T20 World Cup 2024: 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಒನ್ ಅಂಡ್ ಓನ್ಲಿ ಬುಮ್ರಾ!

Prasad SN

ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು T20 World Cup 2024 ನಲ್ಲಿ ಅವರ ಅದ್ಭುತ ಪ್ರದರ್ಶನದಿಂದ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿ ಪಡೆದರು. ಶನಿವಾರ ಬಾರ್ಬಡೋಸ್‌ನಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಎರಡನೇ ಐಸಿಸಿ ಟಿ 20 ವಿಶ್ವಕಪ್ ಪ್ರಶಸ್ತಿ ಪಡೆದುಕೊಂಡಿತು.

ಎಂಟು ಪಂದ್ಯಗಳಲ್ಲಿ, ಬುಮ್ರಾ 8.26 ಸರಾಸರಿಯಲ್ಲಿ 15 ವಿಕೆಟ್‌ಗಳನ್ನು ಮತ್ತು 3/7 ರ ಅತ್ಯುತ್ತಮ ಬೌಲಿಂಗ್ ನೊಂದಿಗೆ 4.17 ರ ಎಕಾನಮಿ ರೇಟ್ ಹೊಂದಿದ್ದರು. ಅವರು ಪಂದ್ಯಾವಳಿಯಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಎರಡನೇ ಓವರ್‌ನಲ್ಲಿ ರೀಜಾ ಹೆಂಡ್ರಿಕ್ಸ್‌ರನ್ನು ಅದ್ಭುತ ಔಟ್‌ಸ್ವಿಂಗರ್‌ನೊಂದಿಗೆ ಔಟ್ ಮಾಡುವ ಮೂಲಕ ಬುಮ್ರಾ ಅವರು ಭಾರತಕ್ಕೆ ಮೊದಲ ಮುನ್ನಡೆ ನೀಡಿದರು.

ನಂತರ 18 ನೇ ಓವರ್‌ನಲ್ಲಿ, ಅವರು ಅದ್ಭುತ ಇನ್‌ಸ್ವಿಂಗರ್‌ನೊಂದಿಗೆ ಮಾರ್ಕೊ ಜಾನ್ಸೆನ್‌ರ ವಿಕೆಟ್ ಪಡೆದರು.

ನಾನು ಬುಮ್ರಾ ಬಗ್ಗೆ ಮಾತನಾಡಲು ಪದಗಳು ನನ್ನಲ್ಲಿಲ್ಲ. ನಾವು ಈಗ ಬಹಳ ಸಮಯದಿಂದ ಇದನ್ನು ನೋಡುತ್ತಿದ್ದೇವೆ. ಅವರ ಕೈಯಲ್ಲಿ ಚೆಂಡು ಇದ್ದಾಗಲೆಲ್ಲ, ಅವರು ಪ್ರತಿ ಬಾರಿಯೂ ನಮಗೆ ಮ್ಯಾಜಿಕ್ ಸೃಷ್ಟಿಸುತ್ತಾರೆ ಎಂದು ರೋಹಿತ್ ಶರ್ಮಾ ಹೊಗಳಿದರು.

ಅರ್ಷ್ ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಡೆತ್ ಬೌಲಿಂಗ್‌ನ ಉತ್ತಮ ಪ್ರದರ್ಶನ ಮತ್ತು ವಿರಾಟ್ ಕೊಹ್ಲಿ ಮತ್ತು ಅಕ್ಸರ್ ಪಟೇಲ್ ಅವರ ಅದ್ಭುತ ಬ್ಯಾಟಿಂಗ್, ಭಾರತ ತನ್ನ ಐಸಿಸಿ ಟ್ರೋಫಿಯ ಬರವನ್ನು ಕೊನೆಗೊಳಿಸಲು ಸಹಾಯ ಮಾಡಿತು. ಸೂರ್ಯ ಕುಮಾರ್ ಯಾದವ್ ಅವರ ಅದ್ಭುತ ಕ್ಯಾಚ್ ಪಂದ್ಯ ದಿಕ್ಕನ್ನೇ ಬದಲಿಸಿತು.

ನಾನು ಯಾವಾಗಲೂ ಒಂದು ಬಾರಿಗೆ ಒಂದು ಬಾಲ್ ಮತ್ತು ಒಂದು ಓವರ್ ಬಗ್ಗೆ ಯೋಚಿಸುತ್ತೇನೆ, ತುಂಬಾ ಮುಂದೆ ಯೋಚಿಸುವುದಿಲ್ಲ. ಪಂದ್ಯದ ವೇಳೆ ಭಾವನೆಗಳು ನಮ್ಮ ಮೇಲೆ ಹಿಡಿತ ಸಾಧಿಸಲು ಬಿಡಬಾರದು ಎಂದು ಜಸ್ಪ್ರೀತ್ ಬುಮ್ರಾ ಅಭಿಪ್ರಾಯಪಟ್ಟರು.

ನೀವು ಯಾವಾಗಲೂ ಯಾರ್ಕರ್ ಬೌಲ್ ಮಾಡಬೇಕಾಗಿಲ್ಲ, ಕೆಲವೊಮ್ಮೆ ಯಾರ್ಕರ್ ಅನ್ನು ಬೌಲ್ ಮಾಡಬೇಕು, ಕೆಲವೊಮ್ಮೆ ಶಾರ್ಟ್ ಬಾಲ್ ಬೌಲ್ ಮಾಡಬೇಕು. ನೀವು 145kmph ವೇಗದಲ್ಲಿ ಬೌಲ್ ಮಾಡಬಹುದು, ಆದರೆ ಕೆಲವೊಮ್ಮೆ ನಿಧಾನವಾದ ಚೆಂಡುಗಳನ್ನು ಬೌಲ್ ಮಾಡುವುದು ಮುಖ್ಯವಾಗಿದೆ ಎಂದು ಬುಮ್ರಾ 2024 ರ ಐಪಿಎಲ್ ಸೀಸನ್ ನಂತರ ಹೇಳಿದ್ದರು.

Jasprit Bumrah ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿ!