ಬಲಿಪಾಡ್ಯಮಿ ಆಚರಣೆ ಏಕೆ ಮತ್ತು ಹೇಗೆ?
ಬಲಿಪಾಡ್ಯಮಿ ದಿನ ಬಲೀಂದ್ರ ರಾಜನನ್ನು ಆರಾಧಿಸುತ್ತೇವೆ, ಬಲೀಂದ್ರ ಮೂಲತಃ ಒಳ್ಳೆಯ ರಾಜನಾಗಿರುತ್ತಾನೆ, ಆದರೆ ಅವನ ಸುತ್ತಮುತ್ತಲಿರುವವರೆಲ್ಲ ಕೆಟ್ಟವರಾಗಿರುತ್ತಾರೆ. ತಾನು ಕೆಟ್ಟವನಲ್ಲದಿದ್ದರೂ ತನ್ನ ಸುತ್ತಲಿನ ರಾಕ್ಷಸರು ಮಾಡುತ್ತಿರುವ ಕೆಲಸಗಳನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿರುತ್ತಾನೆ.
Published: 13th November 2020 12:00 AM | Last Updated: 05th December 2020 06:29 PM | A+A A-

ಸಾಂದರ್ಭಿಕ ಚಿತ್ರ
ಬಲಿಪಾಡ್ಯಮಿ ದಿನ ಬಲೀಂದ್ರ ರಾಜನನ್ನು ಆರಾಧಿಸುತ್ತೇವೆ, ಬಲೀಂದ್ರ ಮೂಲತಃ ಒಳ್ಳೆಯ ರಾಜನಾಗಿರುತ್ತಾನೆ, ಆದರೆ ಅವನ ಸುತ್ತಮುತ್ತಲಿರುವವರೆಲ್ಲ ಕೆಟ್ಟವರಾಗಿರುತ್ತಾರೆ. ತಾನು ಕೆಟ್ಟವನಲ್ಲದಿದ್ದರೂ ತನ್ನ ಸುತ್ತಲಿನ ರಾಕ್ಷಸರು ಮಾಡುತ್ತಿರುವ ಕೆಲಸಗಳನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿರುತ್ತಾನೆ.
ಈ ಕೆಟ್ಟ ರಾಕ್ಷಸರ ಉಪಟಳವನ್ನು ಹತ್ತಿಕ್ಕಿ ಅವರನ್ನು ಪಾತಾಳ ಲೋಕಕ್ಕೆ ಕಳುಹಿಸಲು ವಿಷ್ಣುದೇವ ವಾಮನ ಅವತಾರದಲ್ಲಿ ಪುಟಾಣಿ ವಟುವಿನ ರೂಪದಲ್ಲಿ ಭೂಮಿಗೆ ಬಂದು ದಾನವನ್ನು ಕೇಳುತ್ತಾನೆ. ಬಲೀಂದ್ರ ರಾಜ ಕೊಡುಗೈ ದಾನಿ. ವಾಮನನಿಗೆ ನಿನಗೆ ಏನು ಬೇಕೆಂದು ಕೇಳು ಎಂದು ಕೇಳುತ್ತಾನೆ. ಆಗ ವಾಮನ ನನಗೆ ಮೂರು ಹೆಜ್ಜೆಗಳನ್ನಿಡುವಷ್ಟು ಜಾಗ ಕೊಡು ಎಂದು ಕೇಳುತ್ತಾನೆ.
ಕೇವಲ ಮೂರು ಹೆಜ್ಜೆಗಳನ್ನಿಡುವಷ್ಟು ಜಾಗವೇ ಎಂದು ಹಿಂದೆಮುಂದೆ ಯೋಚಿಸದೆ ಬಲೀಂದ್ರ ಒಪ್ಪುತ್ತಾನೆ, ಒಂದು ಹೆಜ್ಜೆಯನ್ನು ಭೂಲೋಕದಲ್ಲಿ, ಇನ್ನೊಂದು ಹೆಜ್ಜೆಯನ್ನು ಸ್ವರ್ಗ ಲೋಕದಲ್ಲಿ ಮೂರನೇ ಹೆಜ್ಜೆ ಎಲ್ಲಿಡುವುದು ಎಂದು ಕೇಳಿದಾಗ ತನ್ನ ತಲೆ ಮೇಲೆ ಇಡುವಂತೆ ಬಲೀಂದ್ರ ಹೇಳುತ್ತಾನೆ. ವಿಷ್ಣುದೇವ ಮೂರನೇ ಹೆಜ್ಜೆಯನ್ನು ಬಲೀಂದ್ರನ ತಲೆ ಮೇಲೆ ಇಟ್ಟಾಗ ಪಾತಾಳ ಲೋಕಕ್ಕೆ ಇಳಿದು ಹೋಗುತ್ತಾನೆ, ಅವನ ಜೊತೆ ಉಳಿದ ರಾಕ್ಷಸರೂ ಪಾತಾಳಕ್ಕೆ ಇಳಿಯುತ್ತಾರೆ.
ಹೀಗೆ ಪಾತಾಳ ಲೋಕಕ್ಕೆ ಹೋದ ಬಲೀಂದ್ರನನ್ನು ವರ್ಷಕ್ಕೆ ಒಂದು ದಿನ ನೆನೆದು ಭೂಮಿಗೆ ಕರೆಯುವ ದಿನವೇ ಬಲಿಪಾಡ್ಯಮಿ.
ದಕ್ಷಿಣ ಭಾರತದಲ್ಲಿ ದೀಪಾವಳಿಯ ಮೂರನೇ ದಿನದ ಹಬ್ಬವೇ ಬಲಿ ಪಾಡ್ಯಮಿ. ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ಮಾಡುತ್ತಾರೆ, ಹಾಗಾಗಿ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯುತ್ತಾರೆ. ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ ಈ ದಿನ ಬಲೀಂದ್ರನನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.
ಬಲಿ ಪಾಡ್ಯಮಿಯಂದು ಗೋಮಯದಿಂದ ಬಲಿಚಕ್ರವರ್ತಿಯ ಬಲಿಯಕೋಟೆಯನ್ನು ಕಟ್ಟಲಾಗುತ್ತದೆ. ತುಳಸಿಕಟ್ಟೆಯ ಸಮೀಪ ಗೋಮಯದಿಂದ ಏಳುಸುತ್ತಿನ ಕೋಟೆಯನ್ನು ಕಟ್ಟಿ, ಕೋಟೆಗೆ ಗಣಪತಿಯನ್ನು ಕಾವಲಿಗೆ ನಿಲ್ಲಿಸಲಾಗುತ್ತದೆ. ಮನೆ ಬಾಗಿಲಿನ ಹೊಸ್ತಿಲಿಗೆ ಯಾವುದೇ ದುಷ್ಟಶಕ್ತಿಗಳು ಒಳಪ್ರವೇಶಿಸದಂತೆ ಸಗಣಿಯಿಂದ ಮಾಡಿದ ಸಣ್ಣ ಗೊಂಬೆಗಳನ್ನು ಇಡಲಾಗುತ್ತದೆ. ಸಂಜೆ ಗೋಧೂಳಿ ಲಗ್ನದ ಸಮಯದಲ್ಲಿ ಮನೆಯ ಸದಸ್ಯರೆಲ್ಲಾ ಬಲೀಂದ್ರನಿಗೆ ಪೂಜೆ ಮಾಡುತ್ತಾರೆ.
ತುಳುನಾಡಾದ ಕರಾವಳಿಯಲ್ಲಿ ಬಲೀಂದ್ರನ ಗೊಂಬೆಯನ್ನು ರಚಿಸಿ ತುಳಸಿ ಕಟ್ಟೆಯ ಸಮೀಪ ನಿಲ್ಲಿಸಿ ಕೊನೆಯ ದಿನ ಬಲೀಂದ್ರ, ಬಲೀಂದ್ರ, ಬಲೀಂದ್ರ ಕೂ... ಕೂ.. ಎಂದು ಮೂರು ಬಾರಿ ಕರೆದು ಪೂಜೆ ಮಾಡಿ ಪಾತಾಳ ಲೋಕಕ್ಕೆ ಕಳುಹಿಸಿಕೊಡುವ ಪದ್ಧತಿಯಿದೆ.
ಮಲೆನಾಡಿನಲ್ಲಿ ಬಲಿಪಾಡ್ಯಮಿಯಂದು ಬೆಳಗ್ಗೆಯೇ ಹಟ್ಟಿಯನ್ನು ತೊಳೆದು, ಸೆಗಣಿಯಿಂದ ಗಣಪತಿಯನ್ನು ಮಾಡಿ, ಹೂವಿನಿಂದ ಸಿಂಗರಿಸುತ್ತಾರೆ. ಕಂಚಿಕಡ್ಡಿ, ಬ್ರಹ್ಮದಂಡೆ ಗಿಡಗಳನ್ನು ತಂದು ಜಡೆಯಂತೆ ಹಣೆದು ಕೊಟ್ಟಿಗೆಯಲ್ಲಿ ಸೆಗಣಿ ಬೆನಕನ ಪಕ್ಕದಲ್ಲಿ ಇಡುತ್ತಾರೆ. ಎಲ್ಲಾ ಹಸುಗಳ ಮೈತೊಳೆದು ಹೂಹಾರ ಹಾಕಿ ಪೂಜಿಸುತ್ತಾರೆ. ಹಣ್ಣು ತುಂಬಿದ ಎಡೆಯನ್ನು ನೈವೇದ್ಯ ಮಾಡುತ್ತಾರೆ.