ಗಣೇಶ ಚತುರ್ಥಿ: ಗಜಾನನನಿಗೆ ಸಲ್ಲುವ ಪೂಜೆಯಲ್ಲಿ ಹಲವು ರೀತಿ...

ಮಹಾಭಾರತಕ್ಕೂ ಗಣಪನಿಗೂ ಬಿಡಿಸಲಾರದ ನಂಟು. ವ್ಯಾಸರು ಹೇಳುತ್ತಾ ಹೋದಂತೆ ಗಣಪ ಅದನ್ನು ಬರೆದುಕೊಂಡಿದ್ದು ಮುಂದೆ ಮಹಾಭಾರತ ಕೃತಿಯಾಯಿತು. ಎಲ್ಲಾ ವರ್ಗ, ಕ್ಷೇತ್ರಗಳಲ್ಲಿರುವವರಿಗೂ ಸಲ್ಲುವ ಕೃತಿ ಮಹಾಭಾರತವಾದರೆ ಎಲ್ಲರಿಗೂ ಸಲ್ಲುವವ ಗಣಪ
ಗಣೇಶ ಚತುರ್ಥಿ (ಸಾಂಕೇತಿಕ ಚಿತ್ರ)
ಗಣೇಶ ಚತುರ್ಥಿ (ಸಾಂಕೇತಿಕ ಚಿತ್ರ)

ಅರಸುಗಳಿಗಿದು ವೀರ ದ್ವಿಜರಿಗೆ ಪರಮವೇದದ ಸಾರ ಯೋಗೀಶ್ವರರ ತತ್ತ್ವ ವಿಚಾರ ಮಂತ್ರಿ ಜನಕ್ಕೆ ಬುದ್ಧಿಗುಣ ವಿರಹಿಗಳ ಶೃಂಗಾರ ವಿದ್ಯಾ ಪರಿಣತರಲಂಕಾರ ಕಾವ್ಯಕೆ ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ! ಎನ್ನುತ್ತಾನೆ ಕುಮಾರವ್ಯಾಸ

ಅಂದರೆ ತನ್ನ ರಚನೆಯ ಗದುಗಿನ ಭಾರತ ಆಯಾ ಕ್ಷೇತ್ರದವರಿಗೆ ಸಲ್ಲುವಂತಹ, ಪ್ರತಿಯೊಂದು ಕ್ಷೇತ್ರದಲ್ಲಿರುವವರಿಗೂ ಬೇಕಾಗಿರುವ ಅಂಶಗಳನ್ನೊಳಗೊಂಡಂತಹ ಕೃತಿ ಎನ್ನುವುದು ಗದುಗಿನ ನಾರಾಣಪ್ಪನ ಹೇಳಿಕೆಯ ಸಾರಾಂಶ.

ಮಹಾಭಾರತಕ್ಕೂ ಗಣಪನಿಗೂ ಬಿಡಿಸಲಾರದ ನಂಟು. ವ್ಯಾಸರು ಹೇಳುತ್ತಾ ಹೋದಂತೆ ಗಣಪ ಅದನ್ನು ಬರೆದುಕೊಂಡಿದ್ದು ಮುಂದೆ ಮಹಾಭಾರತ ಕೃತಿಯಾಯಿತು. ಎಲ್ಲಾ ವರ್ಗ, ಕ್ಷೇತ್ರಗಳಲ್ಲಿರುವವರಿಗೂ ಸಲ್ಲುವ ಕೃತಿ ಮಹಾಭಾರತವಾದರೆ, ಸರ್ವರಿಗೂ ಸಲ್ಲುವ ದೇವರು, ಎಲ್ಲಾ ಗಣಗಳಿಗೂ ಅಧಿಪತಿ ಗಣಪತಿ ಅಥವಾ ವಿಘ್ನ ನಿವಾರಕ.

ಆತ ವಿಘ್ನ ನಿವಾರಕನಷ್ಟೇ ಅಲ್ಲ, ಆತ ವಿಘ್ನಗಳನ್ನೊಡ್ಡಿ ಪರೀಕ್ಷಿಸುವವನೂ ಹೌದು.

ಪ್ರಾರಭ್ಯತೇ ನ ಖಲು ವಿಘ್ನಭಯೇನ ನೀಚೈಃ
ಪ್ರಾರಭ್ಯ ವಿಘ್ನನಿಹತಾ ವಿರಮಂತಿ ಮಧ್ಯಾಃ |
ವಿಘೈರ್ಮುಹುರ್ಮುಹುರಪಿ ಪ್ರತಿಹನ್ಯಮಾನಾಃ
ಪ್ರಾರಬ್ಧಮುತ್ತಮಗುಣಾ ನ ಪರಿತ್ಯಜಂತಿ ||

"ತಡೆಗಳು ಬರಬಹುದು ಎಂಬ ಭಯದಿಂದ ಕೆಲವರು ಕೆಲಸಗಳನ್ನು ಆರಂಭಿಸುವುದೇ ಇಲ್ಲ.  ಮಧ್ಯಮರು ಕೆಲಸವನ್ನೇನೋ ಪ್ರಾರಂಭ ಮಾಡುತ್ತಾರೆ ಆದರೆ ವಿಘ್ನವೇನಾದರೂ ಬಂದರೆ ಆ ಕೆಲಸವನ್ನು ಅರ್ಧದಲ್ಲಿಯೇ ನಿಲ್ಲಿಸುತ್ತಾರೆ.
ಆದರೆ ಉತ್ತಮರು ಪ್ರಾರಂಭ ಮಾಡಿದ ಕೆಲಸದಲ್ಲಿ ಪದೇ ಪದೇ ವಿಘ್ನಗಳು ಎದುರಾದರೂ ಫಲ ಸಿಗುವವರೆಗೂ ವಿಚಲಿತರಾಗದೇ ಕೆಲಸವನ್ನು ಮುಗಿಸುತ್ತಾರೆ" ಎನ್ನುತಾರೆ ಮನುಷ್ಯನ ಸಹಜ ಮಾನಸಿಕತೆಯನ್ನು ಸಹಸ್ರಾರು ವರ್ಷಗಳ ಹಿಂದೆ ಅಧ್ಯಯನ ಮಾಡಿದ್ದ ಪ್ರಾಚೀನ ಋಷಿಗಳು. ಇಂತಹ ಅತ್ಯುತ್ತಮ ಮಾನಸಿಕ ದೃಢತೆಯನ್ನು ಸಿದ್ಧಿಸಿಕೊಳ್ಳುವುದಕ್ಕೆ ವಿಘ್ನ ದಾಟಬೇಕಿದ್ದರೆ, ವಿಘ್ನೇಶ್ವರನನ್ನು ಪ್ರಾರ್ಥಿಸಬೇಕು.

ಗಣಪತಿ ಎಂದರೆ ಗಣಗಳ ಅಧಿಪತಿ
ಭಾರತದ ತತ್ವಶಾಸ್ತ್ರಗಳಲ್ಲಿ ಪ್ರಧಾನವಾಗಿ 6-ವೈಷ್ಣವ, ಶೈವ, ಶಾಕ್ತ, ಸ್ಕಾಂದ, ಸೌರ, ಗಾಣಪತ್ಯವೆಂಬ ದರ್ಶನ (ಗಣಗಳು, ಗುಂಪುಗಳಿವೆ) ಈ ಎಲ್ಲಾ ಗಣಗಳಿಗೂ ಅಧಿಪತಿ (ಮುಖ್ಯಸ್ಥನಾಗಿರುವುದರಿಂದ)ಯಾಗಿರುವುದರಿಂದ ಆತನನ್ನು ಗಣಪತಿ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಹಿಂದೂ ಸಂಪ್ರದಾಯದಲ್ಲಿ ಯಾವುದೇ ಪಂಥದವರಾಗಿದ್ದರೂ ವಿವಾಹ, ಉಪನಯನ, ಯಜ್ಞ, ವ್ರತಾಚರಣೆ ಮುಂತಾದ ಕಾರ್ಯ-ಕಲಾಪಗಳಲ್ಲಿ ಗಣೇಶನಿಗೆ ಮೊದಲ ಪೂಜೆ ಮಾಡಲಾಗುತ್ತದೆ. ಇದು ಸಾಮಾನ್ಯವಾಗಿ ಕಂಡುಬರುವ ಗಣಪತಿಯ ಪೂಜೆಯ ವಿಧಾನ

ಇನ್ನು ಜಿಜ್ಞಾಸು, ಅಧ್ಯಾತ್ಮಿಕ ಮಾರ್ಗದಲ್ಲಿರುವವರು ಗಣಪತಿಯನ್ನು ಹೇಗೆ ಆರಾಧಿಸುತ್ತಾರೆ?

ಪ್ರತಿ ತಿಂಗಳ ಕೃಷ್ಣಪಕ್ಷದ ಚತುರ್ಥಿಯ ದಿನ  ಸಂಕಷ್ಟ ಹರ ಗಣಪತಿ ವ್ರತಾಚರಣೆ ಬಗ್ಗೆ ತಿಳಿದೇ ಇದೆ. ಈ ವ್ರತ ಪೂರ್ಣವಾಗುವುದು ಉಪನಿಷತ್ ಅಥರ್ವಣ ಶೀರ್ಷ ಅಥವಾ ಗಣಪತಿ ಉಪನಿಷತ್ ನಲ್ಲಿ!

ಏಕಂ ಸತ್ ವಿಪ್ರಾ ಬಹುದಾವದಂತಿ ಎನ್ನುವ ಉಪನಿಷದ್ ವಾಕ್ಯದಂತೆ ಗಣಪತಿ ವಿವಿಧ ರೂಪಗಳಲ್ಲಿ ಪ್ರಕಟಗೊಳ್ಳಿವ ಪರಬ್ರಹ್ಮ ಸ್ವರೂಪ. ಆತ ಓಂಕಾರ, ಅಕ್ಷರ ಸಂಪತ್ತಿನ ಮೂಲ ಶಕ್ತಿಯೂ ಹೌದು. ಆದ್ದರಿಂದ ವಿದ್ಯಾಗಣಪತಿ ಎಂಬ ಬಿರುದು ಬಂದಿದೆ. ಆತ ನಮ್ಮ ಬುದ್ಧಿ ಪ್ರಚೋದನೆ ಮಾಡುವ ಶಕ್ತಿ. ಅದಕ್ಕೆ ಆತನನ್ನು ಸಿದ್ಧಿ ಬುದ್ಧಿ ಪ್ರದಾಯಕ ಎನ್ನುತ್ತೇವೆ. ಈ ಹಿನ್ನೆಲೆಯಲ್ಲಿ ಜಿಜ್ಞಾಸುಗಳು ಜ್ಞಾನಾರ್ಜನೆಯ ಮೂಲಕ, ಸಿದ್ಧಿಗಳನ್ನು ಪಡೆಯುವುದಕ್ಕೆ ತತ್ವ ಚಿಂತನೆಗಳ ಮೂಲಕ ಗಣಪತಿಯನ್ನು ಆರಾಧಿಸುತ್ತಾರೆ.

ಪೌರಾಣಿಕ ದೃಷ್ಟಿಯಲ್ಲಿ "ನಿರಾಕಾರ ಗಣೇಶ":

ಪುರಾಣಗಳಲ್ಲಿ ಗಣಪತಿಯ ವಿವರಣೆ ಗಣೇಶ ಪುರಾಣದಲ್ಲಿ ಲಭ್ಯವಿದೆ.

ಸಾಮಾನ್ಯವಾಗಿ ಗಣಪತಿ ಎಂದರೆ ನಾವು ಆತನಿಗೆ ಆನೆಯ ಮುಖ, ಬೃಹದಾಕಾರದ ಹೊಟ್ಟೆ, ಮೂಷಿಕ ವಾಹನನೆಂಬ ಆಕಾರದಲ್ಲಿ ಗುರುತಿಸುತ್ತೇವೆ. ಆದರೆ ಗಣೇಶ ಪುರಾಣದಲ್ಲಿ ಆತ ಬೆಳಕಿನ ಸ್ವರೂಪ. ನಿರಾಕಾರ ಪರಬ್ರಹ್ಮ!

ಸೃಷ್ಟಿಯಲ್ಲಿ ಅಸ್ತಿತ್ವಕ್ಕೆ ಬಂದ ಬ್ರಹ್ಮ, ವಿಷ್ಣು, ಮಹೇಶ್ವರರು, ತಮ್ಮ ಅಸ್ತಿತ್ವದ ಉದ್ದೇಶ ತಿಳಿಯದೇ ಕಂಗಾಲಾಗಿ ತಪಸ್ಸಿಗೆ ತೊಡಗುತ್ತಾರೆ. ಆಗ ತ್ರಿಮೂರ್ತಿಗಳ ಮುಂದೆ ಗಣಪತಿ (ಬೆಳಕು) ಪ್ರತಕ್ಷ್ಯನಾಗುತ್ತಾನೆ. ನಾವು ಯಾರು? ಯಾವ ಕಾರಣಕ್ಕಾಗಿ ಅಸ್ತಿತ್ವಕ್ಕೆ ಬಂದಿದ್ದೇವೆ?ಎಂಬುದು ಗಣಪತಿಗೆ ತ್ರಿಮೂರ್ತಿಗಳ ಪ್ರಶ್ನೆಯಾಗಿತ್ತು. ಅದಕ್ಕೆ ಗಣಪನ ಪ್ರತಿಕ್ರಿಯೆ "ನಾನು ನಿರಾಕಾರ, ಆಕಾರವಿಲ್ಲದ ನಾನು ನಿಮ್ಮ ಮೂಲಕ ಜಗತ್ತಿಗೆ ಕಾಣಿಸುತ್ತಿದ್ದೇನೆ" ಎಂಬುದಾಗಿತ್ತು. ಮತ್ತೆ ತ್ರಿಮೂರ್ತಿಗಳು ಆ ಶಕ್ತಿಗೆ ನಿನ್ನ ಹೆಸರೇನು? ಎಂದು ಕೇಳುತ್ತಾರೆ. ಅದಕ್ಕೆ ನಾನು ಗಣಪತಿ ಎಂಬುದು ಉತ್ತರವಾಗಿರುತ್ತದೆ. ಅಂದಿನಿಂದ ಯಾವ ಯಾವ ಗಣಗಳು ಅಸ್ತಿತ್ವಕ್ಕೆ ಬಂದಿತೋ ಆ ಗಣಗಳ ಅಧಪತಿಯನ್ನು ತ್ರಿಮೂರ್ತಿಗಳು ಸ್ತುತಿಸಿದರು ಇದೇ ನಾವು ಇಂದು  ಮಂತ್ರ ರಾಜ ಎಂದು ಗುರುತಿಸುವ ಸ್ತೋತ್ರವಾಗಿದೆ.

ಗಣಪತಿಯನ್ನು ತ್ರಿಮೂರ್ತಿಗಳು ಸ್ತುತಿಸಿದ ಮಂತ್ರ ಸ್ತೋತ್ರ 

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ
ನಿರಾನಂದಮಾನಂದ ವಂದ್ವೈತ ಪೂರ್ಣಂ
ಪರಮ ನಿರ್ಗುಣಂ ನಿರ್ವೀಶೇಷಂ ನಿರೀಹಂ
ಪರಬ್ರಹ್ಮ ರೂಪಂ ಗಣೇಶಂ ಭಜೇಮ
ಓಂ ಶ್ರೀ ಗಣೇಶಾಯ ನಮಃ

ಗುಣಾಶೀತಮಾನಂ ಚಿದನಂದರೂಪಂ
ಚಿದಾಭಾಸಕಂ ಸರ್ವಗಂ ಜ್ಞಾನಗಮ್ಯಂ
ಮುನಿಧ್ಯೈಯಮಾಕಾಶರೂಪಂ ಪರೇಶಂ
ಪರಬ್ರಹ್ಮ ರೂಪಂ ಗಣೇಶಂ ಭಜೇಮ
ಓಂ ಶ್ರೀ ಗಣೇಶಾಯ ನಮಃ

ಜಗತ್ಕಾರಣಂ ಕಾರಣ ಜ್ಞಾನರೂಪಂ
ಸುರಾದಿಂ ಸುಖಾದಿಂ ಗುಣೇಶಂ ಗಣೇಶಂ
ಜಗದ್ವ್ಯಾಪಿನಂ ವಿಶ್ವ ವಂದ್ಯಂ ಸುರೇಶಂ
ಪರಬ್ರಹ್ಮ ರೂಪಂ ಗಣೇಶಂ ಭಜೇಮ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com