Kannadaprabha The New Indian Express
159 ಗಂಟೆಯಷ್ಟು ಓವರ್ ಟೈಮ್ ಕೆಲಸದಿಂದ ಜಪಾನ್ ಪತ್ರಕರ್ತೆ ಸಾವು 
By select 
06 Oct 2017 02:00:00 AM IST

ಟೋಕಿಯೋ: ಅನಿವಾರ್ಯತೆ ಇದ್ದಾಗ ಕಚೇರಿಯಲ್ಲಿ ಹೆಚ್ಚುವರಿ ಸಮಯ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂತೆ ಜಪಾನ್ ನಲ್ಲಿ ಪತ್ರಕರ್ತೆಯೊಬ್ಬಳು ಹೆಚ್ಚುವರಿ ಸಮಯ ಕೆಲಸ ಮಾಡಿದ್ದರಿಂದ ಹೃದಯಾಘಾತವಾಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. 

2013ರ ಜುಲೈನಲ್ಲಿ ಈ ಘಟನೆ ನಡೆದಿದ್ದು ಇದೀಗ ಪ್ರಕರಣ ಮರುಜೀವ ಪಡೆದಿದೆ. 31 ವರ್ಷದ ಪತ್ರಕರ್ತೆ ಮೀವಾ ಸಾಡೋ ಅವರು ಜಪಾನ್ ನ ಎನ್ ಎಚ್ ಕೆ ಸುದ್ದಿ ವಾಹಿನಿಯಲ್ಲಿ ರಾಜಕೀಯ ಕ್ಷೇತ್ರದ ಕುರಿತಾಗಿ ವರದಿ ಮಾಡುತ್ತಿದ್ದರು. ಆಕೆ 2013ರಲ್ಲಿ ತಮ್ಮ ಮನೆಯ ಹಾಸಿಗೆಯಲ್ಲಿ ಶವವಾಗಿ ಮಲಗಿದ್ದಳು. ಕೈಯಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡೇ ಶವವಾಗಿದ್ದಳು. 

ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಒಂದು ವರ್ಷದ ಬಳಿಕ ಸಾವಿಗೆ ಏನು ಕಾರಣ ಎಂದು ಪತ್ತೆ ಮಾಡಿದ್ದರು. ಮೀವಾ ಸಾಡೋ ಸಾಯುವ ಜುಲೈ ತಿಂಗಳಲ್ಲಿ ವೀಕ್ ಆಫ್ ತೆಗೆದುಕೊಂಡಿದ್ದು ಕೇವಲ 2 ದಿನ ಮಾತ್ರ. ಅಷ್ಟೇ ಅಲ್ಲ, ಆ ತಿಂಗಳು 159 ಗಂಟೆಯಷ್ಟು ಹೆಚ್ಚು ಸಮಯ ಕೆಲಸ ಮಾಡಿದ್ದಳಂತೆ ಇದರಿಂದಾಗಿ ಆಕೆಗೆ ಹೃದಯಾಘಾತವಾಗಿತ್ತು. ಆದರೆ ಈ ವಿಚಾರವನ್ನು ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಯದಂತೆ ರಹಸ್ಯವಾಗಿಟ್ಟಿದ್ದರು. 

2013ರಲ್ಲಿ ಜಪಾನ್ ನಲ್ಲಿ ಬಹಳ ಹೈಪ್ರೊಫೈಲ್ ಚುನಾವಣೆಗಳಿದ್ದವು. ಜೂನ್ ತಿಂಗಳಲ್ಲಿ ಟೋಕಿಯೋ ರಾಜ್ಯದ ವಿಧಾನಸಭೆ ಚುನಾವಣೆ, ಜುಲೈನಲ್ಲಿ ರಾಜ್ಯಸಭಾ ಚುನಾವಣೆಗಳಿದ್ದವು. ರಾಜಕೀಯ ಕ್ಷೇತ್ರದ ವರದಿಗಾರ್ತಿಯಾಗಿದ್ದರಿಂದ ಮೀವಾ ಬಿಡುವಿಲ್ಲದೇ ಕೆಲಸ ಮಾಡುವಂತಾಗಿತ್ತು. ಚುನಾವಣೆ ಮುಗಿದ ಮೂರನೇ ದಿನಕ್ಕೆ ಮೀವಾ ಇಹಲೋಕ ತ್ಯಜಿಸಿದ್ದಳು. 

Copyright � 2012 Kannadaprabha.com