
ರಾಮಜನ್ಮಭೂಮಿಯಿಂದ ರಾಜ್ಯಕ್ಕೆ ಶ್ರೀರಾಮ ಪಾದುಕೆಗಳು!
ಕಿಷ್ಕಿಂಧೆ: ರಾಮಜನ್ಮಭೂಮಿಯಿಂದ ಕರ್ನಾಟಕಕ್ಕೆ ಭಗವಾನ್ ಶ್ರೀರಾಮರ ಪಾದುಕೆಗಳು ದೊರೆತಿದೆ.
ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾದರಿಯಲ್ಲಿ ಕೊಪ್ಪಳದ ಕಿಷ್ಕಿಂಧೆಯಲ್ಲಿ ಸ್ಥಾಪನೆಯಾಗಿರುವ ಹನುಮದ್ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಗೆ ರಾಮಜನ್ಮಭೂಮಿ ತೀರ್ಥಕ್ಷೇತ್ರದಿಂದ ಭಗವಾನ್ ಶ್ರೀರಾಮರ 3 ಪಾದುಕೆಗಳನ್ನು ಮಾ.02 ರಂದು ನೀಡಲಾಗಿದೆ.
ಮಾ.02 ರಂದು ಅಯೋಧ್ಯೆಯಲ್ಲಿ ಹನುಮದ್ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಕಚೇರಿ ಉದ್ಘಾಟನೆಯಾಗಿದ್ದು ಹನುಮದ್ಜನ್ಮಭೂಮಿ ಟ್ರಸ್ಟ್ ನ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮಿಗಳವರು ಪಾದುಕೆಗಳನ್ನು ಸ್ವೀಕರಿಸಿ ಅಯೋಧ್ಯೆಯಲ್ಲಿನ ಪ್ರಮುಖ ದೇವಾಲಯಗಳಲ್ಲಿ ಪಾದುಕೆಗಳನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ.
ಮೂರು ಪಾದುಕೆಗಳ ಪೈಕಿ ಒಂದನ್ನು ಕಿಷ್ಕಿಂಧೆಯಲ್ಲಿನ ತೀರ್ಥ ಕ್ಷೇತ್ರದಲ್ಲಿ ಇರಿಸಲಾಗುತ್ತದೆ, ಮತ್ತೊಂದನ್ನು ಅಯೋಧ್ಯೆಯಲ್ಲಿರುವ ಕಚೇರಿಯಲ್ಲಿ ಹಾಗೂ ಇನ್ನೊಂದನ್ನು ರಾಮ ಭಕ್ತಿ ಪ್ರಚಾರಕ್ಕಾಗಿ 12 ವರ್ಷಗಳ ಕಾಲ ದೇಶಾದ್ಯಂತ ಸಂಚರಿಸಲಿರುವ ಕಿಷ್ಕಿಂಧ ಹನುಮದ್ ರಥದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಗೋವಿಂದಾನಂದ ಸರಸ್ವತಿ ಸ್ವಾಮಿಗಳವರು ಮಾಹಿತಿ ನೀಡಿದ್ದಾರೆ. ಮಾ.11 ರಂದು ಶಿವರಾತ್ರಿ ಅಂಗವಾಗಿ ಕಿಷ್ಕಿಂಧೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾದುಕೆಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.