ನಾಡಿನೆಲ್ಲೆಡೆ ಇಂದು ನಾಗರ ಪಂಚಮಿ ಸಂಭ್ರಮ, ನಾಗ ಕಲ್ಲಿಗೆ, ಹುತ್ತಕ್ಕೆ ಹಾಲೆರೆಯುವ ಸಂಪ್ರದಾಯ

ಶ್ರಾವಣ ಮಾಸ ಎಂದರೆ ಹಬ್ಬಗಳ ಸಾಲು ಸಾಲು ಆಚರಣೆ ಸಂಭ್ರಮ. ಹೆಂಗಳೆಯರಿಗಂತೂ ಶ್ರಾವಣ ಮಾಸ ಮತ್ತಷ್ಟು ವಿಶೇಷ. ಇಂದು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ.
ನಾಗಕಲ್ಲು
ನಾಗಕಲ್ಲು

ಶ್ರಾವಣ ಮಾಸ ಎಂದರೆ ಹಬ್ಬಗಳ ಸಾಲು ಸಾಲು ಆಚರಣೆ ಸಂಭ್ರಮ. ಹೆಂಗಳೆಯರಿಗಂತೂ ಶ್ರಾವಣ ಮಾಸ ಮತ್ತಷ್ಟು ವಿಶೇಷ. 

ಇಂದು ಶ್ರಾವಣ ಮಾಸದ(Shraavan Maas) ಶುಕ್ಲ ಪಕ್ಷದ ಪಂಚಮಿ ತಿಥಿ. ನಾಗರ ಪಂಚಮಿಯನ್ನು(Naga Panchami) ನಾಡಿನೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಕಲಿಯುಗದ ಪ್ರತ್ಯಕ್ಷ ದೇವರಾದ ನಾಗ ದೇವತೆಗಳನ್ನು ಆರಾಧಿಸುವ ಈ ವಿಶೇಷ ದಿನದಂದು ಬದುಕಿನ ಸರ್ವ ಸಂಕಷ್ಟಗಳು ದೂರವಾಗಿ, ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಜನರು ಆಶಿಸಿ ನಾಗನನ್ನು ಭಕ್ತಿಯಿಂದ ಪೂಜಿಸುವ ಹಬ್ಬ.

ಶಿವನ ಆಭರಣವಾದ ಹಾವುಗಳು ಶಕ್ತಿ ಮತ್ತು ಸೂರ್ಯನ ಅವತಾರವಾಗಿವೆ. ಹಾವುಗಳು ಶಿವನಿಗೆ ಬಹಳ ಪ್ರಿಯವಾಗಿದ್ದು, ಶಿವನನ್ನು ಪೂಜಿಸುವ ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಬ್ಬ ಬರುತ್ತದೆ. 

ಶ್ರಾವಣ ಮಾಸದಲ್ಲಿ ಭಾರತದಲ್ಲಿ ಮಳೆಯಿಂದಾಗಿ ಹಾವುಗಳು ನೆಲದಿಂದ ಹೊರಬರುತ್ತವೆ. ಜನರು ಅವನ್ನು ದೇವರೆಂದು ಬಗೆಯುವುದರಿಂದ ಅವುಗಳಿಗೆ ಹಾನಿಯಾಗುವುದಿಲ್ಲ. ಅವಿವಾಹಿತ ಮಹಿಳೆಯರು ನಾಗರ ಪಂಚಮಿ ವ್ರತ ಮತ್ತು ಪೂಜೆ ಆಚರಿಸಿದರೆ ಉತ್ತಮ ಪತಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಅಲ್ಲದೆ, ಹಾವು ಕಡಿತದಿಂದ ರಕ್ಷಣೆಯೂ ಸಿಗುತ್ತದೆ. ಆದಾಗ್ಯೂ, ಪ್ರಾರ್ಥನೆಗಳು ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಯಾರಾದರೂ ನಾಗ ದೇವರನ್ನು ಪ್ರಾರ್ಥಿಸಿ ಫಲ ಪಡೆಯಬಹುದು. 

ಉತ್ತರ ಕರ್ನಾಟಕದ ಕಡೆ ಈ ಹಬ್ಬವನ್ನು ಅಣ್ಣತಮ್ಮಂದಿರ ಅಥವಾ ಜೋಕಾಲಿ ಹಬ್ಬವೆಂದೇ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಂದು ಅಶ್ವತ್ಥಕಟ್ಟೆಗಳಲ್ಲಿ ಪ್ರತಿಷ್ಠಾಪಿಸಿರುವ ನಾಗರಕಲ್ಲುಗಳಿಗೆ ಮಡಿಯಲ್ಲಿ ಹಾಲೆರೆದು ಸುಬ್ರಹ್ಮಣ್ಯೇಶ್ವ ಸ್ವಾಮಿಯ ಕೃಪಾರ್ಥಕ್ಕೆ ಪಾತ್ರರಾಗುತ್ತಾರೆ ನಾಗರ ಪಂಚಮಿಯಂದು ನಾಗರಕಲ್ಲಿಗೆ ಹಾಲೆರೆಯುವ ಮೂಲಕ ತಾಯಿಯ ಹಾಲ ಋಣ ತೀರಿಸಬಹುದು ಎಂಬ ನಂಬಿಕೆಯೂ ಇದೆ.

ಇನ್ನೂ ಕೆಲವರ ಮನೆಗಳಲ್ಲಿ ಬೆಳ್ಳಿ-ಹಿತ್ತಾಳೆಯ ನಾಗಮೂರ್ತಿ ಅಥವಾ ಅಕ್ಕಿಹಿಟ್ಟು ಇಲ್ಲವೇ ತಂಬಿಟ್ಟಿನಿಂದ ನಾಗರ ಮೂರ್ತಿಯನ್ನು ತಯಾರು ಮಾಡಿ, ಮಹಿಳೆ-ಮಕ್ಕಳೆಲ್ಲರೂ ಸೇರಿ ಹಳದಿ ದಾರವನ್ನು ಕೊರಳಲ್ಲಿ ಧರಿಸಿ, ಹಾಲು-ತುಪ್ಪವನ್ನು ನಾಗ ಮೂರ್ತಿಗೆ ಎರೆದು ಪ್ರಾರ್ಥಿಸುತ್ತಾರೆ. ನೈವೇದ್ಯಕ್ಕಾಗಿ ಅರಳು, ಶೇಂಗಾ, ಕಡಲೆ, ಕೊಬ್ಬರಿ, ಬೇಸನ್ ಲಡ್ಡು, ಕಡಲೆ ಕಾಯಿ-ಹುರಿಗಡಲೆ ಉಂಡೆ, ನವಣೆ ಉಂಡೆಗಳನ್ನು ಇಟ್ಟಿರುತ್ತಾರೆ. ಮನೆಗೆ ಬಂದ ಮುತ್ತೈದೆಯರಿಗೆ ಹೊಸ ಬಳೆ, ಸೀರೆ ಕುಪ್ಪಸ ನೀಡುವ ಸಂಪ್ರದಾಯ ಇದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಬನಕ್ಕೆ ಹೋಗಿ ಹಾಲೆರೆಯುವ ಸಂಪ್ರದಾಯವಿದೆ. ನಾಗಬನದಲ್ಲಿ ನಾಗನ ಕಟ್ಟೆ ಪ್ರತಿಷ್ಠಾಪಿಸಿರುತ್ತಾರೆ. ಬೆಳಗ್ಗೆಯೇ ಹುತ್ತಕ್ಕೆ ಹಾಲೆರೆದು ನಾಗರ ಪಂಚಮಿ ವಿಶೇಷ ಹಾಲು ಪಾಯಸ ಮಾಡುತ್ತಾರೆ.

ಪೌರಾಣಿಕ ಕಾಲದಿಂದಲೂ ಸರ್ಪಗಳನ್ನು ದೇವರಂತೆ ಪೂಜಿಸಲಾಗುತ್ತದೆ. ನಾಗರ ಪಂಚಮಿಯ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂದು ನಂಬಲಾಗಿದೆ.

ನಾಗ ಪಂಚಮಿಯಂದು ನಾಗನ ಆರಾಧನೆಯಿಂದ ರಾಹು-ಕೇತು ಮತ್ತು ಕಲಸರ್ಪ ದೋಷಗಳ ದುಷ್ಪರಿಣಾಮಗಳಿಂದ ಮುಕ್ತಿಯನ್ನು ನೀಡುತ್ತದೆ. ಈ ದಿನದಂದು ನಾಗದೇವತೆಯ ಪೂಜೆಯ ಜೊತೆಗೆ ಶಿವನನ್ನು ಪೂಜಿಸುವ ಮತ್ತು ರುದ್ರಾಭಿಷೇಕವನ್ನು ಮಾಡುವ ವ್ಯಕ್ತಿಯ ಜೀವನದಲ್ಲಿನ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com