ಪಂಚಭೂತ ಸ್ಥಾನಮಾನ

Published: 03rd July 2014 02:00 AM  |   Last Updated: 02nd July 2014 01:28 AM   |  A+A-


Posted By : Vishwanath
ನಮ್ಮ ಶರೀರ ಪಂಚಭೂತಗಳಿಂದ ಕೂಡಿದ್ದಾಗಿದೆ. ಭೂಮಿ, ಆಕಾಶ, ನೀರು, ಅಗ್ನಿ ಮತ್ತು ಗಾಳಿ ಇವೇ ಆ ಪಂಚಭೂತಗಳು. ಇವುಗಳ ಮಿಶ್ರಣ ಎಲ್ಲ ವ್ಯಕ್ತಿಗಳಲ್ಲೂ ಒಂದೇ ಆಗಿರುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಒಬ್ಬ ವ್ಯಕ್ತಿಯಲ್ಲಿ ಕೂಡ ಕಾಲದಿಂದ ಕಾಲಕ್ಕೆ ಭಿನ್ನವಾಗಿರುತ್ತದೆ. ಆದ್ದರಿಂದಲೇ ಪ್ರತಿಯೊಬ್ಬರ ಆಲೋಚನಾ ರೀತಿ ವಿಭಿನ್ನವಾಗಿರುತ್ತದೆ. ಅವರ ಹೊರರೂಪಗಳಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಜೊತೆಗೆ, ವ್ಯಕ್ತಿಯೊಬ್ಬನೇ ಆದರೂ, ಅವನ ನಡವಳಿಕೆ ಸಮಯಕ್ಕೆ ಅನುಸಾರವಾಗಿರುತ್ತದೆ. ಒಬ್ಬಾಕೆ ಕುರೂಪಿಯಾಗಿಯೂ ಇನ್ನೊಬ್ಬಾಕೆ ಅತಿ ಸುಂದರಿಯಾಗಿ ಕಾಣುವುದು ಇದರಿಂದಲೇ. ವ್ಯಕ್ತಿಯ ಆರೋಗ್ಯ, ಅನಾರೋಗ್ಯ, ಕಾಯಿಲೆ, ಮುಪ್ಪು ಎಲ್ಲದಕ್ಕೂ ಪಂಚಭೂತಗಳ ಮಿಶ್ರಣ ಪ್ರಮಾಣದಲ್ಲಿನ ಏರುಪೇರೇ ಕಾರಣ. ಪಂಚಭೂತಗಳಲ್ಲಿ ಯಾವುದಾದರೊಂದು ಅಂಶ ಹೆಚ್ಚಾಯಿತೆಂದರೆ, ಮಿಕ್ಕ ಯಾವುದೋ ಒಂದಂಶ ಇಳಿಕೆ ಕಾಣುತ್ತದೆ. ಅಥವಾ ಮಿಕ್ಕೆಲ್ಲ ಅಂಶಗಳೂ ಕಡಿಮೆಯಾಗಬಹುದು. ಪ್ರತ್ಯೇಕವಾಗಿ ಅಂಶಗಳ ಪ್ರಮಾಣ ಹೆಚ್ಚುಕಮ್ಮಿ ಇದ್ದರೂ ಇಡಿಯಾಗಿ ಪಂಚಭೂತಗಳ ಒಟ್ಟು ಪ್ರಮಾಣ ಒಂದೇ ಆಗಿರುತ್ತದೆ.
ಯೋಗ ಮತ್ತು ಸನಾತನ ಕ್ರಿಯೆಗಳು ಪಂಚಭೂತಗಳ ಅಂಶಗಳನ್ನು ಸಮತೋಲನದಲ್ಲಿ ಇಡುವುದಕ್ಕೆ ಸಹಕಾರಿ. ಇದರ ಮೇಲೆ ಹತೋಟಿ ಸಾಧಿಸಿದಾತ ಯೋಗಿ ಅನಿಸಿಕೊಳ್ಳಬಲ್ಲ. ಹಾಗೂ ಆತ ಆಕರ್ಷಣೆಯ ಕೇಂದ್ರಬಿಂದು ಆಗಬಲ್ಲ.  ಮಾನವ ವಿಕಾಸವನ್ನು ನಿಮಗೆ ಹೀಗೆ ವಿವರಿಸುವ ಪ್ರಯತ್ನ ಮಾಡುತ್ತೇನೆ. ಮನುಷ್ಯನ ದೇಹದಲ್ಲಿ ಪಂಚಭೂತಗಳು 5:4:3:2:1 ಈ ಅನುಪಾತದಲ್ಲಿ ಇದೆ ಎಂದಿಟ್ಟುಕೊಳ್ಳಿ. ಇಲ್ಲಿ ಐದು ಭೂಮಿ, ಒಂದು ಆಕಾಶ ಎಂದು ಪರಿಗಣಿಸತಕ್ಕದ್ದು. ಭೂಮಿಯ ಅಂಶ ಹೆಚ್ಚುತ್ತಾ ಹೋದಂತೆ ಆಕಾಶದ ಅಂಶ ಕಡಿಮೆ ಆಗುತ್ತಾ ಹೋಗುತ್ತದೆ. ದೇಹದ ಸಮತೋಲನದ ಮೇಲೆ ಇದು ಪರಿಣಾಮ ಬೀರುವುದಿಲ್ಲ ನಿಜ. ಆದರೆ ಗುಣನಡತೆಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಆಗುವ ಬದಲಾವಣೆಗಳು ಮನುಷ್ಯನ ತೇಜಸ್ಸನ್ನು ಹೆಚ್ಚಿಸುವುದರಲ್ಲಿ ಅಥವಾ ಕುಗ್ಗಿಸುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಋಷಿ ವಾಲ್ಮೀಕಿಯವರನ್ನೇ ಇಲ್ಲಿ ಉದಾಹರಣೆಯಾಗಿ ನೋಡಬಹುದು. ಡಕಾಯಿತನಾಗಿದ್ದ ವಾಲ್ಮೀಕಿ, ಮನಪರಿವರ್ತನೆಗೊಂಡು ಯೋಗಜ್ಞಾನಿ ಆದದ್ದು, ರಾಮಾಯಣ ಮಹಾಕಾವ್ಯವನ್ನೇ ರಚಿಸಿದ್ದು ಗೊತ್ತಿಲ್ಲದ ಸಂಗತಿಯೇನಲ್ಲ. ಪಂಚಭೂತಗಳ ಮೂಲಪ್ರಮಾಣದಲ್ಲಿ ಆಗುವ ಬದಲಾವಣೆಗಳು ಮನುಷ್ಯನ ದೇಹ ಮತ್ತು ಮನಸ್ಸುಗಳಲ್ಲೂ ಬದಲಾವಣೆ ತರುತ್ತವೆ.
ಸನಾತನ ಕ್ರಿಯೆಯನ್ನು ಅಭ್ಯಸಿಸುವುದರಿಂದ ತತ್ವಶುದ್ಧಿ ಏರ್ಪಟ್ಟು ಪಂಚಭೂತಗಳ ಐದು ಅಂಶಗಳು ಸಮಪ್ರಮಾಣದಲ್ಲಿ ಜೊತೆಯಾಗುತ್ತವೆ ಹಾಗೂ ಅವುಗಳ ಶುದ್ಧಿಯೂ ಆಗುತ್ತದೆ. ಒಬ್ಬ ಗುರುವಿನ ಬಳಿ ಸನಾತನ ಕ್ರಿಯೆ ಕಲಿತುಕೊಳ್ಳುವುದು ನಿಮ್ಮ ವ್ಯಕ್ತಿತ್ವವನ್ನು ಬದಲಿಸಬಲ್ಲದು.
ವಿ.ಸೂ: ಯೋಗಿ ಅಶ್ವಿನಿಯವರು ಜುಲೈ ಪೂರ್ತಿ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ತತ್ವಶುದ್ಧಿ ಶಿಬಿರಕ್ಕೆ ನೊಂದಾಯಿಸಿಕೊಳ್ಳುವ ಆಸಕ್ತಿ ಇರುವವರು ಮೊ. 7406175228ಕ್ಕೆ ಕರೆ ಮಾಡಬಹುದು ಅಥವಾ dhyan@dhyanfoundation.comಗೆ ಇಮೇಲ್ ಕಳಿಸಬಹುದು.


-ಯೋಗಿ ಅಶ್ವಿನಿ

Stay up to date on all the latest ಭವಿಷ್ಯ-ಆಧ್ಯಾತ್ಮ news with The Kannadaprabha App. Download now
facebook twitter whatsapp