
ಬೆಳೆಯುವ ವಿಧಾನ
ಜಮೀನನ್ನು ರಂಟೆ ಹೊಡೆದು ಹರಗಿ ಸಮತಟ್ಟು ಮಾಡಿರಬೇಕು. ಅಗತ್ಯಕ್ಕೆ ತಕ್ಕಷ್ಟು ತಿಪ್ಪೆ ಗೊಬ್ಬರ ಹಾಕಬೇಕು. ನಂತರ ಸಾಲಿನಿಂದ ಸಾಲಿಗೆ 14 ಇಂಚು ಅಂತರದಲ್ಲಿ ಕೂರಿಗೆ ಮೂಲಕ ಬಿತ್ತನೆ ಮಾಡಬೇಕು. ಬೀಜ ಬಿತ್ತಿ ತಿಂಗಳಾದ ಬಳಿಕ ಎಡೆ (ಸಾಲು ಮಾಡುವುದು) ಹೊಡೆಯಬೇಕು. ಕಳೆ ಬಾರದಂತೆ ನಿಗಾ ವಹಿಸಬೇಕು. ಬಿತ್ತಿದ 4 ತಿಂಗಳಿಗೆ ಫಸಲು ಕೈಗೆ ಬರುತ್ತದೆ. ಕಟಾವು ಮಾಡಿದ ನಂತರ ಕಣದಲ್ಲಿ ಒಟ್ಟು ಹಾಕಬೇಕು. ಅದನ್ನು ಗಾಣದ ಎತ್ತು ಅಥವಾ ಟ್ರ್ಯಾಕ್ಟರ್ ಮೂಲಕ ತುಳಿಸಬೇಕು. ಆಗ ಅದರಲ್ಲಿನ ಕಾಳು ಹೊರಗೆ ಬರುತ್ತದೆ. ಹೊಟ್ಟನ್ನು ಗಾಳಿಗೆ ತೂರಿ ಕಾಳನ್ನು ಬೇರ್ಪಡಿಸಬೇಕು. ಹೊಟ್ಟನ್ನು ಜಾನುವಾರುಗಳಿಗೆ ಮೇವಾಗಿ ಬಳಸಬಹುದು. ಎಕರೆಗೆ 1 ಕೆಜಿ ಬೀಜ ಬೇಕಾಗುತ್ತದೆ. ಚೆನ್ನಾಗಿ ನಿರ್ವಹಣೆ ಮಾಡಿದರೆ ಎಕರೆಗೆ 8 ಕ್ವಿಂಟಲ್ ಇಳುವರಿ ಬರುತ್ತದೆ. ನವಣೆ ಬಳಕೆಯಿಂದ ಸಕ್ಕರೆ, ರಕ್ತದೊತ್ತಡ ನಿಯಂತ್ರಣಕ್ಕೆ ತರಬಹುದು ಎಂಬುದು ಅನುಭವಿ ರೈತರ ಮಾತು. ರಾಜ್ಯದ ಹಲವೆಡೆ ಸ್ಥಳೀಯ ತಳಿಗಳೇ ಹೆಚ್ಚು ಬಳಕೆಯಲ್ಲಿವೆ.
ಮಣ್ಣು
ಸಾಮಾನ್ಯವಾಗಿ ಎಲ್ಲ ನಮೂನೆಯ ಅದರಲ್ಲೂ ಮುಖ್ಯವಾಗಿ ಕಡಿಮೆ ಫಲವತ್ತತೆ ಇರುವ ಮಣ್ಣಲ್ಲಿ ಇದನ್ನು ಬೆಳೆಯಬಹುದು. ಕಪ್ಪು ಮಣ್ಣಲ್ಲಿ ಬೆಳೆದರೆ ಇಳುವರಿ ಚೆನ್ನಾಗಿ ಬರುತ್ತದೆ.
ರೋಗಗಳು
ನವಣೆಗೆ ರೋಗಗಳ ಹಾವಳಿ ಕಡಿಮೆ. ಕೆಲವೊಮ್ಮೆ ಬಾಣತಿ ರೋಗ, ಕಾಡಿಗೆ ತೆನೆ(ಕಪ್ಪಾಗುವುದು) ಆಗಬಹುದು.
ಹೆಚ್ಚಿನ ಮಾಹಿತಿಗೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಇಟಗಿಸುರೇಶ್ ಅರಳಿಹಳ್ಳಿ(9844900988) ಅವರನ್ನು ಸಂಪರ್ಕಿಸಬಹುದು.
-ಮಹೇಶ್ ಅರಳಿ
Stay up to date on all the latest ಕೃಷಿ-ಪರಿಸರ news