ನಾಳೆ ಕಂಕಣ ಸೂರ್ಯಗ್ರಹಣ: ಮಡಿಕೇರಿಯ ಕುಟ್ಟ ಗ್ರಾಮ ವಿಶೇಷವೇಕೆ?, ಯಾವ ರಾಶಿಯವರು ಏನು ಮಾಡಬೇಕು?

ನಾಳೆ ಡಿಸೆಂಬರ್ 26ರಂದು ಅಪರೂಪದ ಕಂಕಣ ಸೂರ್ಯ ಗ್ರಹಣ ಸಂಭವಿಸುತ್ತಿದೆ  ಈ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಕಾತರಿಸುತ್ತಿದ್ದರೆ, ವಿಜ್ಞಾನಿಗಳು ಅಧ್ಯಯನಕ್ಕೆ ದೊರಕಿರುವ ಅವಕಾಶದ ಸದುಪಯೋಗಕ್ಕೆ ಸಿದ್ಧರಾಗಿದ್ದಾರೆ.
ಕಂಕಣ ಸೂರ್ಯಗ್ರಹಣ
ಕಂಕಣ ಸೂರ್ಯಗ್ರಹಣ

ಬೆಂಗಳೂರು: ನಾಳೆ ಡಿಸೆಂಬರ್ 26ರಂದು ಅಪರೂಪದ ಕಂಕಣ ಸೂರ್ಯ ಗ್ರಹಣ ಸಂಭವಿಸುತ್ತಿದೆ  ಈ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಕಾತರಿಸುತ್ತಿದ್ದರೆ, ವಿಜ್ಞಾನಿಗಳು ಅಧ್ಯಯನಕ್ಕೆ ದೊರಕಿರುವ ಅವಕಾಶದ ಸದುಪಯೋಗಕ್ಕೆ ಸಿದ್ಧರಾಗಿದ್ದಾರೆ.

ಜ್ಯೋತಿಷಿಗಳ ಪ್ರಕಾರ ಅತ್ಯಂತ ಅಪಾಯಕಾರಿ ಕೇತುಗ್ರಸ್ಥ ಸೂರ್ಯ ಗ್ರಹಣ ಇದಾಗಿದ್ದು, ದ್ವಾದಶ ರಾಶಿಗಳ ಮೇಲೆ  ಸೂರ್ಯ ಗ್ರಹಣದ ಪರಿಣಾಮ ಬೀಳಲಿದೆ.   ಗುರುವಾರ ಬೆಳಗ್ಗೆ 7 ಗಂಟೆಗೆ ದೇವಾಲಯಗಳು ಬಂದ್ ಆಗಲಿದೆ. ಬೆಂಗಳೂರು ಭಾಗದಲ್ಲಿ ಬೆಳಗ್ಗೆ 8.05 ರಿಂದ 11.04 ರವರೆಗೂ ಗ್ರಹಣ ಸಂಭವಿಸಲಿದೆ.

ಈ ಸೂರ್ಯ ಗ್ರಹಣವು ದಕ್ಷಿಣ ಭಾರತದಲ್ಲಿ ಅದರಲ್ಲೂ ಕುಟ್ಟದ ಕಾಯಮಾನಿ ಪ್ರದೇಶದಲ್ಲಿ ವಿಶೇಷವಾಗಿ ಗೋಚರಿಸುವ ಕಾರಣಕ್ಕೆ ವಿಜ್ಞಾನಿಗಳ ಆಸಕ್ತಿಯ ಪ್ರದೇಶವಾಗಿದೆ. ದೇಶದ ಇತರೆ ಭಾಗದಲ್ಲಿ ಸೂರ್ಯಗ್ರಹಣದ ಪ್ರಮಾಣವು ಬೇರೆ ಬೇರೆ ರೀತಿಯಿದ್ದರೆ, ಕೊಡಗಿನ ಕುಟ್ಟದಲ್ಲಿ ಶೇ.100ರಷ್ಟು ಸೂರ್ಯಗ್ರಹಣ ಗೋಚರಿಸಲಿದೆ ಎಂದು ಖಗೋಳ ವಿಜ್ಞಾನಿಗಳು ಮಾಹಿತಿ ನೀಡಿದ್ದು, ಕುಟ್ಟ ಗ್ರಾಮದತ್ತ ಎಲ್ಲರ ಗಮನವೂ ಕೇಂದ್ರಿಕೃತವಾಗಿದೆ.

ವಿಸ್ಮಯ ವೀಕ್ಷಣೆ ಹಾಗೂ ಅಧ್ಯಯನಕ್ಕೆ ದೇಶದ ಹಲವೆಡೆಯಿಂದ ಖಗೋಳ ವಿಜ್ಞಾನಿಗಳು ಈ ಪ್ರದೇಶಕ್ಕೆ ಬರುತ್ತಿದ್ದಾರೆ. ಗ್ರಹಣ ವೀಕ್ಷಣೆಗೆ, ಪುಣೆಯ ಖಗೋಳ ಮತ್ತು ಪರಿಸರ ಕೇಂದ್ರದ ವಿಜ್ಞಾನಿಗಳ ತಂಡವು ವಿಶೇಷ ವ್ಯವಸ್ಥೆ ಮಾಡುತ್ತಿದೆ. ಗ್ರಹಣದ ಬಗ್ಗೆ ಜಾಗೃತಿ ಮೂಡಿಸಲು ಒಂದು ಸಾವಿರ ವಿದ್ಯಾರ್ಥಿಗಳನ್ನು ಕರೆಸಲಾಗುತ್ತಿದೆ. ಕೊಡಗು, ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳು ಗ್ರಹಣ ವೀಕ್ಷಣೆಗೆ ಬರಲಿದ್ದಾರೆ. ಅದಕ್ಕಾಗಿಯೇ ಕಾಫಿ ತೋಟದ ಪಕ್ಕವೇ ವಿಶಾಲ ಮೈದಾನ ಸಜ್ಜುಗೊಳಿಸಲಾಗಿದ್ದು ಬಂದವರು ಸೌರ ಕನ್ನಡಕದ ಮೂಲಕವೇ ಈ ವಿಸ್ಮಯ ಕಣ್ತುಂಬಿಕೊಳ್ಳಬಹುದಾಗಿದೆ.

ಕುಟ್ಟ, ಬಿರುನಾಣಿ ಪ್ರದೇಶಗಳು ಪೂರ್ಣ ಪ್ರಮಾಣದ ಗ್ರಹಣ ಗೋಚರಿಸುವ ರೇಖೆಯಲ್ಲಿದ್ದು, ಈ ಪ್ರದೇಶಗಳು ವಿಜ್ಞಾನಿಗಳ ಆಸಕ್ತಿಯ ತಾಣಗಳಾಗಿವೆ. 26ರಂದು ಬೆಳಗ್ಗೆ 8.05ರಿಂದ 11ರ ತನಕ ಸೂರ್ಯಗ್ರಹಣ ಸಂಭವಿಸಲಿದೆ. ಬೆಳಗ್ಗೆ 9ರಿಂದ 9.30ರ ನಡುವೆ ಈ ಸ್ಥಳದಲ್ಲಿ ಪೂರ್ಣ ಪ್ರಮಾಣದಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ. ಬೆಂಗಳೂರಿನಲ್ಲಿ ಶೇ.89.4, ಚೆನ್ನೈನಲ್ಲಿ ಶೇ.84, ಮುಂಬೈನಲ್ಲಿ ಶೇ.78ರಷ್ಟು ಸೂರ್ಯಗ್ರಹಣವಿದ್ದರೆ, ಕೊಡಗಿನ ಕುಟ್ಟದಲ್ಲಿ ಶೇ.99ರಿಂದ ಶೇ.100ರಷ್ಟು ಗ್ರಹಣ ಕಾಣಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಇದೇವೇಳೆ ಯಾವುದೇ ಕಾರಣಕ್ಕೂ ಯಾರೂ ಸಹ ಬರಿಗಣ್ಣಿನಲ್ಲಿ ಸೂರ್ಯಗ್ರಹಣ ವೀಕ್ಷಿಸಬಾರದು, ಸೌರ ಕನ್ನಡಕದ ಮೂಲಕವೇ ಕೌತುಕ ಕ್ಷಣಗಳನ್ನು ಕಣ್ತುಂಬಿಕೊಳ್ಳಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ. 

ವಿಶೇಷ ಪೂಜೆಗೆ ಜ್ಯೋತಿಷಿಗಳ ಸಲಹೆ:
ಪೂರ್ವಾಷಾಢ, ಅನುರಾಧ, ಜ್ಯೇಷ್ಠ, ಮೂಲ, ಮಖ ನಕ್ಷತ್ರ ಹಾಗೂ ಧನುರ್, ಮಕರ, ವೃಶ್ಚಿಕ ರಾಶಿಯವರಿಗೆ ಗ್ರಹಣ ಸಂಭವದ ವೇಳೆ ಹೆಚ್ಚು ಪ್ರಭಾವ ಬೀಳಲಿದೆ. ಸೂರ್ಯನಿಗೆ ಹತ್ತಿರವಿರುವ ನಕ್ಷತ್ರಗಳು ಅಪಾಯಕ್ಕೆ ಹತ್ತಿರವಿದ್ದು, ಅವಘಡಗಳಿಂದ ದೂರವಿರಲು ನದಿ ಸ್ನಾನ ಪೂಜೆ ಮುಖ್ಯವಾಗಿದೆ. ಬೆಂಕಿ ಅವಘಡಗಳು ಸಂಭವಿಸುವ ಸನ್ನಿವೇಶ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ವಿಶೇಷ ಪೂಜೆ ಸಲ್ಲಿಸಬೇಕೆಂದು ಜ್ಯೋತಿಷ್ಯರು ಹೇಳಿದ್ದಾರೆ. 

ದರ್ಬೆ ಹಾಕಿ ದೋಷದಿಂದ ದೂರವಿರಲು ಪ್ರಯತ್ನ ಮಾಡಬಹುದಾಗಿದೆ. ದೇವಾಲಯ ದೇವರ ದರ್ಶನ ಮುಖ್ಯವಾಗಿದೆ. ಗರ್ಭಿಣಿಯರು ಗ್ರಹಣ ಕಾಲ ಹೊರಬರುವಂತಿಲ್ಲ. ಶಾಂತಿ ಹೋಮ ಮಾಡಲು ಆಗದವರು ತಮ್ಮ ಶಕ್ತಿಗನುಸಾರವಾಗಿ ಗೋಧಿ ಮತ್ತು ಎಣ್ಣೆಯನ್ನು ದೇವಾಲಯದಲ್ಲಿ ದಾನ ನೀಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com