ಮುದ ಕಳೆದುಕೊಂಡಿರುವ ಮೋದಕ ಪ್ರಿಯನ ಹಬ್ಬ

ಅಂತೂ ಇಂತೂ ಎರಡು ವರ್ಷ ಕೊರೋನಾ ಸಾಂಕ್ರಾಮಿಕ ಮಹಾಮಾರಿಯ ಸಂಕಷ್ಟಗಳನ್ನು ಎದುರಿಸಿ ಗೆದ್ದು ಬಂದ ನಂತರ ಈ ವರ್ಷ ನಿರ್ವಿಘ್ನವಾಗಿ ಗೌರೀ ಮತ್ತು ಗಣೇಶ ಹಬ್ಬಗಳನ್ನು ಆಚರಿಸಲಾಗುತ್ತಿದೆ. 
ಗಣೇಶನ ಮೂರ್ತಿ
ಗಣೇಶನ ಮೂರ್ತಿ

ಬರಹ-ಶ್ರೀಕಂಠ ಬಾಳಗಂಚಿ 

ಅಂತೂ ಇಂತೂ ಎರಡು ವರ್ಷ ಕೊರೋನಾ ಸಾಂಕ್ರಾಮಿಕ ಮಹಾಮಾರಿಯ ಸಂಕಷ್ಟಗಳನ್ನು ಎದುರಿಸಿ ಗೆದ್ದು ಬಂದ ನಂತರ ಈ ವರ್ಷ ನಿರ್ವಿಘ್ನವಾಗಿ ಗೌರೀ ಮತ್ತು ಗಣೇಶ ಹಬ್ಬಗಳನ್ನು ಆಚರಿಸಲಾಗುತ್ತಿದೆ. 

ಗಣೇಶ ಹಬ್ಬ ಎಂದರೆ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಹಳ ಮುದ ನೀಡುವ ಹಬ್ಬ. ಸಂಸ್ಕೃತಿ, ಭಕ್ತಿ-ಭಾವ, ಪೂಜೆ-ಪುನಸ್ಕಾರ ಜೊತೆಗೆ ಹಬ್ಬದ ತರಹೇವಾರಿ ತಿನಿಸುಗಳನ್ನು ತಿಂದು ಮೋಜು ಮಾಡುವ ಹಬ್ಬವೆಂದರೆ ಅದು ಗಣೇಶ ಹಬ್ಬ.

ಹಳ್ಳಿ-ಪಟ್ಟಣ ಸೇರಿದಂತೆ ನಗರ ಪ್ರದೇಶಗಳಲ್ಲಿ ಮಕ್ಕಳು ಗಣೇಶ ಹಬ್ಬಕ್ಕೆ ಒಂದು ತಿಂಗಳ ಮುಂಚೆಯೇ, ಸಮವಯಸ್ಕ ಹುಡುಗರೆಲ್ಲಾ ಸೇರಿ, ಈ ಬಾರಿ ಯಾವ ರೀತಿಯಾಗಿ ಹಬ್ಬವನ್ನು ಆಚರಿಸಿಬೇಕು ಎಂದು ಯೋಚಿಸಿ ಸಣ್ಣ ಡಬ್ಬಿ ಗಡಿಗೆ ಮಾಡಿಕೊಂಡೋ ಇಲ್ಲವೇ, ಪುಸ್ತಕವನ್ನು ಹಿಡಿದುಕೊಂಡು ಪರಿಚಯಸ್ಥರು, ಓಣಿಗಳು, ಬಡಾವಣೆಯ ತುಂಬೆಲ್ಲ ಮನೆ ಮನೆಗಳಿಗೆ ಹೋಗಿ ಗಣೇಶನನ್ನು ಕೂರಿಸ್ತೇವೆ, ಚಂದಾ ಕೊಡಿ ಎಂದು ಕೇಳಿಕೊಂಡು ಬರುತ್ತಾರೆ. ಇತ್ತೀಚೆಗೆ ಇದು ಕಡಿಮೆಯಾದರೂ ಸಂಪೂರ್ಣವಾಗಿ ನಶಿಸಿ ಹೋಗಿಲ್ಲ.

ಮಕ್ಕಳಿಗೆ ಗಣೇಶನ ಮೂರ್ತಿಯನ್ನು ತಮ್ಮ ಏರಿಯಾದಲ್ಲಿ ಕೂರಿಸುವುದು, ಭಜನೆ, ಪೂಜೆ ಮಾಡುವುದು, ನೈವೇದ್ಯಕ್ಕೆ ವಿವಿಧ ಭಕ್ಷ್ಯಗಳನ್ನು ಇಟ್ಟು ಪೂಜೆ ಮಾಡುವುದು, ಗಣೇಶ ಮೂರ್ತಿ ಮುಂದೆ ಟಪಾಂಗುಚ್ಚಿ ಕುಣಿಯುವುದು ಎಂದರೆ ಎಲ್ಲಿಲ್ಲದ ಖುಷಿ. ಗಣೇಶ ಮೂರ್ತಿ ಇಡಲು ಹಣ ಕೇಳಲು ಹೋಗುವ ಮಕ್ಕಳಿಗೆ ಓ ಗಣೇಶ ಇಡ್ತಾ ಇದ್ದೀರಾ ಅಂತ ಕೆಲವರು ಕೈಲಾದ ಮಟ್ಟಿಗೆ ದೇಣಿಗೆ ಕೊಟ್ಟು ಕಳುಹಿಸಿದರೆ, ಇನ್ನೂ ಕೆಲವರು ಬೈದು ಕಳಿಸುವುದೂ ಉಂಟು.

ನಾವು ಚಿಕ್ಕವರಿರುವಾಗ ಕೈಯ್ಯಲ್ಲೊಂದು ಅಕ್ಷತೆಯ ಡಬ್ಬವನ್ನು ಹಿಡಿದುಕೊಂಡು, ಎಲ್ಲರ ಮನೆಯ ಮುಂದೆ ಹೋಗಿ ರೀ, ನಿಮ್ಮ ಮನೆಯಲ್ಲಿ ಗಣೇಶ ಇಟ್ಟಿದೀರಾ? ಅಂತ ಕೇಳ್ಕೊಂಡು ಅವರು ಹೂಂ ಎಂದು ಉತ್ತರಿಸುವುದಕ್ಕಿಂತಲೂ ಮುಂಚೆಯೇ ಅವರ ಮನೆಯೊಳಗೆ ನುಗ್ಗಿ, ಶ್ರೀ ವಿದ್ಯಾ ಗಣಪತೀ ಕೀ ಜೈ ಎಂದು ಎಲ್ಲರೂ ಜೋರಾಗಿ ಕೂಗಿ ನಿಂತಲ್ಲಿಯೆ ಪ್ರದಕ್ಷಿಣೇ ಹಾಕಿ ಮಂತ್ರಾಕ್ಷತೆ ಹಾಕಿ ನಮಸ್ಕಾರ ಮಾಡುತ್ತಿದ್ದ ದಿನಗಳು ನೆನಪಾದವು. ಎಷ್ಟೋ ಸಲಾ ನಾವು ತೆಗೆದುಕೊಂಡ  ‍ಹೋದ ಅಕ್ಷತೆ ಖಾಲಿಯಾದಲ್ಲಿ, ನಾವು ಭೇಟಿ ನೀಡುವ ಮನೆಗಳಲ್ಲಿಯೆ ಸ್ವಲ್ಪ ಅಕ್ಷತೆ ಕೊಡ್ತೀರಾ ಎಂದು ನಿಸ್ಸಂಕೋಚವಾಗಿ ಕೇಳಿ ಪಡೆಯುತ್ತಿದ್ದೆವು.

ಮಕ್ಕಳು ಗಣೇಶ ನೋಡಲು ಬರುತ್ತಾರೆ ಎಂದು ತಿಳಿದೇ, ಬಹುತೇಕ ಎಲ್ಲರ ಮನೆಗಳ ಬಾಗಿಲುಗಳೂ ತೆರೆದಿರುತ್ತಿದ್ದವು ಮತ್ತು ಆ ರೀತಿ ಬರುವ ಮಕ್ಕಳಿಗೆಂದೇ ಚೆರ್ಪು (ಪ್ರಸಾದ) ಸಿದ್ಧ ಪಡಿಸಿಟ್ಟು ಬಂದ ಎಲ್ಲಾ ಮಕ್ಕಳಿಗೂ ಅದನ್ನು ಕೊಟ್ಟು ಸಂಭ್ರಮಿಸುತ್ತಿದ್ದ ಆ ದಿನಗಳು ಈಗ ಇತಿಹಾಸವಾಗಿದೆ. ಇನ್ನು ನಾವುಗಳೂ ಸಹಾ ಆ ರೀತಿಯ ಪ್ರಸಾದಗಳನ್ನು ಅಲ್ಲಿಯೇ ತಿಂದು ಎಂಜಿಲು ಮಾಡಬಾರದೆಂದು ಅದಕ್ಕೆಂದೇ ಒಂದು ಡಬ್ಬಿ ಅಥವಾ ಚೀಲವನ್ನು ತೆಗೆದುಕೊಂಡು ಹೋಗಿ ಅದರಲ್ಲಿ ಸಂಗ್ರಹಿಸಿಕೊಂಡು ಸಂಜೆ ಮನೆಗೆ ಹಿಂದಿರುಗಿದ ನಂತರ ಗೆಳೆಯರೊಡನೆಯೋ ಇಲ್ಲವೇ ಅಕ್ಕ ತಮ್ಮಂದಿರೋ ಇಲ್ಲವೇ ಅಣ್ಣ ತಂಗಿಯರೊಡನೆ ಹಂಚಿ ತಿನ್ನುತ್ತಿದ್ದ ದಿನಗಳು ನೆನಪಾದವು.

ಇನ್ನು ಹಬ್ಬದ ಮಧ್ಯಾಹ್ನದಿಂದಲೇ ಎಲ್ಲರ ಮನೆಗಳ ಗಣೇಶನನ್ನು ನೋಡುವ ಸಂಭ್ರಮ. ಯಾರು ಎಷ್ಟು ಹೆಚ್ಚು ಗಣೇಶನನ್ನು ನೋಡುತ್ತಾರೋ ಅವನೇ ಹೀರೋ. ಹಾಗಾಗಿ ಕನಿಷ್ಟ ಪಕ್ಷ 21, ಇನ್ನೂ ಹೆಚ್ಚೆಂದರೆ 51, ಅದಕ್ಕಿಂತಲೂ ಹೆಚ್ಚೆಂದರೆ 101 ಅಥವಾ 108 ಗಣೇಶನನ್ನು ನೋಡಿದನೆಂದರೆ ಎವರೆಸ್ಟ್ ಏರಿದಕ್ಕಿಂತಲೂ ಹೆಚ್ಚಿನ ಕೀರ್ತಿ ಲಭಿಸುತ್ತಿತ್ತು.

ಅಪರಿಚಿತ ಮನೆಗಳಿಗೆ ಹೋಗಲು ನಮಗೆ ಯಾವುದೇ ರೀತಿಯ ಭಯ ಇರಲಿಲ್ಲ. ಮತ್ತು ಅದೇ ರೀತಿ ಅಪರಿಚಿತ ಹುಡುಗರು ಮನೆಗೆ ಬರುತ್ತಾರೆ ಎಂದು ಮನೆಯವರೂ ಬೇಸರಿಸಿಕೊಳ್ಳುತ್ತಿರಲಿಲ್ಲ. ಎಲ್ಲರೂ ಸಂತೋಷದಿಂದ ತಮ್ಮ ಮನೆಗಳಿಗೆ ಸ್ವಾಗತಿಸುತ್ತಿದ್ದರು.

ಪರಿಚಯಸ್ಥರ ಮನೆಗಳಲ್ಲಿ ಏ, ಶ್ಲೋಕ ಹೇಳ್ರೋ ಇಲ್ಲವೇ ಹಾಡು ಹೇಳ್ರೋ ಎಂದು ನಮ್ಮಿಂದ ಹಾಡು ಮತ್ತು ಶ್ಲೋಕಗಳನ್ನು ಹೇಳಿಸಿ ಸಂಭ್ರಮಿಸುತ್ತಿದ್ದರು. ಮೊನ್ನೆ ಗಣೇಶ ಹಬ್ಬದ ದಿನ ಇವೆಲ್ಲವೂ ನೆನಪಾಗಿ ಬೇರೆಯವರ ಮನೆಗೆ ಹೋಗುವುದು ಬೇಡ ಎಂದು ನಿರ್ಧರಿಸಿ, ನನ್ನ ತಂಗಿಯ ಮನೆಗೆ ಹೋಗಿ ಎಲ್ಲರೂ ಜೋರಾಗಿ ಶ್ರೀ ವಿದ್ಯಾ ಗಣಪತೀ ಕೀ ಜೈ ಎಂದು ಹೇಳಿ ಒಳಗೆ ಅನಾರೋಗ್ಯದಿಂದ ಮಲಗಿದ್ದ ಭಾವನನ್ನು ಎಬ್ಬಿಸಿ, ಅವರೂ ಸಹಾ ಅರೇ, ಈ ಹೊತ್ತಿನಲ್ಲಿ ಯಾರು ಬಂದರೂ ಎಂದು ನಿದ್ದೆಯ ಮಂಪರಿನಲ್ಲಿಯೇ ಎದ್ದು ಬಂದು ನಮ್ಮೆಲ್ಲರನ್ನೂ ನೋಡಿ ಸಂತೋಷ ಪಟ್ಟು ಎಲ್ಲರೂ ಒಟ್ಟಿಗೆ ಹಾಡು ಹಸೆಗಳನ್ನು ಹೇಳಿ ಸಂಭ್ರಮಿಸಿದೆವಾದರೂ ಗತ ವೈಭವವನ್ನು ಮರುಕಳಿಸಲಾಗಲಿಲ್ಲ ಎನ್ನುವುದಂತೂ ಸತ್ಯ.

ಸಾಂಕ್ರಾಮಿಕ ರೋಗದ ಜೊತೆಗೆ ಸಾರ್ವಜನಿಕವಾಗಿ ಹಬ್ಬದ ಆಚರಣೆಗೆ ಸರ್ಕಾರದ ರೀತಿ ನೀತಿಗಳಿಂದಾಗಿ ಈ ಬಾರಿಯ ಹಬ್ಬದ ಸಂಭ್ರಮ ಹಿಂದಿನಷ್ಟಿಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ, ಈ ಬಾರಿ ಬಹುತೇಕರು ಮೊಬೈಲ್ಗಳಲ್ಲಿಯೇ ಪೂಜಾ ವಿಧಿ ವಿಧಾನಗಳನ್ನು ಅಚರಿಸಿದ ಪರಿಣಾಮ ಹಬ್ಬದ ಸಮಯದಲ್ಲಿ ಪುರೋಹಿತರಿಗೆ ಆಗುತ್ತಿದ್ದ ಅಲ್ಪ ಸ್ವಲ್ಪ ಆದಾಯಕ್ಕೂ ಕಲ್ಲು ಬಿದ್ದಿದ್ದಂತೂ ಸುಳ್ಳಲ್ಲ. ಇನ್ನು ಸಂಜೆಯ ಸಾಂಸ್ಕೃತಿಕ ಸಮಾರಂಭಗಳಿಲ್ಲದ ಕಾರಣ, ಭಜನಾ ಮಂಡಳಿಗಲೂ, ಸುಗಮ ಸಂಗೀತ, ನಾಟಕ ಮತ್ತು ಆರ್ಕೇಷ್ಟ್ರಾ ಕಲಾವಿದರುಗಳ ಹೊಟ್ಟೆಗೆ ತಣ್ಣಿರು ಬಟ್ಟೆಯೇ ಗತಿಯಾಗಿದ್ದು ನಿಜಕ್ಕೂ ದುಖಃಕರವೇ ಸರಿ.

ಇನ್ನು ಸಾರ್ವಜನಿಕ ಕೆರೆ ಕಟ್ಟೆಗಳಲ್ಲಿ ಗಣೇಶ ವಿಸರ್ಜನೆಯನ್ನು ನಿಷೇಧಿಸಿದ ಪರಿಣಾಮ, ಸಂಜೆ ಗಂಟೆ, ಜಾಗಟೆ ಬಾರಿಸಿಕೊಂಡು, ಗಣೇಶ ಬಂದ ಕಾಯ್ಕಡ್ಬು ತಿಂದಾ, ಚಿಕ್ಕೆರೆಲೀ ಬಿದ್ದ, ದೊಡ್ಡ ಕೆರೇಲೀ ಎದ್ದ. ಗಣೇಶ ಬಪ್ಪಾ ಮೋರ್ಯಾ, ಗಣಪತಿ ಬಪ್ಪಾ ಮೋರ್ಯಾ, ಮಂಗಳ ಮೂರ್ತಿ ಮೂರ್ಯಾ ಎಂಬ ಘೋಷಣೆಗಳಾಗಲೀ, ಭಾದ್ರಪದ ಶುಕ್ಲದಾ ಚೌತಿಯಂದೂ, ಚಂದಿರನ ನೋಡಿದರೇ, ಅಪವಾದ ತಪ್ಪದು ಎಂದು ಧ್ವನಿವರ್ಧಕಗಳಲ್ಲಿ ಕೇಳಿಬರುತ್ತಿದ್ದ ಶಮಂತಕೋಪಾಖ್ಯಾನದ ಹಾಡುಗಳೂ ಇಲ್ಲದೇ, ನೀರಸವಾಗಿತ್ತು.

ಈ ಬಾರಿ ಮೇಲೆ ತಿಳಿಸಿದ ಯಾವುದೇ ಸಂಭ್ರಗಳೂ ಇಲ್ಲದೇ, ಸರಳವಾಗಿ ಎಲ್ಲವೂ online ಮುಖಾಂತರವೆ, WhatsApp ಮತ್ತು Facebookಗಳಲ್ಲಿ ಎಲ್ಲರ ಮನೆಗಳ ಗೌರಿ ಮತ್ತು ಗಣೇಶನನ್ನು ನೋಡಿ ತೃಪ್ತಿ ಪಟ್ಟುಕೊಳ್ಳಬೇಕಾದದ್ದು ತುಸು ಬೇಸರ ತರಿಸಿದ್ದಂತೂ ಸುಳ್ಳಲ್ಲ. ದಸರಾ ಹಬ್ಬ ಅಥವಾ ಕನ್ನಡ ರಾಜ್ಯೋತ್ಸವ ಸಮಯದೊಳಗೆ ಈ ಸಾಂಕ್ರಾಮಿಕ ಮಹಾಮಾರೀ ಆದಷ್ಟು ಕಡಿಮೆಯಾಗಿ ಹಬ್ಬಗಳ ಸಡಗರ ಸಂಭ್ರಮಗಳು ಹಿಂದಿನಂತೆಯೇ ಮರುಕಳಿಸಲೀ. ಇದರಿಂದ ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೂ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಗಳ ಪರಿಚಯವಾಗಲೀ ಎಂದು ಆಶೀಸೋಣ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com