Kannadaprabha The New Indian Express
ಪಿಪಿಎಫ್ ಮತ್ತು ಪೋಸ್ಟ್ ಆಫೀಸ್ ಡೆಪಾಸಿಟ್ ಗೂ ಆಧಾರ್ ಕಡ್ಡಾಯ! 
By select 
06 Oct 2017 02:00:00 AM IST

ನವದೆಹಲಿ: ಸರ್ಕಾರಿ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಇತ್ತ ಕೇಂದ್ರ ಸರ್ಕಾರ ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ)ಮತ್ತು  ಪೋಸ್ಟ್ ಆಫೀಸ್ ಡೆಪಾಸಿಟ್ ಗಳಿಗೂ ಆಧಾರ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ)ಮತ್ತು ಪೋಸ್ಟ್ ಆಫೀಸ್ ಡೆಪಾಸಿಟ್ ಗಳಿಗೂ ಆಧಾರ್ ಕಡ್ಡಾಯಗೊಳಿಸಲು ಕೇಂದ್ರ ವಿತ್ತ ಇಲಾಖೆ ನಾಲ್ಕು ಬಾರಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದು, ಸೆಪ್ಟೆಂಬರ್ 29ರಂದೇ ಅಧಿಸೂಚನೆ  ಹೊರಡಿಸಿತ್ತು ಎಂದು ತಿಳಿದುಬಂದಿದೆ. ಪಿಪಿಎಫ್ ಮತ್ತು ಪೋಸ್ಟ್ ಆಫೀಸ್ ಡೆಪಾಸಿಟ್ ಮಾತ್ರವಲ್ಲದೇ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಮತ್ತು ಕಿಸಾನ್ ವಿಕಾಸ್ ಪತ್ರ ಯೋಜನೆಗೂ ಆಧಾರ್ ಕಾರ್ಡ್  ಕಡ್ಡಾಯಗೊಳಿಸಲಾಗಿದೆ. ಈ ಯೋಜನೆಗಳಿಗೆ ಹೊಸದಾಗಿ ಸೇರ್ಪಡೆಯಾಗುವವರಿಗೆ ಮಾತ್ರವಲ್ಲದೇ ಹಾಲಿ ಇರುವ ಗ್ರಾಹಕರೂ ಕೂಡ ಆಧಾರ್ ಕಾರ್ಡ್ ನಂಬರ್ ಸಲ್ಲಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ಒಂದು ವೇಳೆ ಆಧಾರ್ ಕಾರ್ಡ್ ಹೊಂದಿರದವರು ಅಥವಾ ಆಧಾರ್ ಕಾರ್ಡ್ ಗೆ ಅರ್ಜಿ ಹಾಕಿರುವವರು ಎನ್ ರೋಲ್ ಮೆಂಟ್ ನಕಲು ಪ್ರತಿಯನ್ನು ಸಲ್ಲಿಕೆ ಮಾಡಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇನ್ನು ಹಾಲಿ  ಇರುವ ಗ್ರಾಹಕರು ಆಧಾರ್ ಕಾರ್ಡ್ ಸಲ್ಲಿಕೆಗೆ ಡಿಸೆಂಬರ್ ವರೆಗೂ ಅಂತಿಮ ಗಡುವು ನೀಡಲಾಗಿದ್ದು, ಡಿಸೆಂಬರ್ 31ರ ಒಳಗೆ ಆಧಾರ್ ಕಾರ್ಡ್ ನಂಬರ್ ಸಲ್ಲಿಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಈ ಹಿಂದೆ ಬ್ಯಾಂಕ್ ಖಾತೆ, ಮೊಬೈಲ್ ನಂಬರ್ ಸೇರಿದಂತೆ ಕೆಲ ಅತ್ಯಗತ್ಯ ಸರ್ಕಾರಿ ಸೇವೆಗಳಿಗೆ ಆಧಾರ್ ಕಡ್ಡಾಯಗೊಳಿಸಲಾಗಿತ್ತು. ಅಕ್ರಮ ಆಸ್ತಿ ಪತ್ತೆ ಮತ್ತು  ಕಪ್ಪುಹಣವನ್ನು ಜಾಲಾಡುವ ಉದ್ದೇಶದಿಂದ ಆಧಾರ್  ಕಡ್ಡಾಯಗೊಳಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.

Copyright � 2012 Kannadaprabha.com