ಬೃಂದಾವನ ಮಹೋತ್ಸವಕ್ಕೆ ಹೇಮಾ ಮಾಲಿನಿ ನೃತ್ಯ ಕಳೆ...

Sumana Upadhyaya

ಭಾರತೀಯ ಚಿತ್ರರಂಗದ ಎವರ್ ಗ್ರೀನ್ ಬ್ಯೂಟಿ, ಡ್ರೀಮ್ ಗರ್ಲ್, ಬಿಜೆಪಿ ಸಂಸದೆ ಹೇಮ ಮಾಲಿನಿ ತಮ್ಮ ರಾಜಕೀಯ ಜೀವನದ ಮಧ್ಯೆ ಆಗಾಗ ಬಿಡುವು ಮಾಡಿಕೊಂಡು ತಮ್ಮ ನೆಚ್ಚಿನ ನೃತ್ಯ ಕಾರ್ಯಕ್ರಮವನ್ನು ನೀಡುವುದುಂಟು.

ಅದೇ ರೀತಿ ನಿನ್ನೆ ಹೋಳಿ ಹಬ್ಬದ ಸಂದರ್ಭದಲ್ಲಿ ಭುವನೇಶ್ವರದಲ್ಲಿ ಪ್ರಸಿದ್ಧ ಕೊಳಲುವಾದಕ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರು ಆಯೋಜಿಸುವ ವಾರ್ಷಿಕ ಕಾರ್ಯಕ್ರಮ ವೃಂದಾವನ ಮಹೋತ್ಸವದಲ್ಲಿ ಒಡಿಸ್ಸಿ ಮತ್ತು ಕಥಕ್ ನೃತ್ಯ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

76ರ ಇಳಿವಯಸ್ಸಿನಲ್ಲಿಯೂ ಯುವತಿಯರು ನಾಚುವಂತೆ ನೃತ್ಯ ಮಾಡಿ ತೋರಿಸಿದ್ದಾರೆ ಎಂದು ಪ್ರೇಕ್ಷಕರು ಹೇಮಮಾಲಿನಿಯವರನ್ನು ಶ್ಲಾಘಿಸುತ್ತಿದ್ದಾರೆ.

ಹಳದಿ ಬಣ್ಣದ ಉಡುಪನ್ನು ಧರಿಸಿದ್ದ 'ಶೋಲೆ' ನಟಿ, ತಮ್ಮ ಆಕರ್ಷಕವಾದ ಅಭಿವ್ಯಕ್ತಿಗಳು ಮತ್ತು ಸೊಗಸಾದ ನೃತ್ಯ ಚಲನೆಗಳಿಂದ ನೆರೆದಿದ್ದವರ ಮನಸೂರೆಗೊಂಡರು.

ಒಡಿಸ್ಸಿ ಮತ್ತು ಕಥಕ್ ಎರಡೂ ಶೈಲಿಯ ನೃತ್ಯಗಳನ್ನು ಮಾಡಿ ತೋರಿಸಿರುವ ಹೇಮ ಮಾಲಿನಿಯವರಿಗೆ ಈ ಇಳಿ ವಯಸ್ಸಿನಲ್ಲಿಯೂ ನೃತ್ಯದ ಮೇಲಿರುವ ಅಪಾರ ಒಲವು ಮತ್ತು ಬದ್ಧತೆಯನ್ನು ತೋರಿಸುತ್ತದೆ.

ಆದರೆ ಸಂಸದೆಯಾಗಿ ಕ್ಷೇತ್ರದ ಜನರ ಕೆಲಸ ಮಾಡುವುದು ಬಿಟ್ಟು ನೃತ್ಯ ಕಾರ್ಯಕ್ರಮ ನೀಡಿಕೊಂಡು ಕೂತರೆ ನಿಮ್ಮನ್ನು ಜನರು ಆರಿಸಿ ಕಳುಹಿಸಿರುವುದು ಏಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಆದರೆ ರಾಜಕೀಯ ಕ್ಷೇತ್ರಕ್ಕೆ ಬಂದ ಮೇಲೆ ಹೇಮ ಮಾಲಿನಿಯವರು ಎಂದಿಗೂ ನೃತ್ಯ ಮಾಡುವುದನ್ನು ನಿಲ್ಲಿಸಿಲ್ಲ. ಪುಟ್ಟ ಬಾಲಕಿಯಾಗಿದ್ದಾಗಲೇ ಮಾಡುತ್ತಿದ್ದ ಶಾಸ್ತ್ರೀಯ ನೃತ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ತಮ್ಮ ನೃತ್ಯತಂಡದೊಂದಿಗೆ ದೇಶ ವಿದೇಶಗಳಲ್ಲಿ ಸಂಚರಿಸುತ್ತಾ ಭಾರತದ ಪುರಾತನ ಕಥೆ, ಸಂಸ್ಕೃತಿ ವೈಭವವನ್ನು ನೃತ್ಯ ರೂಪಕದ ಮೂಲಕ ಜನರ ಮುಂದಿಡುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos