Kannadaprabha The New Indian Express
ಎಲ್ಲರನ್ನೂ ಒಟ್ಟಾಗಿ ಏಳಿಸುವ, ಎಲ್ಲರನ್ನೂ ಒಟ್ಟಾಗಿ ಬೀಳಿಸುವ ಶಕ್ತಿ ಪ್ರಜಾಪ್ರಭುತ್ವಕ್ಕೆ ಮಾತ್ರ ಇದೆ: ಒಬಾಮ 
By select 
11 Jan 2017 02:00:00 AM IST

ಚಿಕಾಗೊ: ಅಮೆರಿಕದ ಪ್ರತಿಯೊಬ್ಬ ಪ್ರಜೆಯೂ ಪರಸ್ಪರ ಪಾಲ್ಗೊಂಡಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ತಮ್ಮ ತವರು ಕ್ಷೇತ್ರ ಚಿಕಾಗೋದಲ್ಲಿ ತಮ್ಮ ಕೊನೆಯ ವಿದಾಯದ ಭಾಷಣದಲ್ಲಿ ಅಮೆರಿಕ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ ಒಬಾಮ ಅವರು, ತಮ್ಮ ಆಡಳಿತದ ಸಂದರ್ಭದಲ್ಲಿ ತಮಗೆ ಸಹಕರಿಸಿದ ಪ್ರತಿಯೊಬ್ಬರಿಗೂ ನಾನು  ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.  ತಮ್ಮ ವಿದಾಯದ ಭಾಷಣದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಒಬಾಮ ಪ್ರಮುಖವಾಗಿ ಭಯೋತ್ಪಾದನೆ, ಅಭಿವೃದ್ಧಿ ಮತ್ತು ಅಮೆರಿಕ ಯುವಕರಿಗೆ ಸಂಬಂಧಿಸಿದಂತೆ  ಮಾತನಾಡಿದರು.

ಅಮೆರಿಕ ಪ್ರಸ್ತುತ ಉತ್ತಮವಾಗಿದ್ದು, ಅಮೆರಿಕವನ್ನು ಅತ್ಯುತ್ತಮಗೊಳಿಸುವ ಕಾರ್ಯ ಮಾಡಬೇಕಿದೆ. ಅಮೆರಿಕ ತನ್ನ ಆರಂಭಿಕ ದಿನಗಳಿಗಿಂತಲೂ ಈಗ ಸಾಕಷ್ಟು ಬಲಾಢ್ಯವಾಗಿದೆ. ನಮ್ಮ ಹಿರಿಯರು ನಮಗೆ ಪ್ರಜಾಪ್ರಭುತ್ವವೆಂಬ ದೊಡ್ಡ ಅಸ್ತ್ರವನ್ನು ನೀಡಿದ್ದಾರೆ. ನಮ್ಮ ಸ್ವಾತಂತ್ರ್ಯದ ಮೂಲಕ ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ಸಾಮಾನ್ಯ ಪ್ರಜೆಯೂ ಒಳಗೊಂಡಂತೆ ಪ್ರತಿಯೊಬ್ಬರ ಪಾಲ್ಗೊಳ್ಳವಿಕೆಯಿಂದ ಮಾತ್ರ ಬದಲಾವಣೆ ಸಾಧ್ಯ. ನನ್ನ ಆಡಳಿತದ ಸಂದರ್ಭದಲ್ಲಿ ನಾನು ಪ್ರತಿನಿತ್ಯ ನಿಮ್ಮಿಂದ ಹೊಸ ಹೊಸ ವಿಚಾರಗಳನ್ನು ಕಲಿಯುತ್ತಿದ್ದೆ. ನೀವು ನನ್ನನ್ನು ಉತ್ತಮ ಅಧ್ಯಕ್ಷರನ್ನಾಗಿ ಮತ್ತು ಓರ್ವ ಉತ್ತಮ ವ್ಯಕ್ತಿಯನ್ನಾಗಿ ಮಾಡಿದ್ದೀರಿ. ನಾನು ಮೊದಲು ನಿಮಗೆ ಧನ್ಯವಾದ ಹೇಳಬೇಕು. ನಾನು ಮತ್ತು ಮಿಶೆಲ್ ನಿಮ್ಮ ಆಶಿರ್ವಾದ ಮತ್ತು ನಿಮ್ಮ ಶುಭಾಶಯಗಳಿಗೆ ಋಣಿಗಳಾಗಿರುತ್ತೇವೆ ಎಂದು ಒಬಾಮ ಹೇಳಿದರು.

ನಿಯೋಜಿತ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದ ಒಬಾಮ, ಪಕ್ಷಪಾತ ಧೋರಣೆ ನಮ್ಮ ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯಾಗಿದೆ. ಭಯೋತ್ಪಾದನೆ ಜಾಗತಿಕ ಪಿಡುಗಾಗಿದೆ. ಆದರೆ ಎಲ್ಲ ಮುಸ್ಲಿಮರು ಭಯೋತ್ಪಾದಕರಲ್ಲ. ಮುಸ್ಲಿಮರಲ್ಲೂ ದೇಶಪ್ರೇಮಿಗಳಿದ್ದಾರೆ. ಅಮೆರಿಕಕ್ಕೆ ವಲಸೆ ಬಂದಿರುವವರ ಮಕ್ಕಳನ್ನು ಕೂಡ ಒಳಗೊಂಡಂತೆ ಒಗ್ಗೂಡಿ ಕೆಲಸ ಮಾಡಬೇಕಿದೆ. ನಮ್ಮ ಅಡಳಿತದ ಸಂದರ್ಭದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳನ್ನು ಟ್ರಂಪ್ ಆಡಳಿತ ಕೂಡ ಮುಂದುವರೆಸಿಕೊಂಡು ಹೋಗುತ್ತದೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

"ನಿಮ್ಮ ಎದುರಾಳಿ ಎನನ್ನಾದರೂ ಹೇಳುತ್ತಿದ್ದರೆ ಅದನ್ನು ಕಿವಿಗೊಟ್ಟು ಕೇಳಿ. ನಿಮ್ಮ ಎದುರಾಳಿಯ ಬಳಿಯಲ್ಲೂ ನಿಮಗೆ ಪೂರಕವಾದ ವಿಷಯಗಳು ಸಿಗಬಹುದು. ಹೀಗಾಗಿ ಪರಸ್ಪರ ಮಾತುಕತೆಯೇ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಭದ್ರ ಬುನಾದಿಯಾಗುತ್ತದೆ. ಇನ್ನು ಕೇವಲ 10 ದಿನಗಳಲ್ಲಿ ಅಮೆರಿಕ ಮತ್ತೊಂದು ಪ್ರಜಾಪ್ರಭುತ್ವ ಸರ್ಕಾರಕ್ಕೆ ಮುನ್ನುಡಿ ಬರೆಯಲಿದ್ದು, ಜನರಿಂದ ಆಯ್ಕೆಯಾದ ನೂತನ ಅಧ್ಯಕ್ಷ ಅಧಿಕಾರ ಸ್ವೀಕರಿಸಲಿದ್ದಾರೆ. ಎಲ್ಲರೂ ಒಟ್ಟಾಗಿ ಏಳುವ ಮತ್ತು ಎಲ್ಲರೂ ಒಟ್ಟಾಗಿ ಬೀಳುವ ಶಕ್ತಿ ಪ್ರಜಾಪ್ರಭುತ್ವಕ್ಕೆ ಮಾತ್ರ ಇದೆ ಎಂದು ಒಬಾಮಾ ಮಾರ್ಮಿಕವಾಗಿ ನುಡಿದರು.

Copyright � 2012 Kannadaprabha.com