ದೀಪಾವಳಿಯ ಮೊದಲ ದಿನ ನೀರು ತುಂಬುವುದು ಎಂದರೇನು, ಧನತ್ರಯೋದಶಿ ಆಚರಣೆ ಹೇಗೆ?
ದೀಪಾವಳಿಯ ಮೊದಲ ದಿನವನ್ನು ನೀರು ತುಂಬುವ ಶಾಸ್ತ್ರ ಮಾಡುತ್ತೇವೆ. ಇದಕ್ಕೆ ಉತ್ತರ ಭಾರತೀಯರು ಧನತ್ರಯೋದಶಿ ಎಂದು ಕರೆಯುತ್ತಾರೆ, ಅವರಿಗೆ ಇಂದು ಹೊಸ ಆರ್ಥಿಕ ವರ್ಷದ ಆರಂಭ ದಿನ.
Published: 12th November 2020 10:02 PM | Last Updated: 05th December 2020 06:29 PM | A+A A-

ಸಾಂದರ್ಭಿಕ ಚಿತ್ರ
ದೀಪಾವಳಿಯ ಮೊದಲ ದಿನವನ್ನು ನೀರು ತುಂಬುವ ಶಾಸ್ತ್ರ ಮಾಡುತ್ತೇವೆ. ಇದಕ್ಕೆ ಉತ್ತರ ಭಾರತೀಯರು ಧನತ್ರಯೋದಶಿ ಎಂದು ಕರೆಯುತ್ತಾರೆ, ಅವರಿಗೆ ಇಂದು ಹೊಸ ಆರ್ಥಿಕ ವರ್ಷದ ಆರಂಭ ದಿನ.
ಪುರಾಣದ ಪ್ರಕಾರ ಸಮುದ್ರ ಮಥನ ಆದಾಗ ಲಕ್ಷ್ಮಿ ದೇವಿ ಉದ್ಭವಿಸಿದ ದಿನ,ಅವಳೊಂದಿಗೆ ಅವಳ ಅಣ್ಣ-ತಮ್ಮಂದಿರು ಯಕ್ಷ, ಚಂದ್ರ, ಕಾಮಧೇನು, ಐರಾವತ, ಕಲ್ಪವೃಕ್ಷವೆಲ್ಲ ಬಂದ ದಿನ ಎಂದು. ಮನುಷ್ಯನಿಗೆ ಲೌಕಿಕ ಮತ್ತು ಲೋಕೋತ್ತರ ಸುಖ ಸಮೃದ್ಧಿಯನ್ನು ಕೊಡುವ ಶಕ್ತಿಗಳು ಉದ್ಭವಿಸಿದ ದಿನ. ಹಾಗಾಗಿ ಧನತ್ರಯೋದಶಿ, ಧನ್ ತೆರಸ್ ಎಂದು ಉತ್ತರ ಭಾರತದಲ್ಲಿ ಕರೆಯುತ್ತಾರೆ.
ಆಚರಣೆ ಹೇಗೆ: ಧನ ತ್ರಯೋದಶಿ ದಿನ ಲಕ್ಷ್ಮಿ ಮತ್ತು ಅವಳೊಂದಿಗೆ ಉದ್ಭವಿಸಿದ ಎಲ್ಲರ ಸಂಕೇತಗಳನ್ನು ಬರೆದು ಕಲಶವನ್ನಿಟ್ಟು ಪೂಜೆ ಮಾಡುತ್ತಾರೆ. ಕೆಲವರು ಬೃಂದಾವನದಂತಹ ಪ್ರಸಿದ್ಧ ಕ್ಷೇತ್ರಗಳಲ್ಲಿ ಹಿಂದಿನ ದ್ವಾದಶಿಯಿಂದ ಏಳು ದಿವಸಗಳ ದೀಪಾವಳಿ ಆಚರಣೆ ಮಾಡುತ್ತಾರೆ.
ಯಾವುದೇ ಹಬ್ಬ ಆಚರಿಸುವುದಕ್ಕೆ ಮೊದಲು ಮನೆಯಲ್ಲಿರುವ ಬಲೆ, ಕಸಗಳನ್ನು ಚೆನ್ನಾಗಿ ಹೊಡೆದು ಅಗತ್ಯವಿದ್ದರೆ ಸುಣ್ಣ ಬಣ್ಣ ಬಳಿದು ಇಡೀ ಮನೆಯನ್ನು, ಪಾತ್ರೆಗಳನ್ನು, ದೇವರ ಸಾಮಾನುಗಳನ್ನು ತೊಳೆದು ಹಬ್ಬಕ್ಕೆ ಅಣಿಯಾಗುವುದು ನಮ್ಮಲ್ಲಿ ಪ್ರತೀತಿ.
ಅದೇ ರೀತಿ ತ್ರಯೋದಶಿ ದಿನ ಸಂಜೆ ಸ್ನಾನದ ಮನೆಯನ್ನು, ಹಂಡೆ, ಪಾತ್ರೆಗಳನ್ನು ತೊಳೆದು ಚೆನ್ನಾಗಿ ಶುದ್ಧಮಾಡಿ, ಹಂಡೆಗೆ ಸುಣ್ಣ ಹಾಗೂ ಕೆಮ್ಮಣ್ಣು ಬಳಿದು, ರಂಗೋಲಿ ಹಾಕಿ, ಹೂ ಹಾಕಿ, ಹೊಸ ನೀರು ಹಂಡೆಗೆ ಹಾಕಿ ದೀಪ ಬೆಳಗಿ ಪೂಜೆ ಮಾಡುತ್ತಾರೆ. ಮರುದಿನ ಬೆಳಗ್ಗೆ ಈ ನೀರಿನಲ್ಲಿ ಸ್ನಾನ ಮಾಡಿ ಬಂದು ಹಬ್ಬಕ್ಕೆ ಅಣಿಯಾಗುವುದು. ಇದಕ್ಕೆ ನೀರು ತುಂಬುವ ಹಬ್ಬ ಎಂದು ಕರೆಯುತ್ತೇವೆ.
ನೀರು ತುಂಬುವ ಶಾಸ್ತ್ರ ಹಿಂದಿನ ಕಾಲದಲ್ಲಿ ಪ್ರತೀತಿಯಿತ್ತು. ಹಿಂದಿನ ಕಾಲದಲ್ಲಿ ಈಗಿನಂತೆ ಮನೆಯಲ್ಲಿ ನಳ್ಳಿ, ನೀರಿನ ಸಂಪರ್ಕವಿರಲಿಲ್ಲ. ಬಾವಿಯಿಂದಲೋ, ಕೆರೆಯಿಂದಲೋ ನೀರನ್ನು ತಂಬಿಗೆಯಲ್ಲಿ ಹೊತ್ತು ತಂದು ಹಂಡೆಯಲ್ಲಿ ತುಂಬಿಸಿಡುತ್ತಿದ್ದರು. ಈಗ ಹಳ್ಳಿಮನೆಗಳಲ್ಲಿಯೂ ಆ ಅವಶ್ಯಕತೆಯಿರುವುದಿಲ್ಲ. ಆದರೂ ಧಾರ್ಮಿಕ ಪದ್ಧತಿಯನ್ನು ಬಿಡಬಾರದು ಎಂದು ಜನರು ಆಚರಿಸುತ್ತಾರೆ.