟ್ರಲ್ ಬ್ಯಾಂಕ್ ತನ್ನ ದರವನ್ನ ಕಡಿತ ಮಾಡುತ್ತದೆ. ಬೇಡಿಕೆ ಹೆಚ್ಚಾಗಿ ಸಪ್ಲೈ ಕಡಿಮೆ ಇದ್ದರೆ ರೇಟ್ ಹೆಚ್ಚಳವಾಗುತ್ತದೆ. ಹೀಗಾಗಿ ಇತರ ಬ್ಯಾಂಕುಗಳು ಗ್ರಾಹಕರಿಂದ ಪಡೆಯುವ ಠೇವಣಿ ಮೊತ್ತ ಕಡಿಮೆ ಮಾಡಿಕೊಳ್ಳಬಹುದು. ದೇಶದಲ್ಲಿ ಹಣದುಬ್ಬರದ ಏರುಪೇರು ತಡೆಯಲು ಮತ್ತು ಅದನ್ನ ಸಮರ್ಪಕವಾಗಿ ನಿರ್ವಹಿಸಲು ಕೂಡ ಸೆಂಟ್ರಲ್ ಬ್ಯಾಂಕ್ ತನ್ನ ರೆಪೋ ರೇಟ್ ಹೆಚ್ಚು ಅಥವಾ ಕಡಿಮೆ ಮಾಡುತ್ತದೆ.
ರೆಪೋ ರೇಟ್ ಕಡಿಮೆ ಆದುದ್ದರಿಂದ ಯಾರಿಗೆಲ್ಲಾ ಲಾಭ?
ಸಹಜವಾಗೇ ಯಾರೆಲ್ಲಾ ಸಾಲ ಪಡೆಯುತ್ತಾರೋ ಅವರಿಗೆಲ್ಲಾ ಲಾಭ. ಆದರೆ ಇದು ಅಷ್ಟು ಸುಲಭವೇ? ಎಲ್ಲರಿಗೂ ಸಾಲ ಸಿಕ್ಕುತ್ತದೆಯೇ? ಹೆಚ್ಚು ಸಾಲ ಪಡೆಯುವರು ಕಾರ್ಪೊರೇಟ್ ವಲಯದವರು, ದೊಡ್ಡ ಉದ್ದಿಮೆಗಾರರು. ಅವರ ಪಾಲಿಗೆ ಡೆಟ್ ಇನ್ನಷ್ಟು ಚೀಪ್. ಹೀಗೆ ಮತ್ತಷ್ಟು ಕಡಿಮೆ ಬಡ್ಡಿಗೆ ಸಿಕ್ಕಿದ ಹಣದಿಂದ ಅವರು ಇನ್ನಷ್ಟು ಉದ್ದಿಮೆ ಹಿಗ್ಗಿಸಬಹುದು ಇಲ್ಲವೇ ಹೊಸ ಉದ್ಯಮ ಸೃಷ್ಟಿಸಬಹುದು. ಹೊಸದಾಗಿ ಕಾರು, ಮನೆ ಕೊಳ್ಳುವ ಜನ ಸಾಮಾನ್ಯರಿಗೂ ಇದರಿಂದ ಅನುಕೂಲವಾಗಲಿದೆ.
ರೆಪೋ ರೇಟ್ ಕಡಿಮೆ ಆದುದ್ದರಿಂದ ಯಾರಿಗೆ ನಷ್ಟ?
ಸುಮಾರು ಹತ್ತು ಕೋಟಿ ಹಿರಿಯ ನಾಗರಿಕರು ನಮ್ಮ ದೇಶದಲ್ಲಿ ಇದ್ದಾರೆ. ಇವರಲ್ಲಿ ಬಹುತೇಕರಿಗೆ ಪಿಂಚಣಿ ಭಾಗ್ಯವಿಲ್ಲ. ತಮ್ಮ ಕೆಲಸದ ಅವಧಿಯಲ್ಲಿ ಉಳಿಸಿದ ಹಣವನ್ನ ಬ್ಯಾಂಕಿನಲ್ಲಿ ಇಟ್ಟು ಬರುವ ಬಡ್ಡಿಯಲ್ಲೇ ಇವರ ಜೀವನ. ಅಂತಹವರಿಗೆ ಇದು ಅತ್ಯಂತ ದೊಡ್ಡ ಹೊಡೆತ. ಇದು ನೇರವಾಗಿ ನೋಡಿದಾಗ ಲೆಕ್ಕಕ್ಕೆ ಸಿಗುವುದು. ದೇಶದ 50ಕ್ಕೂ ಹೆಚ್ಚು ಪ್ರತಿಶತ ಜನರು ಸ್ವಂತ ಉದ್ಯಮದಲ್ಲಿ ಇರುವರು ಅವರಿಗೆ ತಮ್ಮ ದುಡಿತದ ದಿನದ ನಂತರ ಯಾವುದೇ ಪಿಂಚಣಿ ಇಲ್ಲ. ಅವರಿಗೇನಿದ್ದರೂ ಉಳಿಸಬೇಕು, ಉಳಿಸಿದ ಹಣದ ಮೇಲೆ ಬರುವ ಆದಾಯದಲ್ಲಿ ಬದುಕಬೇಕು.
ಇತರ ಮುಂದುವರಿದ ದೇಶಗಳಲ್ಲಿ ಪ್ರಜೆಗಳಿಗೆ ಸಾಮಾಜಿಕ ಭದ್ರತೆ ಇದೆ. ಅಕಸ್ಮಾತ್ ಕೆಲಸ ಹೋದರೆ ಒಂದಷ್ಟು ತಿಂಗಳು ಭತ್ಯೆ ಸರಕಾರವೇ ನೀಡುತ್ತದೆ. ತನ್ನೆಲ್ಲಾ ಪ್ರಜೆಗಳಿಗೂ ಕನಿಷ್ಟ ಪಿಂಚಣಿ ಯೋಜನೆ ನೀಡಿದೆ. ಹೀಗಾಗಿ ಅಲ್ಲಿ ಬಡ್ಡಿ ದರ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಅಲ್ಲದೆ ಹಣದುಬ್ಬರವೂ ಆ ದೇಶಗಳಲ್ಲಿ ಇಲ್ಲ. ನಮ್ಮ ದೇಶದಲ್ಲಿ ಇದ್ಯಾವುದೂ ಇಲ್ಲ. ತಲೆತಲಾಂತರದಿಂದ ನಮ್ಮದು ಉಳಿಕೆಯ ಸಮಾಜ. ಕಡಿಮೆ ಬಡ್ಡಿ ದರ ಉಳಿಕೆಯನ್ನ ಪ್ರೋತ್ಸಾಹಿಸುವುದಿಲ್ಲ. ಅಲ್ಲದೆ ಆಗಲೇ ಪಾಶ್ಯಾತ್ಯ ದೇಶದ ಮೋಹಕ್ಕೆ ಒಳಗಾಗಿರುವ ಯುವ ಜನತೆ ಸಾಲದ ದಾಸರಾಗುತ್ತಾರೆ. ನಾಳೆಯ ದುಡ್ಡನ್ನು ಇಂದೇ ಪಡೆದು ಮೋಜು ಮಾಡುವ ವಿದೇಶಿ ಸಂಸ್ಕೃತಿ ನಮ್ಮದಾಗುತ್ತದೆ. ಉಳಿಕೆ ಮಾಡುವನನ್ನು ಹಳೆ ಕಾಲದವನು ಎನ್ನುವಂತೆ ನೋಡಲಾಗುತ್ತದೆ. ಸಾಲ (ಡೆಟ್) ಮುಂದಿನ ಜನಾಂಗದ ಹೊಸ ಹಣವಾಗುತ್ತದೆ.
‘ಹಳ್ಳವಿದ್ದೆಡೆ ನೀರು’ ಎನ್ನುವ ಗಾದೆಯಂತೆ ಹಣವಂತರು ಇನ್ನಷ್ಟು ಹಣವಂತರಾಗಲು ದಾರಿ ಮಾಡಿಕೊಟ್ಟಿದೆ. ಹೊಸ ಉದ್ಯೋಗ ಸೃಷ್ಟಿಯಾಯಿತು, ದೇಶದ ಜಿಡಿಪಿ ಹೆಚ್ಚಿತು ಎಲ್ಲವೂ ಸರಿ. ಕಾರ್ಪೊರೇಟ್ ವಲಯದ ಏಕಸ್ವಾಮ್ಯಕ್ಕೆ ಇನ್ನಷ್ಟು ನೀರು ಎರೆದಂತೆ ಆಗುತ್ತದೆ. ಉದಾಹರಣೆ ನೋಡಿ ಎರಡು ವರ್ಷದ ಹಿಂದೆ 150 ಕೋಟಿ ರೂಪಾಯಿಗೆ ಕಟ್ಟುತ್ತಿದ್ದ ಬಡ್ಡಿ ಇಂದು 200 ಕೋಟಿ ಸಾಲದ ಮೇಲೆ ಕಟ್ಟಿದರೆ ಆಯಿತು. ಅಂದರೆ 50 ಕೋಟಿ ರೂಪಾಯಿ ವ್ಯಾಪಾರ ಮಾಡಲು ಬಿಟ್ಟಿ ಕೊಟ್ಟ ಹಾಗಾಯಿತು. ಯಾರಿಗೆ ನಷ್ಟ ಎನ್ನುವುದು ಬುದ್ಧಿವಂತ ಓದುಗನ ನಿರ್ಧಾರಕ್ಕೆ ಬಿಟ್ಟದ್ದು.
ರೇಟ್ ಕಟ್ ನಿಂದ ದೇಶದ ಆರ್ಥಿಕ ವ್ಯವಸ್ಥೆ ಏನಾಗಬಹುದು?
ರೇಟ್ ಕಟ್ ಮಾಡುವಾಗ ಸೆಂಟ್ರಲ್ ಬ್ಯಾಂಕ್ ಒಂದಷ್ಟು ಊಹೆ ಮಾಡಿಕೊಳ್ಳುತ್ತದೆ. ಅದರಲ್ಲಿ ಪ್ರಮುಖವಾದ್ದು ಹಣದುಬ್ಬರ. ಮುಂದಿನ ಆರು ತಿಂಗಳವರೆಗೆ ಯಾವುದೇ ಪದಾರ್ಥದಲ್ಲಿ ಬೆಲೆ ಏರಿಕೆ ಆಗುವುದಿಲ್ಲ ಎನ್ನುವುದೇ ಆ ಊಹೆ. ಕಳೆದ ತಿಂಗಳ ಹಣದುಬ್ಬರ ಶೇ.5.30 ಎನ್ನುತ್ತದೆ ಅಂಕಿ-ಅಂಶ. ಇದು ಹಾಳೆಯ ಮೇಲಿನ ಅಂಕಿ-ಅಂಶ ಅಷ್ಟೇ. ನಿಜ ಜೀವನದಲ್ಲಿ ನಾವು ಶೇ.9 ರಿಂದ ಶೇ.9.5 ರ ಹಣದುಬ್ಬರ ಎದುರಿಸುತ್ತಿದ್ದೇವೆ. ಅಂದರೆ ನಮಗೆ ಅರಿವಿಲ್ಲದೆ ನಾವು ನೆಗೆಟಿವ್ ರೇಟ್ ಆಫ್ ಇಂಟರೆಸ್ಟ್ ಪ್ರವೇಶಿಸಿದ್ದೇವೆ ಎಂದಾಯಿತು. ಹಾಳೆಯ ಅಂಕಿ-ಅಂಶದ ಪ್ರಕಾರ ನೋಡಿದರೂ ಗ್ರಾಹಕ ಠೇವಣಿ ಮೇಲೆ ಸಿಗುತ್ತಿರುವ ಬಡ್ಡಿ 1.95 ಮಾತ್ರ. (ಠೇವಣಿ ಬಡ್ಡಿ ರೇಟ್ ಶೇ.7.25 ಅನ್ನು ಹಣದುಬ್ಬರ ಶೇ.5.30 ಕಳೆದಾಗ ಉಳಿದದ್ದು)
ಯೂರೋಪಿನಲ್ಲಿ, ಅಮೆರಿಕಾದಲ್ಲಿ ಲೆಕ್ಕವಿಲ್ಲದೆ ಕಟ್ಟಿದ ಮನೆಗಳು ಮಾರಾಟವಾಗದೆ ಉಳಿದಾಗ ಡಿಮ್ಯಾಂಡ್ ಹೆಚ್ಚಿಸುವ ಸಲುವಾಗಿ ಬ್ಯಾಂಕ್ ಬಡ್ಡಿ ದರವನ್ನು ಕಡಿಮೆ ಮಾಡಲಾಯಿತು. ಪಿಜ್ಜಾ ಡೆಲಿವರಿ ಮಾಡುವ ಎರಡು ಸಾವಿರ ಡಾಲರ್ ದುಡಿಯುವ ಹುಡುಗನ ತಲೆಗೆ ಎರಡು ಲಕ್ಷದ ಮನೆಯನ್ನ ಕಡಿಮೆ ಬಡ್ಡಿ ದರ ಆಸೆ ತೋರಿಸಿ ಕಟ್ಟಲಾಯಿತು. ಮನೆಯೆಲ್ಲಾ ಮಾರಾಟವಾದಾಗ ನಿಧಾನವಾಗಿ ಬಡ್ಡಿ ಹೆಚ್ಚಿಸಿದರು ಪರಿಣಾಮ ಕಂತು ಕಟ್ಟಲಾಗದೆ ಜನ ಮನೆಯನ್ನು ಬ್ಯಾಂಕಿಗೆ ಬಿಟ್ಟು ಕೊಟ್ಟರು. ಕಂತು ಮೂಲಕ ಬರುತಿದ್ದ ಹಣ ನಿಂತಿತು. ಬ್ಯಾಂಕ್ ವ್ಯವಸ್ಥೆ ಕುಸಿಯಿತು. ತನ್ಮೂಲಕ ಇಡೀ ಆರ್ಥಿಕ ವ್ಯವಸ್ಥೆ ಕುಸಿಯಿತು. 2009ರಿಂದ ಇಲ್ಲಿಯವರೆಗೆ ಅಮೆರಿಕ, ಯೂರೋಪ್ ಕುಸಿತದಿಂದ ಹೊರಬರಲಾಗಿಲ್ಲ. ತಿಪ್ಪೆಯಲ್ಲಿ, ನಾಲೆಯಲ್ಲಿ ಸಿಕ್ಕ ಸಿಕ್ಕಲ್ಲಿ ಕಟ್ಟಿರುವ ಕಟ್ಟಡಗಳನ್ನು ಮಾರಾಟ ಮಾಡಿ ಪ್ರಮೋಟರ್ಸ್ ಕೈ ತೊಳೆದುಕೊಳ್ಳಬಹುದು. ಕೊಟ್ಟ ಸಾಲ ವಾಪಸ್ಸು ಬಂದಿತು ಎಂದು ಬ್ಯಾಂಕ್ ಬೀಗಬಹುದು ಆದರೆ ಅದು ಕ್ಷಣಿಕ. ಕೊಂಡ ಗ್ರಾಹಕ ಮಾತ್ರ ‘ಡೆಟ್ ಟ್ರ್ಯಾಪ್’ ನಲ್ಲಿ ಸಿಲುಕಿ ತನ್ನ ಜೀವನ ಸವೆಸಬೇಕು.
ಸದ್ಯದ ಭಾರತದ ಆರ್ಥಿಕ ಸ್ಥಿತಿಯೇನು?
ಬಡ್ಡಿ ದರ ಕಡಿಮೆ ಮಾಡುವಾಗ ಹೊಸ ಉದ್ಯೋಗ ಸೃಷ್ಟಿಯಾಗುತ್ತೆ, ವ್ಯಾಪಾರ ವಹಿವಾಟು ಹೆಚ್ಚುತ್ತದೆ, ಭಾರತದ ಜಿಡಿಪಿ ಹೆಚ್ಚಳ ಕಾಣುತ್ತದೆ ಎಂದು ವಿಶ್ಲೇಷಿಸಲಾಗಿತ್ತು. ಮೊದಲೇ ಹೇಳಿದಂತೆ ರೇಟ್ ಕಟ್ ಮಾಡುವಾಗ ಸೆಂಟ್ರಲ್ ಬ್ಯಾಂಕ್ ಒಂದಷ್ಟು ಊಹೆ ಮಾಡಿಕೊಳ್ಳುತ್ತದೆ. ಆ ಊಹೆಗಳು ಕೈ ಕೊಟ್ಟಿವೆ. ಎಣಿಸಿದಂತೆ ವ್ಯಾಪಾರ ವಹಿವಾಟು ಹೆಚ್ಚಲಿಲ್ಲ, ಉದ್ಯೋಗ ಸೃಷ್ಟಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಜಿಡಿಪಿ ಕುಸಿದಿದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬೆಳವಣಿಗೆಯ ಸೂಚ್ಯಂಕ ಕೂಡ ಕುಸಿತ ಕಂಡಿದೆ. ಭಾರತೀಯ ಬ್ಯಾಂಕ್ಗಳಿಗೆ ಕುಸಿತ ತಪ್ಪಿಸಲು 95 ಸಾವಿರಕ್ಕೂ ಹೆಚ್ಚಿನ ಹೊಸ ಹಣದ ಅವಶ್ಯಕೆತೆ ಇದೆ ಎನ್ನುತ್ತದೆ ಅಂಕಿ-ಅಂಶ. ಹಾಳೆಯ ಮೇಲಿನ ಲೆಕ್ಕಾಚಾರ ತಪ್ಪಾಗಿದೆ. ಬಡ್ಡಿ ದರ ಕುಸಿತದಿಂದ ಏನೆಲ್ಲಾ ಒಳ್ಳೆಯದು ಆಗುತ್ತದೆ ಎಂದುಕೊಂಡಿತ್ತೋ ಅದು ಆಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್, ವಿತ್ತ ಸಚಿವಾಲಯ ಮುಂಬರುವ ದಿನಗಳಲ್ಲಿ ತೆಗೆದುಕೊಳ್ಳುವ ನಿರ್ಧಾರ ನಮ್ಮ ಭವಿಷ್ಯವನ್ನು ಬರೆಯಲಿದೆ. ಯೂರೋಪ್ ಮತ್ತು ಅಮೇರಿಕಾ ತೆಗೆದುಕೊಂಡ ಕೆಟ್ಟ ನಿರ್ಧಾರಗಳು ನಮ್ಮ ಕಣ್ಣ ಮುಂದಿವೆ. ಅದು ಭಾರತಕ್ಕೆ ಪಾಠವಾಗಲಿ. ಉತ್ತಮ ಆರ್ಥಿಕ ನೀತಿ ನಮ್ಮದಾಗಲಿ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com