ಬೆಳಗಾವಿ: ಬೆಳಗಾವಿಯಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಘಟನೆಯನ್ನು ಖಂಡಿಸಿ ಬಿಜೆಪಿ ನಾಳೆ (ಡಿ.16) ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಶುಕ್ರವಾರ ತಿಳಿಸಿದ್ದಾರೆ.
ಘಟನೆ ಸಂಬಂಧ ಎಂಟು ಜನರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಡಿಸೆಂಬರ್ 11 ರಂದು ಬೆಳಗಾವಿಯ ವಂಟಮುರಿ ಗ್ರಾಮದಲ್ಲಿ ಸಂತ್ರಸ್ತೆಯ ಪುತ್ರ ತಮ್ಮದೇ ಸಮುದಾಯದ ಯುವತಿಯೊಂದಿಗೆ ಪರಾರಿಯಾದ ನಂತರ ಮಹಿಳೆಯನ್ನು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಲಾಗಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಪ್ರಕರಣದ ಎಂಟು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದು, ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತ್ರಸ್ತೆಯನ್ನು ಭೇಟಿಯಾಗಿಲ್ಲ ಎಂದು ಆರೋಪಿಸಿದರು.
‘ವಿಧಾನಮಂಡಲದ ಅಧಿವೇಶನ ನಡೆಯುತ್ತಿದ್ದು, ಇಡೀ ಸರ್ಕಾರ ಇಲ್ಲಿಯೇ ಮೊಕ್ಕಾಂ ಹೂಡಿರುವ ಬೆಳಗಾವಿಯಲ್ಲಿ ಇಂತಹ ಘಟನೆ ನಡೆದಿರುವುದು ಅಪರಾಧಿಗಳಲ್ಲಿ ಸರ್ಕಾರ ಮತ್ತು ಕಾನೂನು ಜಾರಿ ಸಂಸ್ಥೆಗಳ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದಿರುವುದನ್ನು ತೋರಿಸುತ್ತದೆ' ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತುಂಬಾ ಹದಗೆಟ್ಟಿದೆ. ಮಹಾಭಾರತದಲ್ಲಿ ದ್ರೌಪದಿಗೆ ನಡೆದ ಘಟನೆಗಿಂತಲೂ ಘೋರ ಘಟನೆ ಇದಾಗಿದ್ದು, ಶ್ರೀಕೃಷ್ಣ ದ್ರೌಪದಿಯ ರಕ್ಷಣೆಗೆ ಬಂದಿದ್ದು, ಬೆಳಗಾವಿ ಘಟನೆಯಲ್ಲಿ ಯಾರೊಬ್ಬರೂ ಸಂತ್ರಸ್ತೆಗೆ ಸಹಾಯ ಮಾಡಲು ಬರಲಿಲ್ಲ ಎಂದು ಹೈಕೋರ್ಟ್ ಹೇಳಿದೆ ಎಂದರು.
ನಾಳೆ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ. ಇಂದು ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿಯ ಜಿಲ್ಲಾ ಕೇಂದ್ರ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಪಕ್ಷ ನಿರ್ಧರಿಸಿದೆ ಎಂದು ಅವರು ಹೇಳಿದರು.
ಅಪರಾಜಿತಾ ಸಾರಂಗಿ, ಸುನೀತಾ ದುಗ್ಗಲ್, ರಂಜಿತಾ ಕೋಳಿ ಮತ್ತು ಲಾಕೆಟ್ ಚಟರ್ಜಿ ಸೇರಿದಂತೆ ನಾಲ್ವರು ಬಿಜೆಪಿ ಸಂಸದದ ತಂಡ ಶನಿವಾರ ಬೆಳಗಾವಿಗೆ ಭೇಟಿ ನೀಡಲಿದೆ. ಇವರೊಂದಿಗೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಂಚಿಯ ಮಾಜಿ ಮೇಯರ್ ಆಶಾ ಲಾಕ್ರಾ ಕೂಡ ಇರುತ್ತಾರೆ ಎಂದು ಹೇಳಿದರು.
ಸಂಸತ್ ಆವರಣದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಸಂಸದರ ಪ್ರತಿಭಟನೆ
ಸಂತ್ರಸ್ತೆಯ ಪುತ್ರ ತನ್ನದೇ ಸಮುದಾಯದ ಯುವತಿಯೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರು ಹುಡುಗನ ತಾಯಿಯನ್ನು ವಿವಸ್ತ್ರಗೊಳಿಸಿ, ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಘಟನೆಸಂ ಸಂಬಂಧಿಸಿದಂತೆ ಕರ್ನಾಟಕದ ಬಿಜೆಪಿ ಸಂಸದರು ಸಂಸತ್ತಿನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
'ಮಹಿಳೆಯನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ವಿದ್ಯುತ್ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಲಾಗಿದೆ. ಆಕೆಯ ಗ್ರಾಮದ ಬಳಿಯೇ ಸರ್ಕಾರ ವಿಧಾನಸೌಧದ ಅಧಿವೇಶನ ನಡೆಸುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಕ್ಷೇತ್ರದಲ್ಲಿಯೇ ಇಂತಹ ಆಘಾತಕಾರಿ ಘಟನೆ ನಡೆದಿದೆ. ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯದ ಗೃಹ ಸಚಿವರು ಮೌನವಾಗಿದ್ದಾರೆ ಏಕೆ?. ಯಾರೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ' ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡ ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.