ತಾಳಿ ಬಾಳಿ

ದಾಂಪತ್ಯವೆಂಬ ದೇಗುಲದಲ್ಲಿ ಪ್ರೀತಿ, ವಿಶ್ವಾಸ, ತಾಳ್ಮೆ, ಹಾಸ್ಯ, ನೋವು ನಲಿವುಗಳೆಂಬ ಬಹುಮುತ್ತು ರತ್ನಗಳಿವೆ.
ತಾಳಿ ಬಾಳಿ

ಮನೆಯೇ ಮಠವೆಂದು ತಿಳಿ, ಬಂಧು- ಬಳಗವೇ ಗುರುವು
ಅನವರತ ಪರಿಚರ್ಯೆಯೇ ಅವರೊರೆವ ಪಾಠ
ನಿನ್ನುಳಿದ ಜಗಕೆ ಮುಟ್ಟಿಪ ಸೇತು ಸಂಸಾರ
ಮನ ಪುಟ ಸಂಸ್ಕಾರ॥ ಮಂಕುತಿಮ್ಮ

ಎಂಬ ಡಿ.ವಿ.ಜಿ. ಯವರ ಕಗ್ಗದ ಸಾಲುಗಳಂತೆ, ಮನೆಯೇ ನಮ್ಮೆಲ್ಲರಿಗೂ ಜೀವನ ಅತಿ ಮುಖ್ಯ ಪಾಠ ಕಲಿಸುವ ಪಾಠಶಾಲೆ. ನಮ್ಮ ಬಂಧು- ಮಿತ್ರರೇ ನಮ್ಮ ಗುರುಗಳು. ಅವರ ಜೊತೆಗಿನ ನಿತ್ಯ ಒಡನಾಟಗಳೇ ನಾವಿಲ್ಲಿ ಕಲಿವ ಜೀವನದ ಪಾಠಗಳು. ಹೀಗಾಗಿ ಸಂಸಾರವೆಂಬುದು, ನಮ್ಮನ್ನು ಹೊರ ಜಗತ್ತಿಗೆ ಸಂಪರ್ಕಿಸುವ ಸೇತುವೆ. ಇದರಲ್ಲಿ ಮುಳುಗೇಳುವ ಮನಸ್ಸು. ಪುಟಕ್ಕಿಟ್ಟ ಚಿನ್ನ ಹೊಳೆಯುವ ಹಾಗೆ ಇಲ್ಲಿ ಮನಸ್ಸು ಸಂಸ್ಕಾರಕ್ಕೆ ಒಳಪಡುತ್ತದೆ.
ಈ ನಿತ್ಯ ಸಂಸ್ಕಾರದ ಶಾಲೆಯಾದ ಸಂಸಾರದ ಅತ್ಯಂತ ಪ್ರಮುಖ ಘಟ್ಟ ವಿವಾಹ. ವಿವಾಹವೆಂದರೆ ಎರಡು ಮನಸ್ಸುಗಳ, ಎರಡು ಪರಿವಾರಗಳ ಸಮ್ಮಿಲನ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅತಿ ಮುಖ್ಯ ಘಳಿಗೆಯಾಗಿ ವಿವಾಹವನ್ನು ಗುರುತಿಸಲಾಗುತ್ತದೆ. ಬದುಕಿನ ತಿರುವುಗಳಲ್ಲಿ ಇದು ಅತಿ ಮುಖ್ಯದ್ದಾಗಿರುತ್ತದೆ.
 ವಿವಾಹವೆನ್ನುವುದು ವ್ಯಕ್ತಿಯ ವ್ಯಕ್ತಿತ್ವ ವಿಕಸನದ ವೇದಿಕೆ. ವ್ಯಕ್ತಿತ್ವವೆಂದರೆ ಒಳ ಆಳದ ಶಕ್ತಿ, ಹೊರಗಿನ ಬಾಹ್ಯ ರೂಪ ವ್ಯಕ್ತಿತ್ವವಲ್ಲ. ಒಳ ಆಳದ ಅಂತಃಶಕ್ತಿಯನ್ನು ಒರೆಗಲ್ಲಿಗೆ ಹಚ್ಚುವುದೇ ವೈವಾಹಿಕ ಜೀವನ.
'ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ' ಎಂಬ ಮಾತಿನಂತೆ ವ್ಯಕ್ತಿತ್ವ ವಿಕಸನವೆಂಬುದು, ಕೊನೆಯಿರದ ಅಳಿವಿರದ ಪ್ರಕ್ರಿಯೆ. ಸಂಸಾರವೆಂಬ ಜವಾಬ್ದಾರಿ ಹೆಗಲೇರಿದಾಗಲೇ, ವಿಕಸಿತ ವ್ಯಕ್ತಿತ್ವದ ಅಗತ್ಯ ಹೆಚ್ಚಾಗಿ ಕಂಡು ಬರುವುದು. ಸಂಸಾರವೆಂಬ ಸಾಗರದಲ್ಲಿ ನಿತ್ಯ ಈಜಲು, ಅದನ್ನು ಆನಂದಿಸಲು ಬದುಕಿನಲ್ಲಿ ವ್ಯಕ್ತಿತ್ವ ವಿಕಸನದ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು.

ತಾಳ್ಮೆ
ಯಶಸ್ವಿ ದಾಂಪತ್ಯದ ಮೊದಲ ಅಗತ್ಯ ಇದು. 'ತಲ್ಲಣಿಸದಿರು ಕಂಡ್ಯ ತಾಳು ಮನವೇ'. 'ತಾಳುವಿಕೆಗೆಗಿಂತ ಅನ್ಯ ತಪವಿಲ್ಲ' ಎಂಬ ಮಾತುಗಳಂತೆ ತಾಳ್ಮೆ ಇದ್ದರೆ ಬದುಕು ಸುಸೂತ್ರವಾಗಿ ಸಾಗುತ್ತದೆ. ತಾಳ್ಮೆ ಜಗಳಕ್ಕೆ ಕಡಿವಾಣ ಹಾಕುತ್ತದೆ, ವಿವೇಚನೆಯಿಂದ ಆಲೋಚಿಸುವಂತೆ ಮಾಡುತ್ತದೆ. ದಾಸವರೇಣ್ಯ ವಾದಿರಾಜರು ಹೇಳಿದಂತೆ 'ಕಷ್ಟ ಬಂದರೆ ತಾಳು, ಕಂಗೆಡದೆ ತಾಳು, ದುಷ್ಟ ಜನರು ಪೇಳ್ವ ನಿಷ್ಟುರದ ನುಡಿ ತಾಳು, ಉಕ್ಕಿ ಬರುವ ಹಾಲಿಗೆ ನೀರನಿಕ್ಕುವಂದದಿ ತಾಳು' ಇಂದಿನ ದಿನಗಳಲ್ಲಿ ಎಲ್ಲರಿಗೂ ಹೇಳುವ ಕಾತರ ಇರುತ್ತದೆ. ಕೇಳುವ ತಾಳ್ಮೆ ಇರುವುದಿಲ್ಲ. ಸಂಸಾರದಲ್ಲಿ ಒಬ್ಬರಿಗೊಬ್ಬರು ತಾಳ್ಮೆಯಿಂದ ಕಿವಿಗೊಟ್ಟು ಆಲಿಸಿದ್ದೇ ಆದರೆ ಬಹುಪಾಲು ಸಮಸ್ಯೆಗಳು ಪರಿಹಾರವಾಗುತ್ತವೆ.

ನಂಬಿಕೆ- ವಿಶ್ವಾಸ
ಇಂದಿನ ಸಮಾಜದಲ್ಲಿ ಒಬ್ಬರನ್ನೊಬ್ಬರು ನಂಬದಂಥ ಸ್ಥಿತಿ ನಿರ್ಮಾಣವಾಗಿದೆ. ಬೇರೆಯವರನ್ನಿರಲಿ, ನಮ್ಮನ್ನೇ ನಾವು ನಂಬುವುದಿಲ್ಲ. ಬೇರೆಯವರಲ್ಲಿ ನಾವು ವಿಶ್ವಾಸವಿರಿಸಿದಾಗ, ನಮ್ಮಲ್ಲಿಯೇ ನಮಗೆ ಆತ್ಮವಿಶ್ವಾಸ ಒಡ ಮೂಡುತ್ತದೆ. ಸಂಸಾರದ ಬಂಡಿಯ ನೊಗವನ್ನು ಹೆಗಲಿಗೇರಿಸಿಕೊಂಡ ಪತಿ ಪತ್ನಿಯರಿಬ್ಬರೂ, ಪರಸ್ಪರರನ್ನು ನಂಬಬೇಕು. ಆಗಲೇ ಪ್ರಯಾಣ ಸುಗಮ.

ಹೊಂದಾಣಿಕೆ
'ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಬದುಕಿನಲ್ಲಿ' ಎಂದು ಉದ್ಗರಿಸುತ್ತಾರೆ ಹಿರಿಯ ಕವಿ. ಜಿ.ಎಸ್.ಎಸ್. ಬದುಕಿನಲ್ಲಿ ಹೊಂದಾಣಿಕೆಯೆಂಬುದು ಅಷ್ಟು ಸುಲಭದ ಮಾತಲ್ಲ ಪ್ರತಿಯೊಬ್ಬರಿಗೂ ಅವರದ್ದೇ ಆದ ಆಲೋಚನೆಗಳಿರುತ್ತವೆ. ವಿಷಯವನ್ನು ಬರೀ ನಮ್ಮ ಮೂಗಿನ ನೇರಕ್ಕೆ ನೋಡದೇ, ಇನ್ನೊಬ್ಬರ ನೆಲೆಯಿಂದಲೂ ಆಲೋಚಿಸುವುದು ಸೂಕ್ತ. ಇದಕ್ಕೇ ಇಂಗ್ಲೀಷ್‌ನಲ್ಲಿ 'ಎಂಪತಿ' ಎನ್ನುತ್ತಾರೆ. ಇದನ್ನು ಬೆಳೆಸಿಕೊಳ್ಳಲು ತಾಳ್ಮೆ, ವಿಶ್ವಾಸ ಅತ್ಯಗತ್ಯ. ಎಂಪತಿ ಮೂಡಿದಾಗ ಹೊಂದಾಣಿಕೆ ಸಾಧ್ಯವಾಗುತ್ತದೆ. ಸಂಗಾತಿಯ ಯಶಸ್ಸಿಗೆ ತಾವು ಹರ್ಷಿಸುವುದು ನೋವಿಗೆ ತಾವೂ ಸ್ಪಂದಿಸುವುದು ಇವು ಹೊಂದಾಣಿಕೆಯ ಮುಖ್ಯ ಲಕ್ಷಣಗಳು. ಇದನ್ನೇ 'ವಿನ್- ವಿನ್‌' ಸಂದರ್ಭ ಎಂದು ಕರೆಯುತ್ತಾರೆ. 'ನೀನೂ ಗೆಲ್ಲು, ನಾನೂ ಗೆಲ್ಲುತ್ತೇನೆ, ಎಂಬುದು 'ನಾನು ಗೆದ್ದೆ, ನೀನು ಸೋತೆ' ಎಂಬ ಮನೋಭಾವಕ್ಕಿಂತ ಹೆಚ್ಚು ಆರೋಗ್ಯ ಪೂರ್ಣವಾಗಿರುತ್ತದೆ.'

ಧನಾತ್ಮಕ ಚಿಂತನೆ
'ನಾನು ಬಡವಿ, ಆತ ಬಡವ ಒಲವೇ ನಮ್ಮ ಬದುಕು' ಎಂಬ ವರಕವಿ ಬೇಂದ್ರೆಯವರ ಕವನದ ಸಾಲಿನಂತೆ, ಇರುವುದರಲ್ಲಿಯೇ ಸಂತೋಷಪಡುವುದು ಧನಾತ್ಮಕ ಚಿಂತನೆ. ಸಂಸಾರದಲ್ಲಿ ಅದಿಲ್ಲ, ಇದಿಲ್ಲ ಎಂಬ ಕೊರಗುವುದರ ಬದಲು 'ಇರುವ ಭಾಗ್ಯವ ನೆನೆದು ಬಾರನೆಂಬುದು ಬಿಡುವುದು' ಸುಖಕರ ಇರುವುದನ್ನು ಅನುಭವಿಸಿದರೆ ದಾಂಪತ್ಯ ಬೆಟರ್ ಆಗುತ್ತದೆ. ಇಲ್ಲದ್ದಕ್ಕೆ ಕೊರಗಿದರೆ ಬಿಟರ್ ಆಗುತ್ತದೆ. ಸಿಹಿ-ಕಹಿಗಳ ನಡುವೆ ಕೇವಲ ಒಂದೇ ಅಕ್ಷರದ ವ್ಯತ್ಯಾಸ!

ನಗುವಿನ ವಾತಾವರಣ
ನಗುವೆಂಬ ಟಾನಿಕ್ ಸಂಸಾರದಲ್ಲಿದ್ದರೆ ಅದು ಅತ್ಯಂತ ಸುಗಮವಾಗಿ ಸಾಗುತ್ತದೆ. 'ನಗು ನಗುತಾ ನಲಿ ನಲೀ ಏನೇ ಆಗಲಿ' ಎಂಬ ಹಾಡಿನ ಸಾಲಿನಂತೆ ನಗುವಿಗೆ ನೋವನ್ನು ಮರೆಸುವ ದಿವ್ಯ ಶಕ್ತಿ ಇದೆ. ನಮ್ಮ ಆರೋಗ್ಯ ವೃದ್ಧಿಸುವ, ಆಯಸ್ಸನ್ನು ಹೆಚ್ಚಿಸುವ ನಗುವನ್ನು ಅರಸಿ, ನಾವು ಹಾಸ್ಯಗೋಷ್ಠಿಗಳಿಗೆ ಹೋಗಬೇಕೆಂದಿಲ್ಲ. ನಮ್ಮ ಸಂಸಾರದ ಹಲವು ಸುಂದರ ಕ್ಷಣಗಳಲ್ಲಿಯೇ ನವಿರಾದ ಹಾಸ್ಯ ಅಡಗಿರುತ್ತದೆ. ಹಿರಿಯ ಕವಿ. ಎಸ್.ವಿ. ಪರಮೇಶ್ವರ ಭಟ್ಟರು ತಮ್ಮ 'ಇಂದ್ರ ಛಾಪ'ದಲ್ಲಿ ದಂಪತಿಯ ಇಂತಹ ಸುಂದರ ಹಾಸ್ಯದ ಕ್ಷಣಗಳನ್ನು ಅತ್ಯಂತ ನವಿರಾಗಿ ನಿವೇದಿಸುತ್ತಾರೆ.
 'ನೀವೊಂದು ಸೀರೆಯನು ನನಗಾಗಿ ತಂದಂತೆ, ನಾಕಂಡೆ ಕನಸನು ನಿನ್ನೆ' ಎಂದು ಹೆಂಡತಿ ತನ್ನ ಸೀರೆಯ ಬೇಡಿಕೆಯನ್ನು ಜಾಣತನದಿಂದ ಗಂಡನ ಮುಂದಿಡುತ್ತಾಳೆ. ಆದರೆ ಅದಕ್ಕೂ ಜಾಣನಾದ ಪತಿರಾಯ ಏನೆಂದು ಉತ್ತರಿಸುತ್ತಾನೆ ಗೊತ್ತೆ?
'ನಾಳೆ ಆ ಸೀರೆಯನ್ನು ನೀನುಟ್ಟು ಮೆರೆದಂತೆ, ಕನಸನು ಕಾಣೆನ್ನ ಚಿನ್ನ' ಹೇಗಿದೆ? ಕನಸಿನ ಬೇಡಿಕೆಗೆ, ಕನಸಿನ ಈಡೇರಿಕೆ!
ದಾಂಪತ್ಯದಲ್ಲಿ ಇಂತಹ ಹಾಸ್ಯದ ಸವಿಯನ್ನು ಸವಿಯುವ ಮನಸ್ಥಿತಿ ಇಬ್ಬರಲ್ಲೂ ಇರಬೇಕು. ಆಗ ವ್ಯಕ್ತಿತ್ವವೆಂಬ ಬಂಗಾರ ಗೋಚರಿಸುತ್ತದೆ. ಆ ಸಂಸಾರವೆಂದರೆ ಎಸ್.ವಿ.ಪಿ. ಯವರು ಹೇಳಿದಂತೆ
ಬೆಳ್ಳಿಯ ಬಾಗಿಲು, ಚಿನ್ನದ ದೇಗುಲ
ಒಳಗಡೆ ಬಹುಮುತ್ತು ರತ್ನ
ಬೀಗದ ಕೈ ತಂದು ಬಾಗಿಲನು
ತೆಗೆಯಲು, ನೀನೊಮ್ಮೆ ಮಾಡು ಪ್ರಯತ್ನ

ಎಂಬ ಮಾತು ನಿಜವಾಗುತ್ತದೆ.
ದಾಂಪತ್ಯವೆಂಬ ಚಿನ್ನದ ದೇಗುಲದಲ್ಲಿ ಪ್ರೀತಿ, ವಿಶ್ವಾಸ, ತಾಳ್ಮೆ, ಹಾಸ್ಯ, ನೋವು ನಲಿವುಗಳೆಂಬ ಬಹುಮುತ್ತು ರತ್ನಗಳಿವೆ. ವಿವಾಹವೆಂಬುದು ಅದನ್ನು ತೆರೆವ ಕಿಲಿಕೈ. ದಾಂಪತ್ಯ ಸುಖಕರವಾಗಬೇಕಾದರೆ, ಧರಿಸುವ ಆಭರಣ ಗಳಿಸುವ ಆಸ್ತಿ ಹೆಚ್ಚಿದರೆ ಸಾಲದು. ಅದಕ್ಕಿಂದ ಅತ್ಯಮೂಲ್ಯವಾದ ವ್ಯಕ್ತಿತ್ವ ವಿಕಸನದ ಅಂಶಗಳನ್ನು ಅಳವಡಿಸಿಕೊಳ್ಳುವುದೇ ಸುಖಸಂಸಾರದ ಸೂತ್ರಗಳು.

- ಎಚ್.ಎಸ್. ನವೀನಕುಮಾರ್ ಹೊಸದುರ್ಗ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com