Kannadaprabha The New Indian Express
ಜೈಲು ಸೇರಿದ್ದ ಲಾಲು ಪ್ರಸಾದ್ ಯಾದವ್ ಗೆ ತಿಂಗಳಿಗೆ 10 ಸಾವಿರ ಪಿಂಚಣಿ! 
By select 
11 Jan 2017 02:00:00 AM IST

ಪಾಟ್ನಾ: ಜೆಪಿ ಸೇನಾನಿ ಸಮ್ಮಾನ್ ಪಿಂಚಣಿಯಡಿ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ತಿಂಗಳಿಗೆ 10 ಸಾವಿರ ರುಪಾಯಿ ದೊರೆಯಲಿದೆ. ಈ ಪಿಂಚಣಿ ಪಡೆಯಲು ಲಾಲು ಪ್ರಸಾದ್ ಅವರು ಅರ್ಹರು ಎಂದು ಘೋಷಣೆ ಮಾಡಲಾಗಿದೆ.

ಲಾಲು ಪ್ರಸಾದ್ ಯಾದವ್ ಅವರ ಅರ್ಜಿಯನ್ನು ಮನ್ಯ ಮಾಡಲಾಗಿದ್ದು, ಜೆಪಿ ಸೇನಾನಿ ಸಮ್ಮಾನ್ ಪಿಂಚಣಿ ಯೋಜನೆ ಅಡಿ ಅವರಿಗೆ ತಿಂಗಳಿಗೆ ಹತ್ತು ಸಾವಿರ ದೊರೆಯಲಿದೆ ಎಂದು ಬಿಹಾರ ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಯಪ್ರಕಾಶ್ ನಾರಾಯಣ್ (ಜೆಪಿ) ಅವರು 1974ರಲ್ಲಿ ಸಂಪೂರ್ಣ ಕ್ರಾಂತಿ ಘೋಷಣೆ ಮಾಡಿದಾಗ ಲಾಲು ಪ್ರಸಾದ್ ಯಾದವ್ ಅವರು ವಿದ್ಯಾರ್ಥಿ ನಾಯಕರಾಗಿದ್ದರು. ಆ ಹೋರಾಟದಲ್ಲಿ ಪಾಲ್ಗೊಂಡು ಜೈಲು ಕೂಡ ಸೇರಿದ್ದರು. 2015ರಲ್ಲಿ ತಿದ್ದುಪಡಿಯಾಗಿ ಜಾರಿಗೆ ತಂದ ಜೆಪಿ ಸೇನಾನಿ ಸಮ್ಮಾನ್ ಪಿಂಚಣಿ ಯೋಜನೆ ಅಡಿ ಲಾಲು ಅರ್ಹರಾಗಿದ್ದಾರೆ.

ಈ ಯೋಜನೆ ಪ್ರಕಾರ, ಆ ಹೋರಾಟದಲ್ಲಿ ಭಾಗವಹಿಸಿ ಒಂದರಿಂದ ಆರು ತಿಂಗಳು ಜೈಲಿನಲ್ಲಿ ಇದ್ದವರಿಗೆ ಐದು ಸಾವಿರ ಹಾಗೂ ಆರು ತಿಂಗಳು ಮೇಲ್ಪಟ್ಟು ಜೈಲು ವಾಸ ಅನುಭವಿಸಿದವರಿಗೆ ಹತ್ತು ಸಾವಿರ ಪ್ರತಿ ತಿಂಗಳು ಪಿಂಚಣಿ ನೀಡಲಾಗುತ್ತದೆ. ಲಾಲು ಅವರು ಆರು ತಿಂಗಳಿಗಿಂತ ಹೆಚ್ಚು ಜೈಲುವಾಸ ಅನುಭವಿಸಿದ್ದರಿಂದ ಅವರಿಗೆ ಹತ್ತು ಸಾವಿರ ಪಿಂಚಣಿ ದೊರೆಯಲಿದೆ.

ಜೆಪಿ ಅನುಯಾಯಿಯಾಗಿದ್ದ ನಿತೀಶ್ ಕುಮಾರ್, ತಾವು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಅಂದರೆ 2009ರಲ್ಲಿ ಈ ಯೋಜನೆ ಜಾರಿಗೆ ತಂದಿದ್ದರು. 3,100 ಮಂದಿ ಈ ಯೋಜನೆ ಅಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದಾರೆ. ಅದರಲ್ಲಿ ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಸಹ ಇದ್ದಾರೆ. ಸ್ವತಃ ನಿತೀಶ್ ಕುಮಾರ್ ಈ ಪಿಂಚಣಿಗೆ ಅರ್ಹರಿದ್ದರೂ ಅವರು ಪಡೆಯುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Copyright � 2012 Kannadaprabha.com