ನವದೆಹಲಿ: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತೀವ್ರ ಗದ್ದಲದ ನಡುವೆಯೇ ತ್ರಿವಳಿ ತಲಾಕ್ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದರು.
ವಿಪಕ್ಷಗಳು ಮಹಾರಾಷ್ಟ್ರದಲ್ಲಿ ಮರಾಠ ಮತ್ತು ದಲಿತ ಸಮುದಾಯದ ನಡುವೆ ನಡೆದ ಸಂಘರ್ಷದ ಕುರಿತು ರಾಜ್ಯಸಭೆ ಧ್ವನಿ ಎತ್ತಿದ್ದರು. ಆಗ ಗದ್ದಲ ಆರಂಭವಾಯಿತು ಇದರ ನಡುವೆಯೇ ರವಿಶಂಕರ್ ಪ್ರಸಾದ್ ತ್ರಿವಳಿ ತಲಾಕ್ ಮಸೂದೆ ಮಂಡಿಸಿದರು.
ಈ ವೇಳೆ ವಿಪಕ್ಷಗಳು ತೀವ್ರ ಗದ್ದಲ ಎಬ್ಬಿಸಿದ್ದು ಈ ವೇಳೆ ಮಾತನಾಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತ್ರಿವಳಿ ತಲಾಕ್ ಮಸೂದೆ ಕುರಿತು ಚರ್ಚೆಯನ್ನು ಹಳಿ ತಪ್ಪಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ತಿದ್ದುಪಡಿ ಮಾಡಲು ಕಾಂಗ್ರೆಸ್ ಮನವಿ ಸಲ್ಲಿಸಿದೆ. ಆದರೆ ಈ ಕುರಿತು 24 ಗಂಟೆಗಳ ಮುನ್ನ ನೋಟಿಸ್ ನೀಡಬೇಕು ಎಂಬುದು ಸದಸ್ಯರಿಗೆ ತಿಳಿದಿರಲಿಲ್ಲವೇ ಎಂದು ಹೇಳಿದರು.
ಲೋಕಸಭೆಯಲ್ಲಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಈಗ ರಾಜ್ಯಸಭೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವ ಮರ್ಮ ಏನು ಎಂಬುದು ತಿಳಿಯುತ್ತಿಲ್ಲ ಎಂದು ಅರುಣ್ ಜೇಟ್ಲಿ ಹೇಳಿದರು.
ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಭಾರಿ ಗದ್ದಲ ಎಬ್ಬಿಸಿದ್ದರಿಂದ ರಾಜ್ಯಸಭೆ ಉಪಾಧ್ಯಕ್ಷ ಪಿಜೆ ಕುರಿಯನ್ ಅವರು ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.