Kannadaprabha The New Indian Express
ಮಾಜಿ ಸಿಎಂ ನಾರಾಯಣ ರಾಣೆಯ ಮಹಾರಾಷ್ಟ್ರ ಸ್ವಾಭಿಮಾನ್ ಪಕ್ಷ ಎನ್ ಡಿಎಗೆ ಸೇರ್ಪಡೆ 
By select 
06 Oct 2017 02:00:00 AM IST

ಮುಂಬೈ: ಇತ್ತೀಚಿಗಷ್ಟೇ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರು, ತಮ್ಮ ರಾಜಕೀಯ ಪಕ್ಷ ಮಹಾರಾಷ್ಟ್ರ ಸ್ವಾಭಿಮಾನ್ ಪಕ್ಷ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೇರಲಿದೆ ಎಂದು ಶುಕ್ರವಾರ ಹೇಳಿದ್ದಾರೆ.

ರಾಜ್ಯದ ಮತ್ತು ಕೊಂಕಣ ಪ್ರದೇಶದ ಅಭಿವೃದ್ಧಿಗಾಗಿ ನಾನು ಎನ್ ಡಿಎದ ಭಾಗವಾಗಲು ನಿರ್ಧರಿಸಿದ್ದೇನೆ ಎಂದು ರಾಣೆ ವರದಿಗಾರರಿಗೆ ತಿಳಿಸಿದ್ದಾರೆ.

ಇದೇ ವೇಳೆ ತಾವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ ರಾಣೆ, 2019ರ ಲೋಕಸಭೆ ಚುನಾವಣೆವರೆಗೆ ರಾಜ್ಯದಲ್ಲೇ ಉಳಿದುಕೊಳ್ಳುವುದಾಗಿ ಹೇಳುವ ಮೂಲಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

ಕಾಂಗ್ರೆಸ್ ನಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದ್ದು, ಮುಖ್ಯಮಂತ್ರಿ ಸ್ಥಾನವನ್ನು ನೀಡುತ್ತೇವೆ ಎಂದು ಹೈಕಮಾಂಡ್ ಈ ಹಿಂದೆ ಮಾತು ಕೊಟ್ಟಿತ್ತು. ಆದರೆ ಪಕ್ಷ ತನಗೆ ಅನ್ಯಾಯವನ್ನು ಮಾಡುತ್ತಿದ್ದು, ನನ್ನ ಬೆಂಬಲಿಗರಿಗೂ ಸೂಕ್ತ ಸ್ಥಾನಮಾನ ನೀಡುತ್ತಿಲ್ಲ ಅದರಿಂದಲೇ ತಾನು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ರಾಣೆ ಈ ಹಿಂದೆ ಆರೋಪಿಸಿದ್ದರು. 

2005ರಲ್ಲಿ ನಾನು ಶಿವಸೇನೆ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ವೇಳೆ ಆರು ತಿಂಗಳಿನಲ್ಲಿ ಸಿಎಂ ಮಾಡುವುದಾಗಿ ಆಶ್ವಾಸನೆಯನ್ನು ನೀಡಿದ್ದರು. ಆದರೆ 12 ವರ್ಷಗಳ ಕಾಲ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದರೂ, ತನಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ. ಅದರಿಂದ ಕಾಂಗ್ರೆಸ್ ಪಕ್ಷದಿಂದ ಹೊರ ನಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

1999ರಲ್ಲಿ 7 ತಿಂಗಳ ಕಾಲ ಶಿವಸೇನೆಯಿಂದ ಮುಖ್ಯಮಂತ್ರಿಯಾಗಿದ್ದ ನಾರಾಯಣ ರಾಣೆಯವರು 2005ರಲ್ಲಿ ಶಿವಸೇನೆಯಲ್ಲಿ ಉದ್ಧವ್ ಠಾಕ್ರೆ ಅವರಿಗೆ ಪ್ರಾಮುಖ್ಯತೆ ಜಾಸ್ತಿ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಬಾಳಾ ಠಾಕ್ರೆಯವರು ನಾರಾಯಣ ರಾಣೆ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಬಳಿಕ ರಾಣೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

Copyright � 2012 Kannadaprabha.com