ನಟ ಯಶ್ 'ಟಾಕ್ಸಿಕ್' ಚಿತ್ರಕ್ಕೆ ಮುಹೂರ್ತ; ಸೆಟ್ ಬಾಯ್ ಕೈಯಿಂದ ಕ್ಲ್ಯಾಪ್!
Sumana Upadhyaya
ಹಲವು ಸಮಯಗಳಿಂದ ವಿಳಂಬವಾಗುತ್ತಿದ್ದ ಚಿತ್ರಕ್ಕೆ ಇಂದು ಮುಹೂರ್ತ ಸಿಕ್ಕಿದೆ. ಇಂದು ಬ್ರಾಹ್ಮೀ ಮುಹೂರ್ತದಲ್ಲಿ ಸೆಟ್ ಬಾಯ್ ಕೈಯಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ಕ್ಲ್ಯಾಪ್ ಮಾಡಿಸಿದ್ದಾರೆ ನಟ ಯಶ್.
ಟಾಕ್ಸಿಕ್ ಚಿತ್ರ ಅಪಾರ ಸುದ್ದಿ ಪಡೆದಿದ್ದು ಯಶ್ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಆದರೆ ಚಿತ್ರದ ಮುಹೂರ್ತಕ್ಕೆ ಯಾವ ಸ್ಟಾರ್ ಗಳನ್ನೂ ಕರೆಯದೆ ಚಿತ್ರದ ಸೆಟ್ ಬಾಯ್ ಕೈಯಿಂದ ಚಾಲನೆ ಮಾಡಿಸಿದ್ದು ಕೇಳಿ ಯಶ್ ಫ್ಯಾನ್ಸ್ ಖುಷಿಯಾಗಿದ್ದಾರೆ.
‘ಕೆಜಿಎಫ್ 2’ ರಿಲೀಸ್ ಆಗಿ ಎರಡೂವರೆ ವರ್ಷಗಳ ಬಳಿಕ ಸಿನಿಮಾ ಕೆಲಸ ಆರಂಭಿಸಿದ್ದು, ‘ಟಾಕ್ಸಿಕ್’ ಸಿನಿಮಾದ ಮುಹೂರ್ತ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ.
ಲೈಟ್ ಬಾಯ್ ಬಳಿ ಕ್ಲ್ಯಾಪ್ ಮಾಡಿಸಿ ಚಿತ್ರವೆಂದರೆ ಕೇವಲ ಹೀರೋ, ಹಿರೋಯಿನ್, ನಿರ್ದೇಶಕರು, ನಿರ್ಮಾಪಕರು ಮಾತ್ರವಲ್ಲದೆ ಒಬ್ಬ ತಳಮಟ್ಟದ ತಂತ್ರಜ್ಞರು ಹಾಗೂ ಕಾರ್ಮಿಕರು ಕೂಡ ಮುಖ್ಯ ಎಂಬುದನ್ನು ಚಿತ್ರತಂಡ ತೋರಿಸಿಕೊಟ್ಟಿದೆ.
ಬೆಂಗಳೂರಿನ ಹೊರವಲಯದಲ್ಲಿರುವ ಎಚ್ಎಮ್ಟಿ ಫ್ಯಾಕ್ಟರಿಯಲ್ಲಿ ಟಾಕ್ಸಿಕ್ ಸಿನಿಮಾಗೆ ಸೆಟ್ ಹಾಕಲಾಗಿದೆ. ಅಲ್ಲಿಯೇ ಮುಹೂರ್ತ ನಡೆದಿದೆ.
ಟಾಕ್ಸಿಕ್ ಸಿನಿಮಾ ಪೋಸ್ಟರ್
ಗೀತು ಮೋಹಮ್ ದಾಸ್ ನಿರ್ದೇಶನದ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ನ ಕೆ. ವೆಂಕಟ್ ನಾರಾಯಣ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ನಟಿಸಲಿದ್ದಾರೆ ಎನ್ನಲಾಗಿದೆ.
ಚಿತ್ರರಂಗದ ಯಾವುದೇ ಸೆಲೆಬ್ರಿಟಿಗಳನ್ನು ಮುಹೂರ್ತಕ್ಕೆ ಆಹ್ವಾನಿಸಿಲ್ಲ. ಸರಳವಾಗಿ ಪೂಜೆಯೊಂದಿಗೆ ಚಿತ್ರಕ್ಕೆ ಚಾಲನೆ ಸಿಕ್ಕಿದೆ.
‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಇಂದಿನಿಂದ ಆರಂಭವಾಗಿದ್ದು, ಮುಂದಿನ ವರ್ಷದ ಅಂತ್ಯದ ವೇಳೆಗೆ ಅಥವಾ 2026 ರ ಆರಂಭದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
ಚಿತ್ರ ನಿರ್ವಿಘ್ನವಾಗಿ ಮುಗಿದು ತೆರೆಕಂಡು ಯಶಸ್ವಿಯಾಗಲಿ ಎಂದು ಆಶಿಸಿ ಯಶ್ ದಂಪತಿ ನಿರ್ಮಾಪಕರ ಜೊತೆ ಇತ್ತೀಚೆಗೆ ಧರ್ಮಸ್ಥಳ, ಉಜಿರೆ ಸಮೀಪ ಸುರ್ಯ ದೇವಸ್ಥಾನ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರು.
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕ ಪಂಕ್ತಿಯಲ್ಲಿ ದೇವರ ಪ್ರಸಾದ ಊಟವನ್ನು ಸವಿದಿದ್ದರು.