ಈ ಸಮಯ ಅನುಷ್ಕಾಗೂ ತುಂಬಾ ವಿಶೇಷ: ವಿರಾಟ್ ಕೊಹ್ಲಿ

Sumana Upadhyaya

ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರ ಪಾತ್ರ ತಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬುದರ ಬಗ್ಗೆ ಅನೇಕ ಬಾರಿ ಬಹಿರಂಗವಾಗಿ ಮಾತನಾಡಿದ್ದುಂಟು.

ವಿರಾಟ್ ಕೊಹ್ಲಿ ಅವರ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಿನ್ನೆ ಮಂಗಳವಾರ ರಾತ್ರಿ ಗುಜರಾತ್ ನ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ತಮ್ಮ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರಶಸ್ತಿಯನ್ನು ಗೆದ್ದರು.

ವಿರಾಟ್ ಕೊಹ್ಲಿ ತಮ್ಮ ತಂಡದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಲ್ಲದೆ, ಒಂದು ದಶಕದಿಂದ ತಮ್ಮ ಐಪಿಎಲ್ ಪ್ರಯಾಣದುದ್ದಕ್ಕೂ ಅನುಷ್ಕಾ ನೀಡಿದ ಅಚಲ ಬೆಂಬಲವನ್ನು ಸ್ಮರಿಸಲು ಮರೆಯಲಿಲ್ಲ.

ಐತಿಹಾಸಿಕ ಗೆಲುವಿನ ನಂತರ ಮಾತನಾಡಿದ ಕೊಹ್ಲಿ, ಕ್ರಿಕೆಟ್, ಅಭ್ಯಾಸದ ಮಧ್ಯೆ ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ನಿಮಗಾಗಿ ಏನು ಮಾಡುತ್ತಾರೆ, ಅವರ ತ್ಯಾಗಗಳು, ಬದ್ಧತೆ ಮತ್ತು ಕಷ್ಟದ ಸಮಯದಲ್ಲಿ ನಿಮಗೆ ಬೆಂಬಲ ನೀಡುವುದು ಅದನ್ನು ನೀವು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ."

ನೀವು ವೃತ್ತಿಪರವಾಗಿ ಆಡಿದಾಗ ಮಾತ್ರ ತೆರೆಮರೆಯಲ್ಲಿ ನಡೆಯುವ ಅನೇಕ ವಿಷಯಗಳು ಮತ್ತು ಏನು ಎದುರಿಸುತ್ತವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ. ಅನುಷ್ಕಾ ಭಾವನಾತ್ಮಕವಾಗಿ ಏನನ್ನು ಅನುಭವಿಸಿದ್ದಾರೆ - ನಾನು ಸೋತಾಗ ನೋಡುವುದು, ಆಟಗಳಿಗೆ ಬರುವುದು, ಬೆಂಗಳೂರಿನೊಂದಿಗೆ ಸಂಪರ್ಕ (ಆಕೆ ಮೂಲತಃ ಬೆಂಗಳೂರಿನವಳು), ಮತ್ತು ಆರ್‌ಸಿಬಿಯೊಂದಿಗೆ ಸಂಪರ್ಕ ಅವರಿಗೂ ತುಂಬಾ ವಿಶೇಷವಾಗಿದೆ, ಈ ಬಗ್ಗೆ ಆಕೆಗೆ ಹೆಮ್ಮೆಯಿದೆ ಎಂದರು.

ನಿನ್ನೆ ಮೈದಾನದಲ್ಲಿ ನಡೆದ ಆಟದಲ್ಲಿ ಅಂತಿಮ ಎಸೆತವು ಆರ್‌ಸಿಬಿಯ ಗೆಲುವನ್ನು ದೃಢಪಡಿಸಿದ ನಂತರ ವಿರಾಟ್ ಕೊಹ್ಲಿ ಭಾವುಕರಾದರು. ಕಣ್ಣಲ್ಲಿ ನೀರು ತುಂಬಿಕೊಂಡು, ಅನುಷ್ಕಾ ಅವರನ್ನು ಅಪ್ಪಿಕೊಳ್ಳಲು ನೇರವಾಗಿ ಬೌಂಡರಿಯತ್ತ ಓಡಿ ಬಂದರು. ಅನುಷ್ಕಾ ಪ್ರೀತಿಯಿಂದ ಪತಿಯನ್ನು ಸಮಾಧಾನಪಡಿಸಿದರು.

ಅನುಷ್ಕಾ ಇಡೀ ಫೈನಲ್ ಪಂದ್ಯವನ್ನು ಸ್ಟ್ಯಾಂಡ್‌ ನಲ್ಲಿ ನಿಂತು ವೀಕ್ಷಿಸಿದ್ದರು. ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಅದ್ಭುತ ಗೆಲುವು ಸಾಧಿಸಿದಾಗ ಸಂತೋಷದಿಂದ ಜಿಗಿಯುತ್ತಿದ್ದರು. ಪಿಬಿಕೆಎಸ್‌ಗೆ ಅಂತಿಮ ಓವರ್‌ನಲ್ಲಿ 29 ರನ್‌ಗಳು ಬೇಕಾಗಿದ್ದವು.

ವಿರಾಟ್ ಮತ್ತು ಅನುಷ್ಕಾ ಐಪಿಎಲ್ ಟ್ರೋಫಿಯೊಂದಿಗೆ ಗೆಲುವನ್ನು ಆಚರಿಸುತ್ತಿರುವ ಮತ್ತು ಒಟ್ಟಿಗೆ ಪೋಸ್ ನೀಡುತ್ತಿರುವ ಹಲವಾರು ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.