ನಿತ್ಯ ಸತ್ಯವೇ ರಾಮ, ಸತ್ವ ಪರೀಕ್ಷೆಯಲ್ಲಿ ಗೆದ್ದವನೇ ರಾಮ..
ಶ್ರೀರಾಮ, ಆ ದೈವೀ ಶಕ್ತಿ ಭರತ ವರ್ಷವನ್ನು ಆಳಿ ಸಹಸ್ರಮಾನ, ಯುಗಗಳೇ ಕಳೆದರೂ ಇಂದಿಗೂ ಅದೆಷ್ಟೋ ಭಾರತದ ಪ್ರಜೆಗಳ ಹೃದಯ ಸಾಮ್ರಾಜ್ಯವನ್ನು ಸುಪ್ತವಾಗಿ, ಗುಪ್ತಗಾಮಿನಿಯಾಗಿ ಆಳುತ್ತಿರುವ ಪ್ರಭು ಆತನೇ.
Published: 10th April 2022 01:19 PM | Last Updated: 30th March 2023 01:15 PM | A+A A-

ರಾಮ (ಸಂಗ್ರಹ ಚಿತ್ರ)
ಶ್ರೀರಾಮ, ಆ ದೈವೀ ಶಕ್ತಿ ಭರತ ವರ್ಷವನ್ನು ಆಳಿ ಸಹಸ್ರಮಾನ, ಯುಗಗಳೇ ಕಳೆದರೂ ಇಂದಿಗೂ ಅದೆಷ್ಟೋ ಭಾರತದ ಪ್ರಜೆಗಳ ಹೃದಯ ಸಾಮ್ರಾಜ್ಯವನ್ನು ಸುಪ್ತವಾಗಿ, ಗುಪ್ತಗಾಮಿನಿಯಾಗಿ ಆಳುತ್ತಿರುವ ಪ್ರಭು ಆತನೇ.
ಅಷ್ಟೇ ಏಕೆ ರಾಜಾಡಳಿತವೇ ಕೊನೆಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದರೂ ನಮ್ಮನ್ನು ಆಳುವವರಿಗೆ, ಅಧಿಕಾರಕ್ಕೇರಲು, ಪ್ರಜೆಗಳ ಸೌಖ್ಯ, ಉತ್ತಮ ಆಡಳಿತ ನೀಡುತ್ತೇವೆ ಎಂದು ಭರವಸೆ ಮೂಡಿಸಲು ಉದಾಹರಣೆ ನೀಡಲು ರಾಮ ರಾಜ್ಯವಲ್ಲದೇ ಮತ್ತೊಂದು ಸಿಗಲಾರದು.
ಪ್ರಜೆಗಳ ಪಾಲನೆ, ಪೋಷಣೆ ಪ್ರಜೆಗಳೊಂದಿಗೆ ವರ್ತಿಸುವುದು, ಅವರನ್ನು ನಡೆಸಿಕೊಳ್ಳುವುದು ಹೇಗೆ, ಮೃದುವಾಗಿ ಮಾತನಾಡುವುದು, ಸಂದರ್ಭೋಚಿತವಾಗಿ ಕಾಠಿಣ್ಯ ನಿಲುವು ತೆಗೆದುಕೊಳ್ಳುವುದು ಇವೆಲ್ಲವೂ ಅರಿಷಡ್ ವರ್ಗಗಳನ್ನು ಗೆದ್ದ ಆ ಷೋಡಶ ಗುಣಸಂಪನ್ನನಿಂದಲ್ಲದೇ ಮತ್ತೆ ಯಾರಿಂದ ಕಲಿಯಲು ಸಾಧ್ಯ?
ಓರ್ವ ಸಾಮಾನ್ಯ ಮನುಷ್ಯನಿಗೆ ಕೆಲವು ವಿಷಯಗಳಲ್ಲಿ, ಕೆಲವು ಸಂಬಂಧಗಳಲ್ಲಷ್ಟೇ ನ್ಯಾಯ ಒದಗಿಸಿ ಆದರ್ಶ ವ್ಯಕ್ತಿಯಾಗಿ ನಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಆದರೆ ರಾಮನೆಂದಾಕ್ಷಣ ತಂದೆಯ ಪಾಲಿಗೆ ಮಾತು ಮೀರದ ಮಗನಾಗಿ, ಪತ್ನಿಗೆ ನಿಷ್ಠ ಪತಿಯಾಗಿ, ಪ್ರಜೆಗಳಿಗೆ ಪ್ರಿಯನಾದ ರಾಜನಾಗಿ, ಭ್ರಾತೃತ್ವದ ಸಂಕೇತವಾಗಿ, ಮೃದು ಹೃದಯದವನಾಗಿದ್ದುಕೊಂಡೂ ಅಷ್ಟೇ ಕಾಠಿಣ್ಯದಲ್ಲಿ ರಾಕ್ಷಸ ದಮನ ಮಾಡಿದ, ಕಿಂಚಿತ್ತೂ ಗೊಂದಲಕ್ಕೀಡಾಗದೇ ದುಷ್ಟ ಶಿಕ್ಷಣೆ ಮಾಡಿದ ಪರಿಯನ್ನು ಅಧ್ಯಯನ ಮಾಡಿದರೆ ಪ್ರಭು ರಾಮನನ್ನಲ್ಲದೇ ಮತ್ತೆ ಯಾರನ್ನು ಆದರ್ಶ ಪುರುಷ, ಪುರುಷೋತ್ತಮ ಎನ್ನಲು ಸಾಧ್ಯವಾದೀತು?
ಆತ ಭರತ ವರ್ಷದ ಭಾವನೆ, ಸಂಸ್ಕೃತಿಗಳನ್ನು ಜೀವಿಸಿದ ಯುಗ ಪುರುಷ. ಹೆಚ್ಚೆಂದರೆ ನೂರು ಸಾವಿರ ವರ್ಷಗಳಿಗೆ ಸೀಮಿತವಾಗುವ ನಾಯಕರನ್ನು ಕಂಡಿದ್ದೇವೆ. ಲಕ್ಷಾಂತರ ವರ್ಷಗಳು ಕಳೆದರೂ ಪ್ರಭು ರಾಮ ಪ್ರತಿನಿತ್ಯ ಸ್ತುತ್ಯಾರ್ಹವಾಗಿರುವುದಕ್ಕೆ, ಭರತವರ್ಷದ ಸಂಸ್ಕೃತಿ ಮೌಲ್ಯಗಳಿಗೆ ಮುಕುಟಪ್ರಾಯವಾಗಿರುವ ಆತನ ವ್ಯಕ್ತಿತ್ವ ಕಾರಣ. ನಮ್ಮ ರಾಷ್ಟ್ರಪುರುಷನಾಗಿರುವ ಆತನ ವ್ಯಕ್ತಿತ್ವವಾದರೂ ಎಂಥಹದ್ದು, ಗಾಂಭೀರ್ಯದಲ್ಲಿ ದಕ್ಷಿಣದ ಸಾಗರದೊಂದಿಗೆ, ಧೈರ್ಯವನ್ನ ಹಿಮಾಲಯದೊಂದಿಗೆ ಹೋಲಿಸುವಂಥಹದ್ದು. ಜೀವನದ ಪ್ರತಿಯೊಂದು ಮಜಲಿನಲ್ಲಿಯೂ ನಮಗೆ ಪ್ರಭು ಶ್ರೀರಾಮ ಲೋಕಗುರುವಾಗಿಯೇ ನಿಲ್ಲುತ್ತಾನೆ.
ಬಾಲ್ಯದಲ್ಲಿ ವಿದ್ಯೆ ಕಲಿತು ವಿಶ್ವಾಮಿತ್ರ, ವಸಿಷ್ಠರಾದಿಯಾಗಿ ಗುರುಗಳ ಬಳಿ ಹೇಗಿರಬೇಕು? ಅಪರಿಮಿತ ಶಕ್ತಿ ಹೊಂದಿದ್ದರೂ ಸಮಯೋಚಿತವಾಗಿ ಅದನ್ನು ಪ್ರದರ್ಶಿಸುವುದು ಹೇಗೆ ಎಂಬುದಕ್ಕೆ ಶ್ರೀರಾಮ-ಪರಶುರಾಮರೊಂದಿಗೆ ನಡೆದುಕೊಂಡ ರೀತಿ ಅವರಿಬ್ಬರ ನಡುವಿನ ಸಂವಾದ, ಸಂಭಾಷಣೆ ನಮಗೆಲ್ಲರಿಗೂ ಪಾಠ. ಪರಶುರಾಮರಿಂದ ವೈಷ್ಣವ ಧನಸ್ಸನ್ನು ಲೀಲಾಜಾಲವಾಗಿ ಕಸಿದಾಗಿನ ಸಂದರ್ಭ ರಾಮನನ್ನು ನಮಗೆ ಮತ್ತಷ್ಟು ಆಪ್ಯಾಯಮಾನವಾಗಿಸಿಬಿಡುತ್ತದೆ. ಇನ್ನು ಆತನಲ್ಲಿದ್ದ ಪಿತೃವಾಕ್ಯ ಪರಿಪಾಲನೆ, ಪ್ರಜಾಪಾಲನೆಯ ಬದ್ಧತೆಯಂತೂ, ಅರಣ್ಯಕ್ಕೆ ಹೋದಾಗಿನ, ಸೀತಾ ಪರಿತ್ಯಾಗದ ಸಂದರ್ಭಗಳಲ್ಲಿ ವೇದ್ಯವಾಗದೇ ಇರುವುದಕ್ಕೆ ಹೇಗೆ ಸಾಧ್ಯ? ಹೀಗೆ ಒಬ್ಬ ಆದರ್ಶ ವ್ಯಕ್ತಿ ತನ್ನ ಜೀವನ ಹಲವು ಮಜಲುಗಳಲ್ಲಿ ಬರುವ ಭಿನ್ನ ಭಿನ್ನ ಸಂದರ್ಭಗಳಲ್ಲಿ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟ ಶ್ರೀರಾಮರು ಜೀವನದ ಪ್ರತಿ ಹಂತದಲ್ಲಿಯೂ ನಮಗೆ ಗುರುವಾಗಿಯೇ ನಿಂತಿದ್ದಾರೆ.
ಆತ ಚಕ್ರವರ್ತಿ ತನುಜ, ತನ್ನ ಆದೇಶಕ್ಕೆ ಎದುರು ಮಾತನಾಡುವವರು ಯಾರೂ ಇರಲಿಲ್ಲ. ತನಗೆ ಬಂದ ವಿಪ್ಲವ ಸನ್ನಿವೇಶಗಳಲ್ಲಿ ಆತ ಯಾವ ತಂತ್ರ, ರಾಜತಂತ್ರಗಳನ್ನು ಪ್ರಯೋಗಿಸಿದಾರೂ ಅವೆಲ್ಲವುಗಳನ್ನೂ ಕ್ಷಣಮಾತ್ರದಲ್ಲಿ ನಿಗ್ರಹಿಸಿಬಿಡಬಹುದಿತ್ತು. ಆದರೆ ಮಾನವ ಸಹಜವಾಗಿ ಎದುರಿಸಬೇಕಾದ ಎಲ್ಲಾ ಸಂಕಷ್ಟದ ಸನ್ನಿವೇಶಗಳನ್ನೂ ರಾಮ ಎದುರಿಸುತ್ತಾನೆ. ಆತನ ಜೀವನವೇ ಸೋಲು, ಸಂಕಷ್ಟದ ಸರಮಾಲೆ. ಹೆಜ್ಜೆ ಹೆಜ್ಜೆಗೂ ಆತ ಎದುರಿಸಿದ್ದು ಸತ್ವ ಪರೀಕ್ಷೆ.
ಸಿಂಹಾಸನವೇರುವ ಹೊತ್ತಿಗೆ, ಸ್ವಸ್ತಿವಾಚನದ ಬದಲು, ವನವಾಸದ ಆದೇಶ ಆತನನ್ನು ಸ್ವಾಗತಿಸಲು ಸಿದ್ಧವಿತ್ತು. ವನವಾಸ ಮುಗಿಸಿದ ಬಳಿಕ, ಆತನಿಗೆ ಸಿಂಹಾಸನ ಬೇಕಿತ್ತೋ ಬೇಡವೋ ಆದರೆ ಜವಾಬ್ದಾರಿ ಬಾಧ್ಯತೆಗಳಂತೂ ಹುಟ್ಟಿನಿಂದ ಉಚಿತವಾಗಿ ಬಂದಂಥವು...ಅರಾಜಕತೆಗೆ ಸಿಲುಕಿದ್ದ ಅಯೋಧ್ಯೆಯನ್ನು ಪುನಃ ಕಟ್ಟುವುದೇ ರಾಮನಿಗೆ ಬಹುದೊಡ್ಡ ಸವಾಲಾಗಿತ್ತು. ಆಳುವವನು ದರ್ಪದಿಂದ ದಬ್ಬಾಳಿಕೆ ನಡೆಸಬಾರದು ಯಾಕೆ? ಎಂಬುದಕ್ಕೂ ಶ್ರೀರಾಮನೇ ನಮಗೆ ಉತ್ತರವಾಗಿ ನಿಲ್ಲುತ್ತಾನೆ.
ಸಿಂಹಾಸನ ಶೂನ್ಯವಾದರೆ ಅರಾಜಕತೆ ಬೆಳೆಯುವುದು ಸುಲಭ ಎಂಬ ಅರಿವು ರಾಮನಿಗಿತ್ತು. ಹಾಗಾಗಿಯೆ ರಾಮ ಅರಣ್ಯಕ್ಕೆ ಬಂದಾಗ ತನ್ನನ್ನು ಭೇಟಿ ಮಾಡಿದ್ದ ಭರತನಿಗೂ, ರಾವಣನ ವಧೆಯ ನಂತರ ವಿಭೀಷಣನಿಗೂ ಅರಾಜಕತೆ ಬೆಳೆಯಲು ಅವಕಾಶ ನೀಡದಂತೆ ವಿಷದವಾಗಿ ತಿಳಿಸಿದ್ದ. ಆದರೆ ಇತ್ತ ಭರತನೂ ಇಲ್ಲದೇ ರಾಮನೂ ಇಲ್ಲದೇ ಅರಾಜತೆಗೆ ಸಿಲುಕಿದ್ದ ಅಯೋಧ್ಯೆಯ ಯಾವುದೋ ವ್ಯಕ್ತಿ, ರಾಮನ ಪ್ರಭುತ್ವದ ಬಗ್ಗೆ ಸೀತೆಯನ್ನು ಮುಂದಿಟ್ಟುಕೊಂಡು ಲಘುವಾಗಿ ಮಾತನಾಡಿದ್ದ. ಲಕ್ಷ್ಮಣನಂತೂ ಹಾಗೆ ಮಾತನಾಡಿ ಒಂದಿಬ್ಬರ ತಲೆ ತೆಗೆದರೆ ಎಲ್ಲವೂ ದಾರಿಗೆ ಬರುತ್ತದೆ ಎಂಬ ಕ್ಷಾತ್ರಸಹಜ ಸಲಹೆ ನೀಡುತ್ತಾನೆ. ರಾವಣನ ತಲೆ ತೆಗೆದ ರಾಮನಿಗೆ ಮನಸ್ಸು ಮಾಡಿದ್ದರೆ ಅಯೋಧ್ಯೆಯಲ್ಲಿ ಒಂದಿಬ್ಬರ ತಲೆ ತೆಗೆಯುವುದೇನೂ ದೊಡ್ಡ ವಿಷಯವಾಗಿರಲಿಲ್ಲ. ಆದರೆ ಅರಾಜಕತೆಗೆ ಸಿಲುಕಿದ್ದ ಸಂದರ್ಭದಲ್ಲಿ ಜನರ ವಿಶ್ವಾಸಗಳಿಸುವುದು ರಾಜನಾದವನ ಕರ್ತವ್ಯಗಳಲ್ಲಿ ಒಂದು. ಇದು ಬಲಪ್ರಯೋಗದಿಂದ ಸಾಧ್ಯವಾಗದ್ದು, ಇಂತಹ ಸಂದಿಗ್ಧ ಸನ್ನಿವೇಶಗಳಲ್ಲಿ ಆಳುವವನ ಮೇಲೆ ಸಾಮಾನ್ಯ ಪ್ರಜೆಗಳಿಗೆ ಪ್ರೀತಿ ವಿಶ್ವಾಸಗಳಿರಬೇಕೇ ಹೊರತು. ಅನಿವಾರ್ಯವಲ್ಲದಿದ್ದಾಗಲೂ ಸುಖಾಸುಮ್ಮನೆ ಬಲಪ್ರಯೋಗ ಮಾಡಿ ಅಂತಹವರುಗಳನ್ನು ನಿಯಂತ್ರಣದಲ್ಲಿಡುವುದು ಸಮಂಜಸವಲ್ಲ ಎಂಬುದು ರಾಮನ ರಾಜಧರ್ಮದ ತತ್ವ. ಜಗತ್ತಿನ ಬೇರೆ ದೊಡ್ಡ ದೊಡ್ಡ ಸಾಹಿತ್ಯದಲ್ಲಿ ಬರುವ ನಾಯಕರಿಗೂ, ಮಹಿತೋನ್ನತ ಚರಿತ್ರೆಯನ್ನು ಹೊಂದಿರುವ ನಮ್ಮ ಪ್ರಭು ಶ್ರೀರಾಮನಿಗೂ ಇರುವ ಬಹು ದೊಡ್ಡ ಅಂತರ ಇದೇ...
ತಾನು ತಪ್ಪು ಮಾಡಿದರೆ ತನ್ನನ್ನು ಆಳುತ್ತಿರುವ ಪ್ರಭುವಿಗೆ ಮೋಸ ಮಾಡಿದಂತೆ, ನೋವುಂಟು ಮಾಡಿದಂತೆ ಎನ್ನುವ ಭಾವನೆ ಮೂಡುವ ರೀತಿಯಲ್ಲಿ ಶ್ರೀರಾಮ ಪ್ರಜೆಗಳ ವಿಶ್ವಾಸ ಸಂಪಾದನೆ ಮಾಡಿದ್ದ. ಪ್ರೀತಿ, ಆದರ, ವಿಶ್ವಾಸ ಗಳಿಸುವುದರ ಮೂಲಕ ಮಾತ್ರವಷ್ಟೇ ಸಾಮಾನ್ಯ ಪ್ರಜೆಗಳನ್ನು ಗೆಲ್ಲಬಹುದು ಎಂಬುದನ್ನು, ಸರ್ವಮಾನವ ಸಹಭ್ರಾತೃತ್ವವನ್ನು ಸಾಧಿಸಿ ತೋರಿಸಿದ ಸಾಟಿ ಇಲ್ಲದ ಚಕ್ರವರ್ತಿಯಾಗಿ, ಭರತ ವರ್ಷದ ಜನರ ಹೃದಯ ಸಿಂಹಾಸನಗಳಲ್ಲಿ ಇಂದಿಗೂ ವಿರಾಜಮಾನನಾಗಿದ್ದಾನೆ ಶ್ರೀರಾಮ.
ಶ್ರೀರಾಮ ಭೌತಿಕವಾಗಿ ಜೀವಿದ್ದಾಗಲಷ್ಟೇ ಸವಾಲುಗಳನ್ನು ಎದುರಿಸಲಿಲ್ಲ. ಆತನ ಚರಿತ್ರೆಯೋದಿದವರು ಪತ್ನಿಯನ್ನು ಕಾಡಿಗೆ ಕಳಿಸಿದ್ದನ್ನು ಪ್ರಶ್ನಿಸಿ ತಿವಿದರು, ಆತನ ಶಮದಮಾದಿ ಗುಣಗಳನ್ನೂ ಅಸಹಾಯಕತೆ ಎಂಬ ತಪ್ಪು ಕಲ್ಪನೆಗೆಳೆದರು. ಆದರೆ ಆತ ತನ್ನ ಜೀವನವನ್ನು ಪ್ರತಿಯೊಂದು ಹಂತದಲ್ಲೂ ಸತ್ವ ಪರೀಕ್ಷೆಗೆ ಒಡ್ಡಿದವ. ಸಿಂಹಾಸನವೇರುವುದರಿಂದ, ಪ್ರಿಯ ಪತ್ನಿಯ ಅಗಲುವಿಕೆ, ಟೀಕೆ, ಎಲ್ಲವನ್ನೂ ಸಹಿಸಿದ. ಕೊನೆಗೆ ನಮ್ಮ ಕಾಲಘಟ್ಟದಲ್ಲಿ ಆತನಿಗೆ ಆತನ ಜನ್ಮಸ್ಥಾನದ ಜಾಗದ ಅಸ್ತಿತ್ವವನ್ನೇ ನಿರಾಕರಿಸುವ ಮಟ್ಟಕ್ಕೆ ವಿಸ್ಮೃತಿ ವಿಜೃಂಭಿಸಿದಾಗ ಅದನ್ನೂ ಸಹಿಸಿದ. ಪ್ರತಿಯೊಂದು ಹೆಜ್ಜೆಯಲ್ಲೂ ಉತ್ತರದಾಯಿತ್ವವನ್ನು ಸಮರ್ಥವಾಗಿ ನಿಭಾಯಿಸಿದ ಆ ಪುಣ್ಯ ಪುರುಷನಿಗೆ ಸಾಟಿ ಯಾರು? ಯಾವುದು ಸ್ವಾಭಾವಿಕವೋ, ಯಾವುದು ಸಾತ್ವಿಕವೋ ಅದು ಎಂದಿಗೂ ಅಳಿಯುವುದಿಲ್ಲ. ಯಾವುದು ಅವಿನಾಶಿಯೋ ಅದೇ ಪರಬ್ರಹ್ಮ, ಪರಮ ಸತ್ಯ, ಅದೇ ಶ್ರೀರಾಮ... ರಾಮ ಅವಿನಾಶಿಯಾಗಿರುವ ಪರಬ್ರಹ್ಮದ ಮೂರ್ತರೂಪ. ಹಾಗಾಗಿಯೇ ಆತನನ್ನು ರಾಮೋ ವಿಗ್ರಹವಾನ್ ಧರ್ಮಃ ಎಂದರು. ಪ್ರಕೃತಿ, ಪರಬ್ರಹ್ಮ, ಸತ್ಯಗಳನ್ನು ಅಳಿಸುವುದಕ್ಕೆ ಹೇಗೆ ಸಾಧ್ಯವಾಗುವುದಿಲ್ಲವೋ ಹಾಗೆಯೇ ರಾಮನನ್ನು ಜನ್ಮಸ್ಥಾನದಿಂದ, ಜನಮಾನಸದಿಂದ ಅಳಿಸುವುದು ಅಸಾಧ್ಯ. ಸ್ವಲ್ಪ ಮಂಕು ಕವಿಯಬಹುದು, ವಿಸ್ಮೃತಿಯಾಗಬಹುದು, ವಿಳಂಬವಾಗವಹುದು, ಆದರೆ ಯುಗ-ಯುಗಗಳು ಕಳೆದರೂ ವಿನಾಶ ಸಾಧ್ಯವಿಲ್ಲ. ರಾಮ ಅವಿನಾಶಿ ಎಂಬುದಕ್ಕೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ, ಅದಕ್ಕಾಗಿ ನಡೆದ, ಜತನದಿಂದ ಕಾಯ್ದುಕೊಂಡ ನ್ಯಾಯಸಮ್ಮತ, ಸುದೀರ್ಘ ಹೋರಾಟಗಳೇ ಸಾಕ್ಷಿ. ನ್ಯಾಯಾಧೀಶರ ಸರ್ವಾನುಮತದ ತೀರ್ಪಂತೂ, ಮತ್ತೊಂದು ರಾಮಾಯಣ ಘಟಿಸಿ, ವನವಾಸದಿಂದ ವಾಪಸ್ಸಾದ ರಾಮನನ್ನು ಅಯೋಧ್ಯೆಯ ಪ್ರಜೆಗಳು ಅದ್ಧೂರಿ ಸಂಭ್ರಮ ಸಡಗರದಿಂದ ಮತ್ತೆ ಸ್ವಾಗತಿಸಿದ್ದಾರೆನೋ ಎಂಬಂತೆ ಭಾಸವಾಗುತ್ತದೆ. ಪ್ರಭು ರಾಮನಿಗೆ ನಿರಾಶೆಯಾಗದಂತೆ ರಾಮರಾಜ್ಯದ ಕನಸು ನನಸಾಗಿಸುವುದು ಅವನ ಪ್ರಜೆಗಳಾದ ನಮ್ಮ ಕರ್ತವ್ಯಭಾರ ಬಹುದೊಡ್ಡದಿದೆ. ಶ್ರೀರಾಮನೆಂದರೆ ಸತ್ಯ, ನಿಷ್ಠೆ, ಸತ್ಯ ಎಂದಿಗೂ ಮುನ್ನೆಲೆಯಲ್ಲಿರುವುದಿಲ್ಲ ಅದು ಗುಪ್ತಗಾಮಿನಿಯಾಗಿರುತ್ತದೆ. ಕಾಲ ಪ್ರವಾಹದಲ್ಲಿ ಅದಕ್ಕೆ ಧುಮ್ಮಿಕ್ಕಿ ಪ್ರವಹಿಸುವುದೂ ಗೊತ್ತು. ಗುಪ್ತಗಾಮಿನಿಯಾಗಿ ಸದ್ದಿಲ್ಲದೇ ಹರಿಯುವುದೂ ಗೊತ್ತು, ಅಂತಹ ನಿತ್ಯಸತ್ಯವೇ ಶ್ರೀರಾಮ...
-ಶ್ರೀನಿವಾಸ್ ರಾವ್
srinivas.v4274@gmail.com, srinivasrao@kannadaprabha.com