Kannadaprabha The New Indian Express
ಲವ್ ಯು ಆಲಿಯಾ: ಇಂದ್ರಜಿತ್ ಲಂಕೇಶ್ ಅವರ ಹೊಸ ಚಿತ್ರ 
By select 
26 Oct 2014 02:00:00 AM IST

ಬೆಂಗಳೂರು: ಇಂದ್ರಜಿತ್ ಲಂಕೇಶ್ ಮತ್ತೆ ಮೈದಾನಕ್ಕೆ ಇಳಿದಿದ್ದಾರೆ. ಶನಿವಾರ ಸಂಜೆ ಬೆಂಗಳೂರಿನ ಅಶೋಕ ಹೋಟೆಲಿನಲ್ಲಿ ತಮ್ಮ ಎಂದಿನ ಅದ್ದೂರಿ ಶೈಲಿಯಲ್ಲಿ ನಡೆದ ಹೊಸ ಚಲನಚಿತ್ರದ ಮುಹೂರ್ತದಲ್ಲಿ ಚಲನಚಿತ್ರದ ಶೀರ್ಷಿಕೆ 'ಲವ್ ಯು ಆಲಿಯಾ' ಅನಾವರಣಗೊಳಿಸಿದರು.

ಖ್ಯಾತ ನಟ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರು ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನೆಮಾದಲ್ಲಿ ರವಿಚಂದ್ರನ್  ಜೊತೆಗೆ ಬಹುಭಾಷಾ ತಾರೆ ಭೂಮಿಕಾ ಚಾವ್ಲಾ ನಟಿಸುತ್ತಿದ್ದಾರೆ. ಭೂಮಿಕಾ ಚಾವ್ಲಾ ಇಲ್ಲಿಯವರೆಗೆ ಕನ್ನಡವನ್ನು ಹೊರತುಪಡಿಸಿ ದಕ್ಷಿಣಭಾರತದ ಎಲ್ಲ ಭಾಷೆಯಲ್ಲೂ ನಟಿಸಿದ್ದು ಕನ್ನಡಕ್ಕೆ ಮೊದಲ ಎಂಟ್ರಿ.

ಇಂದ್ರಜಿತ್ ಅವರು ಪತ್ರಿಕೆ ಪ್ರಾರಂಭಿಸಿದಾಗಿನಿಂದಲೂ ನನಗೆ ಗೊತ್ತು. ಅವರು ನನಗೆ ಕಥೆಯ ಬಗ್ಗೆ ಏನೂ ಹೇಳಿಲ್ಲ. ಹೊಸ ಸಿನೆಮಾ ನಿಮ್ಮದು ಡಾಕ್ಟರ್ ಪಾತ್ರ ಎಂದಷ್ಟೇ ಅವರು ಹೇಳಿರುವುದು. ಇಂದ್ರಜಿತ್ ಒಳ್ಳೆಯ ಚಿತ್ರವನ್ನು ಮಾಡುತ್ತಾರೆ ಎಂಬ ಭರವಸೆ ಇದೆ ಎನ್ನುತ್ತಾರೆ ರವಿಚಂದ್ರನ್.

ಹೆಚ್ಚು ಮಾತನಾಡದೆ, ಇಂದ್ರಜಿತ್ ಅವರ ಜೊತೆ ಈ ಸಿನೆಮಾ ಮಾಡಲು ಬಹಳ ಖುಷಿಯಾಗುತ್ತಿದೆ ಎಂದಷ್ಟೇ ಹೇಳಿದ್ದು ಖ್ಯಾತ ತಾರೆ ಭೂಮಿಕಾ ಚಾವ್ಲಾ.

ಕಥೆಯ ನಾಯಕನಾಗಿ, ಕಿರು ತೆರೆಯಲ್ಲಿ ಮನೆಮಾತಾಗಿರುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಖ್ಯಾತಿಯ ಚಂದನ್ ಚಿತ್ರದ ನಾಯಕ. ಇಂದ್ರಜಿತ್ ಅವರು ಈ ಚಿತ್ರಕ್ಕಾಗಿ ನನಗೆ ಬೇರೆಯೇ ಇಮೇಜ್ ಸೃಷ್ಟಿಸಿದ್ದಾರೆ, ಎಂದು ಪುಳಕಿತರಾಗಿ ಹೇಳುತ್ತಾರೆ ಚಂದನ್. ಚಿತ್ರದ ನಾಯಕ ನಟಿ ಮುಂಬೈ ಬೆಡಗಿ ಸಂಗೀತ ಚೌಹಾನ್. ತಾವು ಕಲಿತಿರುವ ಒಂದು ಸಂಭಾಷಣೆಯ ಸಾಲನ್ನು ಕನ್ನಡದಲ್ಲೇ ಸಂಕೋಚದಿಂದ ಉಲಿದು ಚಪ್ಪಾಳೆ ಗಿಟ್ಟಿಸಿಕೊಂಡರು. ಪವಿತ್ರ ಲೋಕೇಶ್ ಕೂಡ ಚಲನಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಲನಚಿತ್ರದಿಂದ ಸಿನೆಮಾಗೆ ಎಂಟ್ರಿ ಕೊಡುತ್ತಿರುವ ಮತ್ತೊಬ್ಬಳು ನಟಿ ಅದಿತಿ ಆಚಾರ್ಯ ಕನ್ನಡದ ಬೆಡಗಿ.

ಹಾಡು, ಯಕ್ಷಗಾನ ನೃತ್ಯ, ಕನ್ನಡ ಚಿತ್ರಗಳ ಅದರಲ್ಲೂ ರವಿಚಂದ್ರನ್ ಅವರ ಹಿಟ್ ಚಿತ್ರಗೀತೆಗಳಿಗೆ ನೃತ್ಯ ಮಾಡುವ ಮೂಲಕ ರಂಗೇರಿದ್ದ ಕಾರ್ಯಕಮಕ್ಕೆ ಭೇಟಿ ಕೊಟ್ಟು ದೀಪ ಬೆಳಗಿಸಿ ಶುಭ ಕೋರಿದವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ.

ಕಥೆಯ ಬಗ್ಗೆ ಗುಟ್ಟೇನೂ ಬಿಟ್ಟುಕೊಡದ ಇಂದ್ರಜಿತ್ ಲಂಕೇಶ್, ಚಲನ ಚಿತ್ರ ಶೀರ್ಷಿಕೆಯ ಹೆಸರಿನ ಬಗ್ಗೆ ಹೇಳಿದ್ದು ಹೀಗೆ. ಈಗಾಗಲೇ ಪ್ರಖ್ಯಾತವಾಗಿರುವ ನಟಿಯರನ್ನು ನನ್ನ ಕನ್ನಡ ಚಲನಚಿತ್ರಕ್ಕೆ ತರಲು ಪ್ರಯತ್ನಿಸಿದೆ. ಅವರು ಯಾರೂ ಪ್ರಾದೇಶಿಕ ಭಾಷೆಗಳಲ್ಲಿ ನಟಿಸಲು ಆಸಕ್ತಿ ತೋರುವುದಿಲ್ಲ. ಎಲ್ಲರಿಗೂ ಬಾಲಿವುಡ್ ಚಲನಚಿತ್ರಗಳೇ ಆಗಬೇಕು. ಆಗಲೇ ಸ್ಥಾಪಿತರಾದ ನಟ ನಟಿಯರ ಮಕ್ಕಳು ಕೂಡ ತಮ್ಮ ಚೊಚ್ಚಲ ಸಿನೆಮಾಕ್ಕೆ ಬಾಲಿವುಡ್ಡನ್ನೆ ಆಯ್ಕೆ ಮಾಡಿಕೊಳ್ಳುತ್ತಾರೆ. ಕಮಲಾ ಹಾಸನ್ ಅವರ ಮಗಳು - ಶ್ರುತಿ ಹಾಸನ್ ಅವರ ತಂಗಿ ಅಕ್ಷರ ಕೂಡ ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಲು ನಿರಾಕರಿಸಿದ್ದನ್ನು ನೆನಪಿಸಿಕೊಳ್ಳುವ ಇಂದ್ರಜಿತ್, ಇನ್ನು ಈದಿನ ಯುವಕರ ಇಕಾನ್ ಎನ್ನಬಹುದಾದ ಆಲಿಯಾ ಭಟ್ ಪ್ರಾದೇಶಿಕ ಭಾಷೆಗಳಲ್ಲಿ ನಟಿಸುವುದನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಅದೇ ಆಲಿಯಾ ಇಲ್ಲಿನ ಚಿತ್ರದ ಶೀರ್ಷಿಕೆಯಲ್ಲಿರುವುದು ಎನ್ನುತ್ತಾರೆ ಇಂದ್ರಜಿತ್. ಈ ಕಥೆಗೂ ಚಿತ್ರಕಥೆಗೂ ಏನಾದರೂ ಸಂಬಂಧ ಇದೆಯೇ ಎಂಬುದನ್ನ ಕಾಡು ನೋಡಬೇಕಷ್ಟೇ!

ಇಲ್ಲಿಯವರೆಗೆ ಏಳು ಸಿನೆಮಾಗಳನ್ನು ನಿರ್ದೇಶಿರುವ ಇಂದ್ರಜಿತ್ ಲಂಕೇಶ್, ತಮ್ಮ ಚಿತ್ರ ಐಶ್ವರ್ಯದಲ್ಲಿ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಅವರನ್ನು ಸಿನೆಮಾಗೆ ಪರಿಚಯಿಸಿದ್ದರು.

ಈ ಅದ್ದೂರಿ ಮಹೂರ್ತದ ರಂಗಿನ ಕಾರ್ಯಕ್ರಮದಲ್ಲಿ ನಟಿ ಸಂಜನಾ, ನಟ ಸಂತೋಷ್, ನಿರ್ಮಾಪಕ ಅನೂಪ್, ಕೆ ಮಂಜು ಮುಂತಾದವರು ಭಾಗವಹಿಸಿದ್ದರು. ಜಯಶ್ರೀ ಅವರ ನಿರೂಪಣೆಯಿತ್ತು.


Copyright � 2012 Kannadaprabha.com