ಅಭಿಮಾನಿಗಳ ಪಾಲಿನ 'ಟಗರು ಪುಟ್ಟಿ' ಶ್ರೇಯಾಂಕಾ ಹವಾ...

Sumana Upadhyaya

ಶ್ರೇಯಾಂಕ ಪಾಟೀಲ್ ಹೆಸರು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಶ್ರೇಯಾಂಕಾ ಆಟಕ್ಕೆ ಫ್ಯಾನ್ಸ್ ಈಗ ಫಿದಾ ಆಗಿದ್ದಾರೆ. ಅವರನ್ನು ಪ್ರೀತಿಯಿಂದ ಅಭಿಮಾನಿಗಳು ನಮ್ಮ ಟಗರು ಪುಟ್ಟಿ ಎಂದು ಕರೆಯುತ್ತಿದ್ದಾರೆ.

ಮಾರ್ಚ್ 17ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು.

ಆರ್‌ಸಿಬಿ ಸ್ಟಾರ್ ಆಲ್‌ರೌಂಡರ್, ಕನ್ನಡತಿ ಶ್ರೇಯಾಂಕಾ ಪಾಟೀಲ್ ತಂಡದ ನಿಷ್ಠಾವಂತ ಅಭಿಮಾನಿಗಳಿಗೆ ಟ್ರೋಫಿ ಅರ್ಪಿಸುವ ಮೂಲಕ ಎಲ್ಲರ ಮನ ಗೆದ್ದರು. ಫೈನಲ್ ನಲ್ಲಿ 4 ವಿಕೆಟ್ ಪಡೆದು ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

2ನೇ ಆವೃತ್ತಿಯ ಪಂದ್ಯಾವಳಿಯುದ್ದಕ್ಕೂ ಆಡಿದ 8 ಇನ್ನಿಂಗ್ಸ್‌ಗಳಿಂದ 13 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಜೊತೆಗೆ 5 ಲಕ್ಷ ರೂಪಾಯಿ ಗೆದ್ದರು. ಪಂದ್ಯಾವಳಿಯ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ಪಡೆದರು.

ಆರ್ ಸಿಬಿ ಪಂದ್ಯದಲ್ಲಿ ಮಹಿಳಾ ತಂಡ ಗೆದ್ದ ನಂತರ ಶ್ರೇಯಾಂಕಾ ಪಾಟೀಲ್ ಸಾಕಷ್ಟು ಸುದ್ದಿಯಾಗಿದ್ದಾರೆ.

ಅವರ ವೈಯಕ್ತಿಕ ಜೀವನ ಬಗ್ಗೆ ಅಭಿಮಾನಿಗಳು ಗೂಗಲ್ ಮಾಡುತ್ತಿದ್ದಾರೆ. ಶ್ರೇಯಾಂಕಾ ಪಾಟೀಲ್ ಹುಟ್ಟಿದ್ದು 2002ರ ಜುಲೈ 31ರಂದು ಬೆಂಗಳೂರಿನಲ್ಲಿ. ಅವರ ತಂದೆ ರಾಜೇಶ್ ಪಾಟೀಲ್ ಮೂಲತಃ ಶಿವಮೊಗ್ಗ ಜಿಲ್ಲೆಯವರು.

ಶ್ರೇಯಾಂಕಾ ಅವರ ತಂದೆ ರಾಜೇಶ್ ಪಾಟೀಲ್ ಕೂಡ ಕ್ರಿಕೆಟ್ ಆಟಗಾರನಾಗಿದ್ದರು. ಈ ಕಾರಣಕ್ಕೆ ರಾಜೇಶ್ ಪಾಟೀಲ್ ಅವರು ಮಗಳಿಗೂ ಬೆಂಬಲ ನೀಡಿ, ಕ್ರಿಕೆಟ್‌ನಲ್ಲಿ ಸಾಧನೆ ಮಾಡಲು ಸಹಾಯ ಮಾಡಿದ್ದರಂತೆ.

ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿರುವ ಶ್ರೇಯಾಂಕಾ ಪಾಟೀಲ್ ಇಂದು ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

22 ವರ್ಷದ ಶ್ರೇಯಾಂಕಾ ಪಾಟೀಲ್ ಅವರಿಗೆ ಒಬ್ಬ ಸಹೋದರಿ ಮತ್ತು ಒಬ್ಬ ಸಹೋದರ ಕೂಡ ಇದ್ದಾರೆ. ಸದಾ ನಗುಮುಖ ಹೊಂದಿರುವ ಶ್ರೇಯಾಂಕಾ ಭಾರತ ತಂಡದ ಪ್ರಮುಖ ಸ್ಪಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಶ್ರೇಯಾಂಕಾ ಪಾಟೀಲ್ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ. ವಿರಾಟ್ ಕೊಹ್ಲಿಯೊಂದಿಗೆ ನಿಂತು ಫೋಟೋ ತೆಗೆಸಿಕೊಂಡಿದ್ದು ಸಾಕಷ್ಟು ವೈರಲ್ ಆಗಿದೆ.

ಶ್ರೇಯಾಂಕಾ ಪಾಟೀಲ್ ಹೇಳಿದ "ಖಡಕ್ ರೊಟ್ಟಿ, ಶೇಂಗಾ ಚಟ್ನಿ, ಎಣಗಾಯಿ ಪಲ್ಯ ಕೊಟ್ರೆ ಇವಾಗ್ಲೂ ಇಲ್ಲೇ ಕುತ್ಕೊಂಡು ತಿಂತೀನಿ, ಅಷ್ಟು ಇಷ್ಟ. ನಮ್ಮ ಅಮ್ಮ ಮಾಡೋದು, ನಮ್ ಅಜ್ಜಿ ತುಂಬಾ ಚೆನ್ನಾಗಿ ಮಾಡ್ತಾರೆ. ಅದು ತಿಂದ್ರೇನೆ ಒಂಥರಾ ತೃಪ್ತಿ. ಫಿಜ್ಜಾ, ಬರ್ಗರ್ ನಾನ್ ಇಷ್ಟಪಡಲ್ಲ'' ಹೇಳಿಕೆ ವೈರಲ್ ಆಗಿದೆ.

ಭಾರತೀಯ ಆಟಗಾರರು