ನವರಾತ್ರಿ ಸಮಯದಲ್ಲಿ ಬೊಂಬೆಗಳನ್ನಿಡುವುದರ ಮಹತ್ವವೇನು?
ಸಮಸ್ತ ಸೃಷ್ಟಿ ಒಂದೇ ವಸ್ತುವಿನಿಂದ ಆಗಿದೆ ಎಂದು ಮಹತ್ವವನ್ನು ಸಾರುವುದೇ ದಸರಾ ಸಮಯದಲ್ಲಿ ಬೊಂಬೆ ಇಡುವುದರ ಸಂಕೇತ. ಚೈತನ್ಯ ಜಗನ್ಮಾತೆಯ ಮೈಯ ಮಣ್ಣಿನಿಂದಲೇ ಎಲ್ಲವೂ ಸೃಷ್ಟಿಯಾಗಿದೆ ಎಂದು ಪುರಾಣ ಕಥೆ. ಅದಕ್ಕಾಗಿ ಪಟ್ಟದ ಬೊಂಬೆ ಎಂದು ಶಿವ-ಪಾರ್ವತಿಯರ ನಿರಾಕಾರ ಅಂದರೆ ಅರ್ಧಂಬರ್ಧ ಆಕಾರದ ಬೊಂಬೆಗಳನ್ನು ಕೂರಿಸುತ್ತಾರೆ.
Published: 01st October 2021 11:45 PM | Last Updated: 02nd October 2021 03:46 PM | A+A A-

ದಸರಾ ಬೊಂಬೊಯ ಸಾಂದರ್ಭಿಕ ಚಿತ್ರ
ಸಮಸ್ತ ಸೃಷ್ಟಿ ಒಂದೇ ವಸ್ತುವಿನಿಂದ ಆಗಿದೆ ಎಂದು ಮಹತ್ವವನ್ನು ಸಾರುವುದೇ ದಸರಾ ಸಮಯದಲ್ಲಿ ಬೊಂಬೆ ಇಡುವುದರ ಸಂಕೇತ. ಚೈತನ್ಯ ಜಗನ್ಮಾತೆಯ ಮೈಯ ಮಣ್ಣಿನಿಂದಲೇ ಎಲ್ಲವೂ ಸೃಷ್ಟಿಯಾಗಿದೆ ಎಂದು ಪುರಾಣ ಕಥೆ. ಅದಕ್ಕಾಗಿ ಪಟ್ಟದ ಬೊಂಬೆ ಎಂದು ಶಿವ-ಪಾರ್ವತಿಯರ ನಿರಾಕಾರ ಅಂದರೆ ಅರ್ಧಂಬರ್ಧ ಆಕಾರದ ಬೊಂಬೆಗಳನ್ನು ಕೂರಿಸುತ್ತಾರೆ.
ಅಮೂರ್ತದಿಂದ ಮೂರ್ತದೆಡೆಗೆ ಎಂಬುದು ಗೊಂಬೆಗಳನ್ನು ಕೂರಿಸುವುದರ ಅರ್ಥ. ಒಂದೇ ವಸ್ತುವಿನಿಂದ ಎಲ್ಲವನ್ನೂ ಮಾಡಿರಬೇಕೆಂದು ಪ್ಲಾಸ್ಟಿಕ್ ಗೊಂಬೆಗಳನ್ನು ಕೂರಿಸುತ್ತಾರೆ.
ಬೊಂಬೆಗಳನ್ನು ಕೂರಿಸುವುದರಲ್ಲಿ ದೇವತೆಗಳಿಂದ ಹಿಡಿದು ಸಾಧು-ಸಂತರು, ತತ್ಪುರುಷರು, ಸಾಮಾನ್ಯ ಮನುಷ್ಯರು, ಜನರ ಜೀವನಶೈಲಿ, ಹಳ್ಳಿ ಬದುಕು, ವ್ಯಾಪಾರ, ಕೃಷಿ, ಕ್ರೀಡೆ, ಉದ್ಯೋಗ ಪಶು-ಪಕ್ಷಿಗಳು ಹೀಗೆ ಸಕಲವೂ ದೇವರ ಅನುಗ್ರಹವಾಗಿದ್ದು, ಯಾವುದನ್ನೂ ತುಚ್ಛವಾಗಿ ನೋಡಬಾರದು ಈ ಪ್ರಕೃತಿಯಲ್ಲಿರುವ ಪ್ರತಿಯೊಂದು ಮುಖ್ಯವೇ ಎಂಬುದು ಬೊಂಬೆಗಳು ಸಂದೇಶ ಸಾರುತ್ತವೆ.
ಪ್ರಕೃತಿಯಲ್ಲಿರುವ ಪ್ರತಿಯೊಂದಕ್ಕೂ ಚೈತನ್ಯವಿದೆ ಎಂದು ತೋರಿಸಲು ಕೂಡ ಬೊಂಬೆಗಳನ್ನು ಕೂರಿಸಲಾಗುತ್ತದೆ. ಒಂಭತ್ತು ದಿನಗಳ ಕಾಲವೂ ಬೊಂಬೆ ಹಾಡುಗಳು, ಬೊಂಬೆ ಬಾಗಿನ, ಕೋಲಾಟ, ಲಾಸ್ಯ ಹೀಗೆ ಲವಲವಿಕೆಯಿಂದ ನವದಿನಗಳನ್ನು ಕಳೆಯುತ್ತಾರೆ. ನವರಾತ್ರಿ ಸಮಯದಲ್ಲಿ ಮನರಂಜನೆ, ನೃತ್ಯಗಳು ಪ್ರದೇಶ, ಪ್ರದೇಶದಿಂದ, ರಾಜ್ಯ-ರಾಜ್ಯಗಳಿಗೆ ಭಿನ್ನವಾಗಿರುತ್ತದೆ.
ಗೊಂಬೆ ಹಬ್ಬ: ನವರಾತ್ರಿ ಪ್ರಮುಖ ಆಕರ್ಷಣೆ ದಸರಾ ಬೊಂಬೆ. ಇದು ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡಿನಲ್ಲಿ ಜನಪ್ರಿಯ, ಕನ್ನಡದಲ್ಲಿ ಇದನ್ನು ಗೊಂಬೆ ಹಬ್ಬ ಎಂದೂ ಕರೆಯುತ್ತಾರೆ.
ದಸರಾ ಗೊಂಬೆ ಕೂರಿಸುವ ಪದ್ಧತಿ 18 ನೇ ಶತಮಾನದಿಂದ ಮನೆಮನೆಯಲ್ಲೂ ಜಾರಿಗೆ ಬಂದಿತು ಎನ್ನಬಹುದು.ಇಂದಿನ ಜೀವನ ಕ್ರಮದಲ್ಲಿ ಇದು ಕಡಿಮೆ ಕಾಣಲು ಸಿಗುತ್ತದೆ. ಆದರೆ ಯಾರು ಹಿಂದಿನಿಂದಲೂ ಈ ಸಂಪ್ರದಾಯವನ್ನು ಆಚರಿಸುತ್ತಾ ಬಂದಿದ್ದಾರೋ, ಅಂತಹವರ ಮನೆಯಲ್ಲಿ ಈ ಗೊಂಬೆ ಮನೆಯನ್ನು ನೋಡಬಹುದು.
ದಸರಾ ಹಬ್ಬದಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುವ ಪದ್ಧತಿಯು ಮೈಸೂರು ಪ್ರಾಂತ್ಯದಲ್ಲಿ ಮೊಟ್ಟಮೊದಲು ಆರಂಭವಾಯಿತು ಎನ್ನಲಾಗುತ್ತದೆ. ಮೈಸೂರು ದಸರಾ ಎಂದು ಜಗತ್ ಪ್ರಸಿದ್ಧಿ ಪಡೆದಿರುವ ಆಚರಣೆ ಮೈಸೂರು ಅರಮನೆಯಲ್ಲಿ ನಡೆದರೆ, ಮೈಸೂರು ರಾಜರ ಪ್ರಜೆಗಳೆಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮವಾಗಿ ಪಟ್ಟದ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಬೆಳೆದುಕೊಂಡು ಬಂತು. ಗೊಂಬೆ ಕೂರಿಸಲು ಸಾಕಷ್ಟು ತಯಾರಿ ಬೇಕಾಗುತ್ತದೆ. ಪ್ರತಿವರ್ಷ ಒಂದು ನಿರ್ದಿಷ್ಟ ವಿಷಯ(ಥೀಮ್) ಇಟ್ಟುಕೊಂಡು ಮನೆಗಳಲ್ಲಿ ಗೊಂಬೆ ಕೂರಿಸುತ್ತಾರೆ, ನಮ್ಮ ದೇಶದ ಪೌರಾಣಿಕ ಹಿನ್ನೆಲೆ, ಕಲೆ, ಸಂಪ್ರದಾಯ, ಜನ ಜೀವನವನ್ನು ದಸರಾ ಬೊಂಬೆಗಳು ಸಾರುತ್ತದೆ.
ಗೊಂಬೆಗಳನ್ನು ಕೂರಿಸುವ ವಿಧಾನ: ಮನೆಗಳಲ್ಲಿ ಗೊಂಬೆ ಕೂರಿಸುವಾಗ ಸ್ಥಳಾವಕಾಶ ನೋಡಿಕೊಂಡು 3,5,7,9 ಹಂತಗಳಲ್ಲಿ ಕೂರಿಸುತ್ತಾರೆ. ಹೆಚ್ಚು ಗೊಂಬೆಗಳು ಇದ್ದವರು 9 ಹಂತಗಳಲ್ಲಿ ಕೂರಿಸಿದರೆ, ಇನ್ನು ಕೆಲವರು 7 ಹಂತಗಳಲ್ಲಿ, ಕೆಲವರು 5 ಹಂತಗಳಲ್ಲಿ ಕೂರಿಸುತ್ತಾರೆ. ಗೊಂಬೆಗಳನ್ನು ಕೂರಿಸಲು ಮರದ ಸ್ಟ್ಯಾಂಡ್‌ಗಳನ್ನೂ ಬಳಸುತ್ತಾರೆ. ಮರದ ಸ್ಟ್ಯಾಂಡ್ ಇಲ್ಲದಿದ್ದರೆ ಸ್ಟೀಲ್ ಸ್ಟ್ಯಾಂಡ್‌ನ್ನೂ ಬಳಸಬಹುದು. ಮೊದಲ ಅಂತಸ್ತಿನಲ್ಲಿ ಪಟ್ಟದ ಬೊಂಬೆ, ಕಲಶ, ಗಣಪತಿ, ಮನೆ ದೇವರು, ದೀಪಗಳು ಇವುಗಳನ್ನಿಟ್ಟು, ಎರಡು, ಮೂರು ಉಳಿದ ಅಂತಸ್ತುಗಳಲ್ಲಿ ಇತರ ಬೊಂಬೆಗಳನ್ನು ಜೋಡಿಸುತ್ತಾರೆ.
ಇದರಲ್ಲಿ ಮುಖ್ಯವಾಗಿ ಅಷ್ಟಲಕ್ಷ್ಮಿಯರು, ದಶಾವತಾರದ ಬೊಂಬೆಗಳು, ಸೀತಾ ಕಲ್ಯಾಣದ ಜೋಡಿಗಳು, ವೈಕುಂಠ ಪ್ರದರ್ಶನದ ಬೊಂಬೆಗಳು, ಶಿವ-ಪಾರ್ವತಿಯರ ಕೈಲಾಸದ ಸೆಟ್ ಹೀಗೆ ಒಂದೊಂದು ಅಂತಸ್ತಿನಲ್ಲಿ ಒಂದೊಂದನ್ನು ಇಟ್ಟು ಅಲಂಕರಿಸುವುದು. ಹಾಗೆಯೇ ಗುರು ಪರಂಪರೆಯ ಎಲ್ಲಾ ಗುರುಗಳನ್ನು ಒಂದು ವಿಭಾಗದಲ್ಲಿ, ಚಾಮುಡೇಶ್ವರಿ ಹಬ್ಬದಲ್ಲಿ ಚಾಮುಂಡೇಶ್ವರಿಯ ವಿಶೇಷತೆಯಿರುವುದರಿಂದ ಆ ದೇವಿಯ ವಿಗ್ರಹವನ್ನು ಮಧ್ಯದಲ್ಲಿರಿಸಿ ಸರಸ್ವತಿ, ಗೌರಿ, ಲಕ್ಷ್ಮಿಯರ ವಿಗ್ರಹಗಳನ್ನಿಟ್ಟು ಪೂಜಿಸುತ್ತಾರೆ.
ಗೊಂಬೆ ಕೂರಿಸುವವರು ಪ್ರತೀ ವರ್ಷ ಹಳೆಯ ಗೊಂಬೆಯ ಜೊತೆಗೆ ಒಂದು ಜೋಡಿ ಹೊಸ ಗೊಂಬೆಯನ್ನು ಸೇರಿಸಿ ಗೊಂಬೆ ಕೂರಿಸಬೇಕು ಎನ್ನುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಹಾಗಾಗಿ ಪ್ರತಿಯೊಬ್ಬರು ಹಳೆ ಗೊಂಬೆ ಜೊತೆಗೆ ಹೊಸ ಗೊಂಬೆಯನ್ನು ಕೂರಿಸುತ್ತಾರೆ.
ಇತ್ತೀಚೆಗೆ ಹಳೆ ಸಂಪ್ರದಾಯದ ಬೊಂಬೆಗಳ ಜೊತೆ ಆಧುನಿಕ ಸ್ಪರ್ಶ ನೀಡಲಾಗುತ್ತದೆ. ಮರದ, ಮಣ್ಣಿನ ಗೊಂಬೆ ಜೊತೆಗೆ ಇತ್ತೀಚೆಗೆ ಕಾಗದಗಳಿಂದ ತಯಾರಿಸುವ ಗೊಂಬೆಗಳು ಸಹ ನಾನಾ ಅಲಂಕಾರಗಳಲ್ಲಿ, ವಿವಿಧ ಬಣ್ಣಗಳಲ್ಲಿ ಸಿಗುತ್ತದೆ.
ಮಾಹಿತಿ ಸಂಗ್ರಹ: ಡಾ.ಆರತಿ ವಿ.ಬಿ, ವಿಭು ಅಕಾಡೆಮಿ ಸ್ಥಾಪಕಿ ಮತ್ತು ಪ್ರಸಾದ್ ಆರ್ ಕೆ ಇವರಿಂದ