Kannadaprabha The New Indian Express
ಬಿಹಾರದಲ್ಲಿ ಇಬ್ಬರು ದಲಿತ ಯುವಕರ ಕಗ್ಗೊಲೆ 
By select 
29 Jun 2017 02:00:00 AM IST

ಪಾಟ್ನಾ: ಕಳ್ಳರೆಂದು ಶಂಕಿಸಿ ಇಬ್ಬರು ದಲಿತ ಯುವಕರನ್ನು ಹತ್ಯೆಗೈದಿರುವ ಘಟನೆ ಬಿಹಾರದ ಗ್ರಾಮವೊಂದರಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ. 

ಬುಧವಾರ ತಡರಾತ್ರಿಯ ವೇಳೆಯಲ್ಲಿ ರೊಹ್ತಾಸ್ ಜಿಲ್ಲೆಯ ಪಾರ್ಸಿಯನ್ ಗ್ರಾಮದಲ್ಲಿ ಬಾಬನ್ ಮುಶಹಾರ್ ಮತ್ತು ಮುರಹು ಮುಶಹಾರ್ ಎಂಬ ಯುವಕರನ್ನು ಥಳಿಸಿ ಹತ್ಯೆ ಮಾಡಲಾಗಿದೆ. 

"ಗುರುತು ಪತ್ತೆಹಚ್ಚದ ಸುಮಾರು ೧೨ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ" ಎಂದು ಪೊಲೀಸ್ ಅಧಿಕಾರಿ ಸತೀಶ್ ಕುಮಾರ್ ಹೇಳಿದ್ದಾರೆ. 

ಇಬ್ಬರು ಯುವಕರು ಮನೆಯೊಳಗೆ ಹೊಕ್ಕಲು ಪ್ರಯತ್ನಿಸುತ್ತಿದ್ದಾಗ ಮನೆಯ ಮಾಲೀಕ ಗಟ್ಟಿಯಾಗಿ ಕೂಗಿಕೊಂಡಿದ್ದಾರೆ. ಆ ಸಮಯದಲ್ಲಿ ಗ್ರಾಮಸ್ಥರ ಗುಂಪೊಂದು ಯುವಕರನ್ನು ಹಿಡಿದಿದೆ ಎಂದು ಅಧಿಕಾರಿ ಹೇಳಿದ್ದಾರೆ. 

"ತಾವು ಮುಗ್ಧರು ಎಂದು ಎಷ್ಟೇ ಬೇಡಿಕೊಂಡರೂ, ಗ್ರಾಮಸ್ಥರು ಅವರನ್ನು ಮನಬಂದಂತೆ ಥಳಿಸಿ ಸಾವಿಗೆ ಕಾರಣರಾಗಿದ್ದಾರೆ" ಎಂದು ಕೂಡ ಅವರು ತಿಳಿಸಿದ್ದಾರೆ. 

ಸಾಸಾರಾಮ್ ಪಟ್ಟಣಕ್ಕೆ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಕೂಡ ಕುಮಾರ್ ಹೇಳಿದ್ದಾರೆ. 

ಕಳೆದ ಆರು ತಿಂಗಳಲ್ಲಿ ಹೀಗೆ ಥಳಿಸಿ ಹತ್ಯೆ ಮಾಡಿರುವ ೧೨ ಘಂಟನೆಗಳು ಬಿಹಾರದಲ್ಲಿ ವರದಿಯಾಗಿವೆ.

Copyright � 2012 Kannadaprabha.com