Kannadaprabha The New Indian Express
ನಾವು ಆದೇಶ ಹೊರಡಿಸಿದ ನಂತರವೂ ನೀವು ಹೇಗೆ ಆಧಾರ್ ಕಡ್ಡಾಯಗೊಳಿಸುತ್ತೀರಾ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ 
By select 
21 Apr 2017 02:00:00 AM IST

ನವದೆಹಲಿ: ಎಲ್ಲಾ ಸರ್ಕಾರಿ ಸೇವೆಗಳಿಗೂ ಆಧಾರ ಕಡ್ಡಾಯಗೊಳಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಆಧಾರ ಕಡ್ಡಾಯವಲ್ಲ ಎಂದು ನಾವು ಆದೇಶ ಹೊರಡಿಸಿದ ನಂತರವೂ ನೀವೂ ಹೇಗೆ ಅಧಾರ್ ಕಡ್ಡಾಯಗೊಳಿಸುತ್ತೀರಾ? ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೂ ಆಧಾರ್ ಕಡ್ಡಾಯಗೊಳಿಸಿದ ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠ, ಆಧಾರ್ ಒಂದು ಆಯ್ಕೆ ಅಷ್ಟೇ. ಆದರೆ ಆದಾಯ ತೆರಿಗೆಯ ರಿಟರ್ನ್ಸ್ ಸಲ್ಲಿಕೆಗೆ ಆಧಾರ್‌ ಕಡ್ಡಾಯಗೊಳಿಸುವುದರ ಅಗತ್ಯವೇನಿದೆ ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಅಕ್ರಮವಾಗಿ ಶೆಲ್ ಕಂಪೆನಿಗಳಿಗೆ ಹಣ ವರ್ಗಾವಣೆ ಮಾಡಲು ಪ್ಯಾನ್ ಕಾರ್ಡುಗಳನ್ನು ಬಳಸಲಾಗುತ್ತಿರುವುದು ಪತ್ತೆಯಾಗಿದೆ. ಮತ್ತು ನಕಲಿ ಪಾನ್ ಕಾರ್ಡ್ ಹಾಗೂ ನಕಲಿ ಪಡಿತರ ಚೀಟಿಗಳನ್ನು ತಡೆಯಲು ಆಧಾರ್ ಕಡ್ಡಾಯಗೊಳಿಸಲಾಗುತ್ತಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ಕೋರ್ಟ್ ಗೆ ತಿಳಿಸಿದರು. 

ಆಧಾರ್‌ ಕಡ್ಡಾಯಗೊಳಿಸುವುದರಿಂದ ನಕಲಿ ಪಾನ್‌ ಕಾರ್ಡ್‌ ಮತ್ತು ನಕಲಿ ಪಡಿತರ ಚೀಟಿಗಳನ್ನು ನಿಯಂತ್ರಿಸಲು ಸಾಧ್ಯವೇ?, ನಕಲಿ ಹಾವಳಿ ತಡೆಗೆ ಇದೊಂದು ಪರಿಹಾರ ಕ್ರಮವೇ? ಆಧಾರ್‌ ಕಾರ್ಡ್‌ ಪಡೆಯುವಂತೆ ಕೇಂದ್ರ ಸರ್ಕಾರ ಜನರ ಮೇಲೆ ಒತ್ತಡ ಹೇರುತ್ತಿರುವುದು ಏಕೆ? ಎಂದು ಸುಪ್ರೀಂ ಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಪಾನ್‌ ಕಾರ್ಡ್‌ ಪಡೆಯಲು ಆಧಾರ್‌ ಕಡ್ಡಾಯಗೊಳಿಸುವುದರಿಂದ ನಕಲಿ ಪಾನ್‌ ಕಾರ್ಡ್‌ ಹಾವಳಿಯನ್ನು ಹೇಗೆ ನಿಯಂತ್ರಿಸಲು ಸಾಧ್ಯ ಎಂಬುದನ್ನು ಮುಂದಿನ ವಾರ ಸ್ಪಷ್ಟಪಡಿಸುವಂತೆ ಕೋರ್ಟ್‌ ಕೇಂದ್ರಕ್ಕೆ ಸೂಚಿಸಿದೆ.

Copyright � 2012 Kannadaprabha.com