Kannadaprabha The New Indian Express
3ನೇ ಟೆಸ್ಟ್: ಶಿಖರ್ ಧವನ್ ಶತಕ, ದಿನದಂತ್ಯಕ್ಕೆ ಭಾರತ 329/6 
By select 
12 Aug 2017 02:00:00 AM IST

ಪಲ್ಲೆಕಿಲೆ: ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಶಿಖರ್ ಧವನ್ ಅವರ ಆಕರ್ಷಕ ಶತಕ(119) ಹಾಗೂ ಕೆಎಲ್ ರಾಹುಲ್ ಅವರ ಅರ್ಧ ಶತಕ(85)ದ ನೆರವಿನೊಂದಿಗೆ ಭಾರತ ದಿನದ ಅಂತ್ಯಕ್ಕೆ ನಿಗದಿತ 90 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 329ರನ್ ಸೇರಿಸಿದೆ.

ಪಲ್ಲೆಕಿಲೆ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ಜೋಡಿ 188 ರನ್ ಗಳ ಭರ್ಜರಿ ಜತೆಯಾಟ ನೀಡಿತು. 

ಉತ್ತಮವಾಗಿ ಆಡುತ್ತಿದ್ದ ಕೆಎಲ್ ರಾಹುಲ್ 85 ರನ್ ಗಳಿಸಿದ್ದಾಗ ಪುಷ್ಪಕುಮಾರ್ ಎಸೆತದಲ್ಲಿ ಕರುಣರತ್ನೆಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಶಿಖರ್ ಧವನ್ 123 ಎಸೆತಗಳನ್ನು ಎದುರಿಸಿ 17 ಬೌಂಡರಿಗಳಿಂದ ಒಟ್ಟು 119 ರನ್ ಗಳಿಸಿ ಔಟ್ ಆದರು.

ಚೇತೇಶ್ವರ ಪೂಜಾರ 8, ಅಜಿಂಕ್ಯ ರಹಾನೆ 17, ರವಿಚಂದ್ರನ್ ಅಶ್ವಿನ್ 31 ರನ್ ಗಳಿಸಿ ಔಟಾಗಿದ್ದು, ವೃದ್ಧಿಮಾನ್ ಸಹಾ 13ರನ್ ಹಾಗೂ ಹಾರ್ದಿಕ್ ಪಾಂಡ್ಯ 1ರನ್ ಗಳಿಸಿ ದ್ವಿತೀಯ ದಿನಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 

ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಅದಾಗಲೇ 2 ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಇನ್ನು ಮೂರನೇ ಟೆಸ್ಟ್ ಪಂದ್ಯ ಭಾರತ ಗೆದ್ದರೆ ವಿದೇಶಿ ನೆಲದಲ್ಲಿ 82 ವರ್ಷಗಳ ತನ್ನ ಟೆಸ್ಟ್ ಇತಿಹಾಸದಲ್ಲಿ ಮೊಟ್ಟ ಮೊದಲ ಕ್ಲೀನ್ ಸ್ವೀಪ್ ಸಾಧನೆ ಮಾಡಲಿದೆ. 

Copyright � 2012 Kannadaprabha.com