ಬಜೆಟ್ ಮಂಡನೆಗೂ ಮುನ್ನವೇ ದೋಸ್ತಿ ಸರ್ಕಾರಕ್ಕೆ ಮೊದಲ ಶಾಕ್, ಅಧಿವೇಶನಕ್ಕೆ ಜೆಡಿಎಸ್ ಶಾಸಕ ಗೈರು!

ಬಜೆಟ್ ಮಂಡನೆಗೂ ಮುನ್ನವೇ ದೋಸ್ತಿ ಸರ್ಕಾರಕ್ಕೆ ಮೊದಲ ಆಘಾತ ಎದುರಾಗಿದ್ದು, ಮುಂಬೈನಲ್ಲಿ ಬೀಡು ಬಿಟ್ಟು ನಾಯಕರ ಆತಂಕಕ್ಕೆ ಕಾರಣವಾಗಿದ್ದ ಕೆಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಬಜೆಟ್ ಅಧಿವೇಶನಕ್ಕೆ ತಾವು ಗೈರಾಗುತ್ತಿರುವುದಾಗಿ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಬಜೆಟ್ ಮಂಡನೆಗೂ ಮುನ್ನವೇ ದೋಸ್ತಿ ಸರ್ಕಾರಕ್ಕೆ ಮೊದಲ ಆಘಾತ ಎದುರಾಗಿದ್ದು, ಮುಂಬೈನಲ್ಲಿ ಬೀಡು ಬಿಟ್ಟು ನಾಯಕರ ಆತಂಕಕ್ಕೆ ಕಾರಣವಾಗಿದ್ದ ಕೆಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಬಜೆಟ್ ಅಧಿವೇಶನಕ್ಕೆ ತಾವು ಗೈರಾಗುತ್ತಿರುವುದಾಗಿ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೆ.ಆರ್​.ಪೇಟೆ ಜೆಡಿಎಸ್​ ಶಾಸಕ ನಾರಾಯಣಗೌಡ, ಅನಾರೋಗ್ಯದ ಕಾರಣ ನೀಡಿ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಶಾಸಕ ನಾರಾಯಣ ಗೌಡ ಅವರು, ಫುಡ್ ಪಾಯ್ಸನ್ ನಿಂದ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿರುವುದಾಗಿ ತಿಳಿಸಿದ್ದಾರೆ. 
ಆಸ್ಪತ್ರೆಯಿಂದಲೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್​ಲೋಡ್ ಮಾಡಿರುವ ನಾರಾಯಣಗೌಡ, ಫುಡ್‌ ಪಾಯ್ಸನ್‌ ಆಗಿ ಮುಂಬೈನ ಆಸ್ಪತ್ರೆಗೆ ಸೇರಿದ್ದೇನೆ. ಹೀಗಾಗಿ ನಾನು ಬಜೆಟ್‌ ಅಧಿವೇಶನಕ್ಕೆ ಬರಲು ಸಾಧ್ಯವಾಗ್ತಿಲ್ಲ. ಡಿಸ್ಚಾರ್ಜ್‌ ಆದ ಕೂಡಲೇ ಅಧಿವೇಶನದಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದ್ದಾರೆ. ಈ ವಿಷಯವನ್ನು ಸಿಎಂ ಹಾಗೂ ಸ್ಪೀಕರ್‌ ಗಮನಕ್ಕೆ ತಂದಿದ್ದೇನೆ ಅಂತಾ ವಿಡಿಯೋ ಮೂಲಕ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ನಾರಾಯಣಗೌಡ ಅವರು ಬಜೆಟ್ ಅಧಿವೇಶನ ಆರಂಭವಾಗುವುದಕ್ಕೂ ಮುನ್ನಾದಿನ, ಅಂದರೆ ಜ.5 ರಿಂದ ನಾಪತ್ತೆಯಾಗಿದ್ದರು. ಅವರು ಮುಂಬೈಗೆ ಹಾರಿದ್ದಾರೆ ಎಂದು ಗುರುವಾರ ಅಧಿವೇಶನದ ಸಮಯದಲ್ಲಿ ಶ್ರೀರಾಮುಲು ಹೇಳಿಕೆ ನೀಡಿದ್ದರು. ಈಗಾಗಲೇ ಕಾಂಗ್ರೆಸ್ ನ ಕೆಲವು ಅತೃಪ್ತ ಶಾಸಕರು ಬಿಜೆಪಿ ಶಾಸಕರ ಸುಪರ್ದಿಯಲ್ಲಿ ಮುಂಬೈಯ ಹೊಟೇಲ್ ವೊಂದರಲ್ಲಿ ತಂಗಿದ್ದಾರೆ. ಇಂದು ಮಂಡನೆಯಾಗಲಿರುವ ಬಜೆಟ್ ಗೆ ಅಡ್ಡಿಪಡಿಸಬೇಕೆಂಬ ಉದ್ದೇಶದಿಂದಲೇ ಬಿಜೆಪಿ ಈ ಎಲ್ಲ ಕಾರ್ಯತಂತ್ರ ಹೆಣೆದಿದೆ ಎಂದು ದೂರಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com