Kannadaprabha The New Indian Express
ಅಹಲ್ಯಾ ವೃತ್ತಾಂತ: ಬಹು ಮಂದಿ ತಿಳಿದಿರುವಂತೆ ಇಂದ್ರ ಮೋಸ ಮಾಡಿದನೆ ? ಅಹಲ್ಯೆ ಮುಗ್ಧೆಯೇ ? 
By Dr. Pavagada Prakash Rao 
03 Oct 2017 02:00:00 AM IST

"ಗೌತಮ ಮಹರ್ಷಿಗಳ ಪುತ್ರರು ಬಂದಿದ್ದಾರೆ. ಒಳಗೆ ಕಳಿಸಲೇ? "ದ್ವಾರಪಾಲಕ ಕೇಳಿದ; ಜನಕ ಏರ್ಪಡಿಸಿದ ಅತಿಥಿಗೃಹದಲ್ಲಿದ್ದ ವಿಶ್ವಮಿತ್ರರನ್ನು. "ಕಳಿಸು, ಕಳಿಸು" ಎಂದರು ಉತ್ಸುಕರಾಗಿ. ಮೊನ್ನೆ ತಾನೇ ಅವರ ಆಶ್ರಮದಲ್ಲಿ ಗೌತಮರನ್ನು ಕಂಡು ಬಂದಿದ್ದರವರು. ಅದೊಂದು ಅಪೂರ್ವ ಘಟನೆ. 

ನೆನಪಲ್ಲಿ ಆ ದಿನ ಮೂಡುವ ಹೊತ್ತಿಗೆ, ಶತಾನಂದರು ಬಂದು ಅಭಿವಾದನ ಮಾಡಿದರು; ಪ್ರವರ ಹೇಳಿಕೊಂಡು. ಅಲ್ಲಿಗೆ ಬಂದ ರಾಮ-ಲಕ್ಷ್ಮಣರೂ ಶತಾನಂದರಿಗೆ ವಂದಿಸಿದರು. ಸಭೆಯಲ್ಲಿ ಶ್ರೀರಾಮರು ಮೆರೆದ ಅದ್ಭುತವನ್ನು ಕಂಡು ರೋಮಾಂಚಿತರಾಗಿದ್ದ ಶತಾನಂದರು, " ಶ್ರೀರಾಮ, ಆ ಧನುಸ್ಸನ್ನು ಎತ್ತಲೇ ಯಾರಿಗೂ ಸಾಧ್ಯವಾಗಿರಲಿಲ್ಲ. ಎಷ್ಟೋ ವರ್ಷಗಳಿಂದ ಅದನ್ನು ನೋಡುತ್ತಿದ್ದೇವೆ. ಚಪಲಕ್ಕೆ ನಾನೇ ಒಮ್ಮೆ ಅದನ್ನು ಯಾರಿಗೂ ಗೊತ್ತಿಲ್ಲದಂತೆ ಎತ್ತಲು ಪ್ರಯತ್ನಿಸಿದ್ದೂ ನಿಜ. ಎರಡು ಕೈಗಳಿಂದ ಅಲ್ಲಾಡಿಸಿದರೂ ಅದು ಮುಳ್ಳುಮೊನೆಯಷ್ಟೂ ಅಲುಗಲಿಲ್ಲ. ಅದೆಂತು ಅಷ್ಟು ಸುಲಭವಾಗಿ ಎತ್ತಿಬಿಟ್ಟೆ? ಅಷ್ಟೇ ಅಲ್ಲ, ಹೆದೆ ಏರಿಸಿಬಿಟ್ಟೆ? "ಏನು ಹೇಳುವುದೆಂದು ಶ್ರೀರಾಮರಿಗೆ ಗೊತ್ತಾಗಲಿಲ್ಲ. ಈಶ್ವರನಿಗೂ ತನಗೂ ನಡೆದ ಸಂಭಾಷಣೆ ಹೇಳೋಣವೇ? ಅದು ದೈವರಹಸ್ಯ. ಹೇಳದಿದ್ದರೆ ಸುಳ್ಳು ಹೇಳಿದಂತಾಗುತ್ತದೆ. ಯೋಚಿಸುತ್ತಿದ್ದಾಗಲೇ ಶತಾನಂದರು ಮತ್ತೊಂದು ವಿಷಯಕ್ಕೆ ಹೊರಳಿದರು. "ಶ್ರೀರಾಮ, ನಿನ್ನ ದಯೆಯಿಂದ ನನ್ನ ತಾಯಿಗೆ ಪುನರ್ಜನ್ಮ ಬಂದಂತಾಯಿತು. ನನ್ನ ತಂದೆ-ತಾಯಿಗಳನ್ನು ಒಂದಾಗಿಸಿದ ಪುಣ್ಯ ನಿನಗೆ ಬಂದಿದೆ. "ಕತ್ತು ಹೊರಳಿಸಿ, ವಿಶ್ವಮಿತ್ರರ ಕಡೆ ನೋಡುತ್ತಾ ಶತಾನಂದರು ಮುಂದುವರಿಸಿದರು.  ವಿಶ್ವಮಿತ್ರರೇ, ಯಾರು ಯಾರದೋ ಬಾಯಿಂದ ಈ ಕಥೆ ಕೇಳಿದ್ದೇನೆ. ನೀವು ಪ್ರತ್ಯಕ್ಷ ಸಾಕ್ಷಿ. ದಯವಿಟ್ಟು ಏನಾಯಿತೆಂದು ಹೇಳುವಿರಾ? ಸಂಪೂರ್ಣ ವಿಷಯ ತಿಳಿದು ತಂದೆ-ತಾಯಿಗಳನ್ನು ನೋಡಲು ಹೋಗಬೇಕೆಂದಿರುವೆ.  

ಇನ್ನೇನು ಮಿಥಿಲೆಯ ಹತ್ತಿರ ಬರುತ್ತಿದ್ದಾರೆ. ಹೊರ ಭಾಗದಲ್ಲಿ ಒಂದು ತೋಟ. ಯಾರೂ ಓಡಾಡುತ್ತಿರಲಿಲ್ಲ. ಏನೋ ಶೋಕ ಮೂರ್ತಿಯಂತೆ, ಹಾಳು-ಹಾಳು ಸುರಿಯುತ್ತಿರುವಂತೆ, ನಿಶ್ಶಬ್ದವಾಗಿ, ಆದರೂ ಆ ಮೌನದಲ್ಲಿಯೂ ಏನೋ ಒಂದು ವಿಶೇಷತೆ, ಏನೋ ಗಾಂಭೀರ್ಯ, ಏನೋ ದಿವ್ಯತೆ. ಶ್ರೀರಾಮರು ನಿಂತರು. ಅವರ ಮನಸ್ಸನ್ನು ಆ ಉದ್ಯಾನವನ ಕರೆಯುತ್ತಿದೆ. ಯಾರೋ ಒಳಗಿನಿಂದ ದೀನರಾಗಿ ಆಹ್ವಾನಿಸುತ್ತಿದ್ದಾರೆ. ಆದರೆ ಕಾಣುತ್ತಿಲ್ಲ ! ಗುರುಗಳೆಡೆ ತಿರುಗಿ ಕೇಳಿದರು; " ಯಾವುದೀ ಆಶ್ರಮ? ಯಾವ ಮುನಿಗಳದು? ಅತ್ಯಂತ ಹಳೆಯದಾಗಿ ಕಾಣುತ್ತಿದೆ! ಆದರೆ ತುಂಬ ಸುಂದರವಾಗಿದೆ! ಯಾರೂ ಇದನ್ನು ನೋಡಿಕೊಳ್ಳದಿದ್ದರೂ ತುಂಬ ಅಚ್ಚುಕಟ್ಟಾಗಿದೆ! "
(ಮಿಥಿಲೋಪನೇ ತತ್ರ ಆಶ್ರಮಂ ದೃಷ್ಯ ರಾಘವಃ
ಪುರಾಣಂ ನಿರ್ಜನಂ ರಮ್ಯಂ ಪಪ್ರಚ್ಛ ಮುನಿಪುಂಗವಂ)
ನಿಟ್ಟುಸಿರಿಟ್ಟು ವಿಶ್ವಮಿತ್ರರು ಹೇಳಿದರು; "ಅಯ್ಯೋ, ಅದೊಂದು ದೊಡ್ಡ ವಿಷಾದ ಕಥೆ. ಇಂದ್ರನಿದ್ದಾನಲ್ಲ, ಅವನನ್ನು ಏನೆಂದು ಅರ್ಥೈಸುವುದೆಂದೇ ನನಗೆ ಗೊತ್ತಿಲ್ಲ. ಯಾರೇ ತಪಸ್ಸು ಮಾಡಿದರೂ ಅವರನ್ನು ಕೆಡಿಸಲು ನೋಡುತ್ತಾನೆ. ನನಗೂ ಹೀಗೇ ಮಾಡಿದ್ದ. ಏನೋ ಒಂದು ನೆವ, ಎಷ್ಟೋ ಬಾರಿ ತೊಂದರೆ ಕೊಟ್ಟ ನನಗೆ. ಆದರೆ ಕೊನೆಗೆ ಬ್ರಹ್ಮ ಬೇರೆ. ತಪಸ್ಸು ಸುಲಭವಾಗಿಬಿಟ್ಟರೆ ಎಲ್ಲರೂ ನುಗ್ಗಿಬಿಡುತ್ತಾರೆ ಸ್ವರ್ಗಕ್ಕೆ. ಹೀಗಾಗಿ ಇಂದ್ರನದು ಎಲ್ಲಾ ಪರೀಕ್ಷೆಯಂತೆ. ಇಂದ್ರನ ಪರೀಕ್ಷೆಗಳಲ್ಲಿ ಗೆದ್ದವರೇ ಇಂದ್ರಿಯವನ್ನು ಗೆಲ್ಲುವರಂತೆ. ಬಿಡು, ಅದೇನೇ ಇರಲಿ, ಇಲ್ಲೂ ಹಾಗೇ ನಡೆಯಿತು. ಗೌತಮರು ಮಹಾ ಋಷಿಗಳು, ಮಹಾ ತಪಸ್ವಿಗಳು. ಮಡದಿಯಲ್ಲಿ ಮೋಹ. ಆಕೆಯೋ, ಅಹಲ್ಯೆ. ಹಲ್ ಎಂದರೆ ದೋಷ. ಅಹಲ್ಯೆ-ದೋಷರಹಿತೆ.

ಅಕಳಂಕ ಸುಂದರಿ. ಮದುವೆಯಾದಾಗ ಇದ್ದ ಆಸಕ್ತಿ ಋಷಿಗಳಿಗೆ ಅನಂತರ ಕಡಿಮೆಯಾಯಿತೆಂದು ಕಾಣುತ್ತದೆ. ಅವರಿಗೆ ಸಹಜವಾದದ್ದು ತಪಸ್ಸು, ಅಧ್ಯಯನ, ಯೋಗ, ಮೌನ... ಇದು ಹೆಚ್ಚಾಗಿಬಿಟ್ಟಿತು. ಇದಕ್ಕೆ ಬಹುಶಃ ಅವರ ಪತ್ನಿ ಸಿದ್ಧರಿರಲಿಲ್ಲ ಎಂದು ಕಾಣುತ್ತದೆ. ಇರಲಿ, ಗೌತಮರು ನನಗಿನ್ನ ದೊಡ್ಡವರು, ಅವರ ಬಗ್ಗೆ ನಾನು ಹೆಚ್ಚು ಹೇಳಬಾರದು. ಆದರೆ ಒಂದರ್ಥದಲ್ಲಿ ಅವರು ಹೆಂಡತಿಯನ್ನು ಅಲಕ್ಷಿಸಿದರೇನೋ. ಅವರಿಗೆ ಒಬ್ಬ ಮಗ ಇದ್ದ, ಶತಾನಂದ. ಅವನಿಗಿನ್ನೂ ಆಗ ಎರಡು ವರ್ಷ. ಶೃಂಗಾರದ ಬಾಯಾರಿಕೆ ತೀರದ ಹೆಂಡತಿ, ಅಲೌಕಿಕದ ಕಡೆ ಆಕರ್ಷಿತನಾದ ಗಂಡ.

ಸಮಯ ಕಾಯುತ್ತಿದ್ದ ಇಂದ್ರ. ಹೇಗಾದರೂ ಮಾಡಿ ಗೌತಮರ ತಪಃಶಕ್ತಿಯನ್ನು ತಗ್ಗಿಸಬೇಕು. ಅವರನ್ನು ತಪೋ ಭ್ರಷ್ಟರನ್ನಾಗಿಸಬೇಕು. ಒಟ್ಟಿಗೇ ಅಹಲ್ಯೆಯನ್ನು ಕಂಡು ಇಂದ್ರನೂ ಜೊಲ್ಲು ಸುರಿಸಿರಬೇಕು. ಒಂದು ದಿನ ಗೌತಮರು ಸ್ನಾನಕ್ಕೆ ಹೋಗಿದ್ದಾಗ ಮುನಿ ವೇಷ ಧರಿಸಿ ಅಹಲ್ಯೆ ಬಳಿಗೆ ಬಂದು ತನ್ನ ಆಶೆಯನ್ನು ಹೇಳಿಕೊಂಡ.
(ಮುನಿ ವೇಷ ಧರೋ ಅಹಲ್ಯಾಂ ಇದಂ ವಚನಂ ಅಬ್ರವೀತ್)
ಗಂಡ ನೋಡಿದರೆ ಮೂರು ಹೊತ್ತೂ ಮೂಗು ಹಿಡಿದು ಕೂಡುತ್ತಾನೆ. ಹೆಂಡತಿ ಪಕ್ಕದಲ್ಲಿದ್ದರೂ ಕೇವಲ ತಾಳೇಗರಿ ತಿರುಗಿಸುತ್ತಾನೆಯೇ ವಿನಃ, ತನ್ನ ಕಡೆಗೆ ತಿರುಗಿಕೊಳ್ಳುವುದಿಲ್ಲ. ಮಗು ಹುಟ್ಟುತ್ತಿದ್ದಂತೆಯೇ ಇಷ್ಟು ನಿರಾಸಕ್ತಿಯೇ? ಇಲ್ಲಿ ನೋಡಿದರೆ ಇಂದ್ರ; ಮಹೇಂದ್ರ; ಸುರೇಂದ್ರ; ದೇವತೆಗಳಿಗೆಲ್ಲ ನಾಯಕ; ಸ್ವರ್ಗ ರಾಜ; ಅಮೃತ ಕುಡಿಯುವ ನಿತ್ಯ ಜವ್ವನಿಗ. ಈತ ತನಗಾಗಿ ಬೇಡುತ್ತಿದ್ದಾನೆ. ತನಗೂ ಬೇಕೆನ್ನಿಸುತ್ತಿದೆ. ಏಕಾಗಬಾರದು? ಕ್ಷಣ ಕಾಲ ಮನಸ್ಸು ಚಂಚಲವಾಗಿ ಬುದ್ಧಿ ಕೆಟ್ಟು ಮಂಚದ ಕಡೆಗೆ ಹೊರಟಳು. 
(ಮತಿಂ ಚಕಾರ ದುರ್ಮೇಧಾ ದೇವರಾಜ ಕುತೂಹಲಾತ್)
ಇನ್ನೂ ಏನೋ ಇದೆ, ಇದೆ, ಇದೆ, ಎಂದುಕೊಳ್ಳುವುದರೊಳಗೇ ಎಲ್ಲಾ ಆಗಿ ಹೋಯಿತು. ತನಗೆ ತೃಪ್ತಿಯಾದದ್ದೇನೋ ನಿಜ, ಆದರೆ... ಆದರೆ ಹೆದರಿಕೆ ಹುಟ್ಟಿಬಿಟ್ಟಿತು. ಗಂಡನಿಗೆ ಗೊತ್ತಾದರೇನು ಗತಿ? ತಾನು ತಪ್ಪು ಮಾಡಿಬಿಟ್ಟೆ. ಆದರೆ ಏನು ಮಾಡುವುದು? ಗಂಡ ಬರುವುದರೊಳಗೆ ಇಂದ್ರನನ್ನು ಕಳಿಸಬೇಕು. "ದೇವರಾಜ, ನೀನು ಕೊಟ್ಟ ಸುಖಕ್ಕೆ ನಾನು ಚಿರ ಋಣಿ. ಆದರೆ ದಯವಿಟ್ಟು ಬೇಗ ಹೊರಡು. ಯಜಮಾನರು ಬಂದರೆ ನನಗೂ ಕಷ್ಟ, ನಿನಗೂ ಕಷ್ಟ. ನಮ್ಮಿಬ್ಬರನ್ನೂ ರಕ್ಷಿಸಬೇಕಾದ ಜವಾಬ್ದಾರಿ ಈಗ ನಿನ್ನದು." 
(ಕೃತಾರ್ಥೋಸ್ಮಿ ಸುರಶ್ರೇಷ್ಠ ಗಚ್ಛ ಶೀಘ್ರಂ ಇತಃ ಪ್ರಭೋ
ಆತ್ಮಾನಾಂ ಮಾಂ ಚ ದೇವೇಶ ಸರ್ವದಾ ರಕ್ಷಮಾನದಾ)
ಇಂದ್ರನ ನಗುವಿನಲ್ಲಿ ಏನೋ ರಹಸ್ಯ ಅಡಗಿರುವಂತೆ ಕಂಡಿತು. ಮಾಯವಾಗುವ ಶಕ್ತಿ ಇಂದ್ರನಿಗಿದೆಯಂತೆ . ಆದರೆ ನಿಧಾನ ಮಾಡುತ್ತಿದ್ದಾನೆ. "ತುಂಬಾ ಸಂತೋಷವಾಯಿತು , ಈಗ ಹೊರಟೆ. "
                 (ಸುಶ್ರೋಣೀ ಪರಿತುಷ್ಟೋಸ್ಮಿ ಗಮಿಶ್ಯಾಮಿ ಯಥಾ ಗತಂ)
ಛೆ! ತನ್ನ ಒದ್ದಾಟ ಇವನಿಗೇಕೆ ಅರ್ಥವಾಗುತ್ತಿಲ್ಲ? ಏಕಿಷ್ಟು ತಾಮಸ? ಛೆ ಛೆ! ನಾನೇಕೆ ಬಲಿಯಾದೆ? ಏಕೆ ಅವನು ಕೇಳುತ್ತಿದ್ದಂತೆ ಒಪ್ಪಿಕೊಂಡೆ? ಇವನೋ ತಲೆಬಾಗಿಲು ಕಡೆ ಹೋಗುತ್ತಿದ್ದಾನೆ. ಹಿತ್ತಲ ಬಾಗಿಲಿನಿಂದ ಬಂದ ಇಂದ್ರ ಈಗೇಕೆ ಹಾಗೆ ಹೋಗದೇ ಹೆಬ್ಬಾಗಿಲ ಕಡೆ ಹೋಗುತ್ತಿದ್ದಾನೆ? (ಮುಂದುವರೆಯುವುದು....) 

-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

Copyright � 2012 Kannadaprabha.com