ನಾವು ಪ್ರತಿದಿನ ಬೆಳಿಗ್ಗೆ ಕೇಳುವ ವೆಂಕಟೇಶ್ವರ ಸುಪ್ರಭಾತ ರಚಿಸಿದ್ದು ಯಾರು ಗೊತ್ತಾ?

ನಾವು ಕೇಳುವ ಸಂಪೂರ್ಣ ಸುಪ್ರಭಾತಕ್ಕೂ ರಾಮಾಯಣದ ಕಾಲಕ್ಕೂ ಸಂಬಂಧವಿಲ್ಲ. ಅದರಲ್ಲಿರುವ ಕೆಲವು ಸಾಲುಗಳನ್ನಷ್ಟೇ ವಿಶ್ವಾಮಿತ್ರರು ಹೇಳಿದ್ದು. ಆ ನಂತರದ್ದೆಲ್ಲಾ 600 ವರ್ಷಗಳ ಹಿಂದೆ ರಚನೆಯಾದದ್ದು. 

Published: 14th October 2019 08:33 AM  |   Last Updated: 14th October 2019 08:33 AM   |  A+A-


who wrote Venkatesa Suprabhatam: here are the details

ನಾವು ಪ್ರತಿದಿನ ಬೆಳಿಗ್ಗೆ ಕೇಳುವ ವೆಂಕಟೇಶ್ವರ ಸುಪ್ರಭಾತ ರಚಿಸಿದ್ದು ಯಾರು ಗೊತ್ತಾ?

Posted By : Srinivas Rao BV
Source : Online Desk

ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೇ
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್||...

ಈ ಸಾಲುಗಳು ನಾವು ಪ್ರತಿ ಬೆಳಿಗ್ಗೆ ಕೇಳುವ ವೆಂಕಟೇಶ ಸುಪ್ರಭಾತದ್ದು, ಸುಪ್ರಭಾತ ಆರಂಭ ಆಗೋದೇ ಮಹಿತೋನ್ನತ ಚರಿತ್ರೆ ಹೊಂದಿರುವ ರಾಮನನ್ನು ಉದ್ದೇಶಿಸಿದ ಸಾಲುಗಳಿಂದ. ಮಹರ್ಷಿ ವಿಶ್ವಾಮಿತ್ರರು ರಾಕ್ಷಸರ ವಧೆಗಾಗಿ ರಾಮ ಲಕ್ಷ್ಮಣರನ್ನು ಕಾಡಿಗೆ ಕರೆದೊಯ್ದಿದ್ದಾಗ ರಾಮನನ್ನು ಬೆಳಿಗ್ಗೆ ಎಬ್ಬಿಸಲು ಹೇಳಿದ ಸಾಲುಗಳಿವು. 

ಹಾಗಾದರೆ ವೆಂಕಟೇಶ ಸುಪ್ರಭಾತಕ್ಕೂ ರಾಮಾಯಣಕ್ಕೂ ಸಂಬಂಧವೇನು ಎಂಬ ಪ್ರಶ್ನೆ ಮೂಡುವುದು ಸಹಜ, ವಿಶ್ವಾಮಿತ್ರರು ರಾಮನನ್ನು ಎಬ್ಬಿಸುವುದಕ್ಕೆ ಹೇಳಿದ ಸಾಲುಗಳು ಅದ್ಹೇಗೆ ವೆಂಕಟೇಶ ಸುಪ್ರಭಾತವಾಗಲು ಸಾಧ್ಯ ಅಂತೀರಾ? ಅದಕ್ಕೆ ಉತ್ತರ ಇಲ್ಲಿದೆ. ನಾವು ಕೇಳುವ ಸಂಪೂರ್ಣ ಸುಪ್ರಭಾತಕ್ಕೂ ರಾಮಾಯಣದ ಕಾಲಕ್ಕೂ ಸಂಬಂಧವಿಲ್ಲ. ಅದರಲ್ಲಿರುವ ಕೆಲವು ಸಾಲುಗಳನ್ನಷ್ಟೇ ವಿಶ್ವಾಮಿತ್ರರು ಹೇಳಿದ್ದು. ಆ ನಂತರದ್ದೆಲ್ಲಾ 600 ವರ್ಷಗಳ ಹಿಂದೆ ರಚನೆಯಾದದ್ದು. 

ವೆಂಕಟೇಶ್ವರ ಸುಪ್ರಭಾತವನ್ನು ಸಂಪೂರ್ಣವಾಗಿ ರಚಿಸಿದ ಆಚಾರ್ಯರಿಗೆ ಪ್ರತಿವಾದಿ ಭಯಂಕರ ಎಂಬ ಬಿರುದೂ ಇತ್ತು. ಅವರು ಓರ್ವ ವೈಷ್ಣವ ಆಚಾರ್ಯರು.

ಪ್ರತಿವಾದಿ ಭಯಂಕರ ಎಂಬ ಬಿರುದು ಹೇಗೆ ಬಂತು: ವೆಂಕಟೇಶ್ವರ ಸುಪ್ರಭಾತ ರಚಿಸಿದವರು ನಂಬಿ ಅನಂತಾಚಾರ್ಯ ದಂಪತಿಗಳ ಪುತ್ರ ಹಸ್ತಗಿರಿ ಅನಂತಾಚಾರ್ ಅಣ್ಣಾ. ಹುಟ್ಟಿದ್ದು 1360, ಶ್ರೀವೈಷ್ಣವ ಸಂಪ್ರದಾಯದ ಸ್ವಾಮಿ ಪಿಳ್ಳೈ ಲೋಕಾಚಾರ್ಯಾಅರ್ ಹಾಗೂ ತಿರುವಿಧಿಪಿಳ್ಳೈ ಅವರ ಮನೆತದಲ್ಲಿ.  ಈ ಮನೆತನದಲ್ಲಿ ಸ್ವಾಮಿ ಮುದುಂಬೈ ನಂಬಿ ಅನಂತಾಚಾರ್ಯರು ರಾಮಾನುಜಾಚಾರ್ಯರು ನೇಮಿಸಿದ್ದ 74 ಸಿಂಹಾಧಿಪತಿಗಳಲ್ಲಿ ಒಬ್ಬರಾಗಿದ್ದರು.  ಹಸ್ತಗಿರಿ ಅನಂತಾಚಾರ್ ವೇದಾಂತ ದೇಶಿಕರ ಶಿಷ್ಯರಾಗಿದ್ದ ಸ್ವಾಮಿ ನಯನ ವರದಾಚಾರ್ಯಾರ್ ಎಂಬ ಗುರುವಿನ ಮಾರ್ಗದರ್ಶನದಲ್ಲಿ ಕಂಚಿಯಲ್ಲಿ(ಕಾಂಚಿಪುರ) ದಲ್ಲಿ ಅಧ್ಯಯನ ಮಾಡುತ್ತಾರೆ.

ಬಾಲ್ಯದಿಂದಲೇ ದೈವಭಕ್ತಿ, ಆಸಕ್ತಿಯುತ ಅಧ್ಯಯನವೇ ಮೊದಲಾದ ಗುಣಗಳಿಂದ ಸಂಪನ್ನರಾದ ಹಸ್ತಗಿರಿ ಗುರುಗಳ ಮೆಚ್ಚುಗೆಗೂ ಪಾತ್ರವಾಗಿರುತ್ತಾರೆ. ಹಸ್ತಗಿರಿ ತಮ್ಮ ಗುರುಗಳಲ್ಲಿ ಅಧ್ಯಯನ ಮಾಡುತ್ತಿದ್ದ ಅವಧಿಯಲ್ಲಿ ಅದ್ವೈತ ಸಿದ್ಧಾಂತದ ಪಂಡಿತರಾದ ನರಸಿಂಹ ಮಿಶ್ರಾ ಎಂಬುವವರು ಕಂಚಿ(ಕಾಂಚೀಪುರ)ಕ್ಕೆ ಭೇಟಿ ನೀಡಿ ಅಲ್ಲಿನ ವೇದ-ವಿದ್ವಾಂಸರೊಂದಿಗೆ ವಾದ ನಡೆಸಿ ಅದ್ವೈತದ ಶ್ರೇಷ್ಠತೆಯನ್ನು ಪ್ರಚಾರ ಮಾಡಲು ಉತ್ಸುಕರಾಗಿರುತ್ತಾರೆ.  ಒಂದು ವೇಳೆ ನರಸಿಂಹ ಮಿಶ್ರಾ ಅವರ ಬಳಿ ವಾದದಲ್ಲಿ ಸೋತರೆ ಪ್ರತಿವಾದಿಗಳು ಅದ್ವೈತ ಮತವನ್ನು ಅನುಸರಿಸಬೇಕಾಗುತ್ತದೆ, ಅಥವಾ ನರಸಿಂಹ ಮಿಶ್ರರೇ ವಾದಲ್ಲಿ ಸೋತರೆ ಪ್ರತಿವಾದಿಗಳ( ವೈಷ್ಣವ) ಮತವನ್ನು ಅಂಗೀಕರಿಸಬೇಕಾಗುತ್ತದೆ ಎಂಬುದು ವಾದದ ಷರತ್ತು. ಹೀಗೆಯೇ ವಾದ ಮುಂದುವರೆಯುತ್ತಾ, ನರಸಿಂಹ ಮಿಶ್ರಾ, ಸ್ವಾಮಿ ನಯನ ವರದಾಚಾರ್ಯಾರ್  ಅವರನ್ನು ವಾದಕ್ಕೆ ಆಹ್ವಾನಿಸುತ್ತಾರೆ. ಆದರೆ ಇದನ್ನೂ ನಿರಾಕರಿಸಲೂ ಸಾಧ್ಯವಾಗದೆ ಒಪ್ಪಲೂ ಸಾಧ್ಯವಾಗದೇ ವರದಾಚಾರ್ಯಾರ್  ಅವರು ಗೊಂದಲದಲ್ಲಿರುತ್ತಾರೆ. ಇತ್ತ ವರದಾಚಾರ್ಯಾರ್ ಅವರ ಶಿಷ್ಯರಾಗಿದ್ದ ಹಸ್ತಗಿರಿ ಅನಂತಾಚಾರ್ ತಮ್ಮ ಗುರುಗಳ ಗೊಂದಲಕ್ಕೆ ಕಾರಣವಾಗಿರುವ ಅಂಶವನ್ನು ಹಿರಿಯ ವಿದ್ಯಾರ್ಥಿಗಳಿಂದ ತಿಳಿದು, ನರಸಿಂಹ ಮಿಶ್ರಾ ಅವರೊಂದಿಗೆ ವಾದ ನಡೆಸಲು ಗುರುಗಳ ಅನುಮತಿ ಕೇಳುತ್ತಾರೆ. ಇದರಿಂದ ಅಚ್ಚರಿಗೊಳಗಾದ ವರದಾಚಾರ್ಯಾರ್ ಅವರು, ಹಸ್ತಗಿರಿಗೆ ಹಯಗ್ರೀವ ಮಂತ್ರೋಪದೇಶದ ಮೂಲಕ ಆಶೀರ್ವಾದ ಮಾಡಿ ಕಳಿಸುತ್ತಾರೆ. ಅಂತಿಮವಾಗಿ ನರಸಿಂಹ ಮಿಶ್ರಾ ಅವರೊಂದಿಗೆ ಪುಟ್ಟ ಬಾಲಕ ಹಸ್ತಗಿರಿ ವಾದದಲ್ಲಿ ಜಯಗಳಿಸಿ, ಪಂಡಿತ- ವಿದ್ವಾಂಸರಿಂದ ಮೆಚ್ಚುಗೆಗಳಿಸುತ್ತಾರೆ. ಇದರಿಂದ ಅತ್ಯಂತ ಸಂತುಷ್ಟರಾದ ವರದಾಚಾರ್ಯಾರ್ ಅವರು, ಹಸ್ತಗಿರಿಗೆ ಪ್ರತಿವಾದಿ ಭಯಂಕರ ಎಂಬ ಬಿರುದು ನೀಡುತ್ತಾರೆ. 

ವೆಂಕಟೇಶ್ವರ ಸುಪ್ರಭಾತ ರಚನೆ: ಪ್ರತಿವಾದಿ ಭಯಂಕರ ಹಸ್ತಗಿರಿ ಅನಂತಾರ್ ಅಣ್ಣ, ಶ್ರೀನಿವಾಸನ ದರ್ಶನಕ್ಕಾಗಿ ತಿರುಪತಿಗೆ ತೆರಳುತ್ತಾರೆ. ಅಲ್ಲಿ ವೆಂಕಟೇಶ್ವರನ ಸೇವಕರಾಗಿದ್ದ ಸ್ವಾಮಿ ಅನಂತಪಿಳ್ಳೈ ಅವರೊಂದಿಗೆ ವೆಂಕಟೇಶ್ವರ ಸ್ವಾಮಿಯ ಸೇವೆಗೆ ಮುಂದಾಗುತ್ತಾರೆ. ಪ್ರತಿ ದಿನ ವೆಂಕಟೇಶ್ವರ ಸ್ವಾಮಿಯ ಪೂಜೆಗೆ ಅಗತ್ಯವಿರುವ ಆಕಾಶ ಗಂಗೆಯಿಂದ ನೀರನ್ನು ತರುವ ಜವಾಬ್ದಾರಿ ಹೊತ್ತಿದ್ದ ಹಸ್ತಗಿರಿಗೆ ಒಂದು ದಿನ ಹಸ್ತಗಿರಿಗೆ ಅಚ್ಚರಿ ಎದುರಾಗುತ್ತೆ. ಶ್ರೀರಂಗಂ ನಿಂದ ಬಂದ ಭಕ್ತರೊಬ್ಬರು ನೀರು ತರುತ್ತಿದ್ದ ಹಸ್ತಗಿರಿಗೆ ಎದುರಾಗುತ್ತಾರೆ. ಹಸ್ತಗಿರಿಯೊಂದಿಗೆ ಮಾತನಾಡುತ್ತಾ ಶ್ರೀರಂಗಂ ನ ಭಕ್ತರು ಅಲ್ಲಿ ಸಾಕಷ್ಟು ಸೇವೆಗಳನ್ನು ಮಾಡಿ ರಾಮಾನುಜಾಚಾರ್ಯರ ತತ್ವವನ್ನು ಚಾಚೂ ತಪ್ಪದೇ ಅನುಸರಿಸುತ್ತಿರುವ ಮಾಮುನಿಗಳ್ ಸ್ವಾಮಿಗಳ ಬಗ್ಗೆ ಹೇಳಲು ಪ್ರಾರಂಭಿಸುತ್ತಾರೆ. ಇದರಲ್ಲೆ ತಲ್ಲೀನರಾದ ಹಸ್ತಗಿರಿ ವೆಂಕಟೇಶ್ವರ ಸ್ವಾಮಿಯ ಪೂಜಾಕೈಂಕರ್ಯಕ್ಕೆ ನೀರು ನೀಡುವುದನ್ನೂ ಮರೆತುಹೋಗುತ್ತಾರೆ. ಕೆಲವು ಸಮಯದ ನಂತರ ದೆವಾಲಯದವರೇ ಹಸ್ತಗಿರಿಯನ್ನು ಹುಡುಕಿಂಡು ಬಂದು ನೀರನ್ನು ಪಡೆದು ಹೋಗುತ್ತಾರೆ. ಆದರೆ ಅದಕ್ಕೆ ಸುಗಂಧ ವಸ್ತುಗಳನ್ನು ಸೇರಿಸುವುದಕ್ಕೆ ಮರೆತಿರುತ್ತಾರೆ, ಇದನ್ನು ಹೇಳುವಷ್ಟರಲ್ಲಿ ಪೂಜೆಯೂ ಮುಕ್ತಾಯಗೊಂಡಿರುತ್ತದೆ. ಮಾಡಿದ ಪಶ್ಚಾತ್ತಾಪಕ್ಕೆ ದೇವರ ಬಳಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದ  ಹಸ್ತಗಿರಿಯೊಂದಿಗೆ ಸ್ವತಃ ವೆಂಕಟೇಶ್ವರನೇ ಮಾತನಾಡಲು ಪ್ರಾರಂಭಿಸಿ, ನೀರು ಸುಗಂಧಭರಿತವಾಗಿತ್ತೆಂದೂ ಪಶ್ಚಾತ್ತಾಪ ಪಡದಂತೆಯೂ ಹೇಳುತ್ತಾರೆ. ಇದನ್ನು ಸ್ವಾಮಿ ಮನವಾಳ ಮಾಮುನಿಗಳ್ ರ ವೈಭವವೆಂದೇ ಪರಿಗಣಿಸಿದ ಹಸ್ತಗಿರಿ ಅವರನ್ನು ಭೇಟಿ ಮಾಡಲು ಶ್ರೀರಂಗಂ ಗೆ ತೆರಳುತ್ತಾರೆ. ಇದಾದ ನಂತರ ಶ್ರೀರಂಗಂ ನಿಂದ ಹಸ್ತಗಿರಿ ಹಾಗೂ ಸ್ವಾಮಿ ಮಾಮುನಿಗಳ್ ಇಬ್ಬರೂ ತಿರುಮಲಕ್ಕೆ ಭೇಟಿ ನೀಡುತ್ತಾರೆ. ಭೇಟಿ ವೇಳೆ ಶ್ರೀನಿವಾಸ/ ವೆಂಕಟೇಶ್ವರ ಸ್ವಾಮಿಯ ವೈಭವ ಎಲ್ಲರಿಗೂ(ಸಾಮಾನ್ಯರಿಗೂ) ತಿಳಿಯುವ ರೀತಿಯಲ್ಲಿ ಕೀರ್ತನೆ ರಚಿಸುವಂತೆ ಸ್ವಾಮಿ ಮಾಮುನಿಗಳ್ ಹಸ್ತಗಿರಿ ಆಚಾರ್ಯರಿಗೆ ಸೂಚಿಸುತ್ತಾರೆ. ಅದರಂತೆಯೇ ಹಸ್ತಗಿರಿ ಅನಂತಾರ್ ಆಚಾರ್ಯರು 11 ಸ್ತೋತ್ರ, 16 ಪ್ರಪತ್ತಿ ಹಾಗೂ 14 ಮಂಗಳಗಳನ್ನುಳ್ಳ ಬೆಳಗಿನ ಸುಪ್ರಭಾತವನ್ನು ರಚಿಸುತ್ತಾರೆ. ಇದೇ ಶ್ಲೋಕ/ ಪದ್ಯಗಳು ವೆಂಕಟೇಶ್ವರ ಸುಪ್ರಭಾತ ಎಂದು ಖ್ಯಾತಿ ಪಡೆದು ಇಂದಿಗೂ ವೆಂಕಟೇಶ್ವರ ಸುಪ್ರಭಾತವಾಗಿ ಕೇಳಲ್ಪಡುತ್ತಿದೆ. 

Stay up to date on all the latest ಭವಿಷ್ಯ-ಆಧ್ಯಾತ್ಮ news with The Kannadaprabha App. Download now
facebook twitter whatsapp