ಕರ್ನಾಟಕ ಬಜೆಟ್ 2019: ಗ್ರಾಮೀಣಾಭಿವೃದ್ಧಿಗೆ ವಿಶೇಷ ಅನುದಾನ ಘೋಷಣೆ
Published: 08th February 2019 12:00 PM | Last Updated: 08th February 2019 05:38 AM | A+A A-

ಸಂಗ್ರಹ ಚಿತ್ರ
2019ನ್ನು ಜಲವರ್ಷ ಎಂದು ಘೋಷಿಸಲಾಗಿದ್ದು, ಜಲಾಮೃತ ಯೋಜನೆಯಡಿ 20 ಸಾವಿರ ಜಲ ಸಂರಕ್ಷಣಾ ಕಾಮಗಾರಿಗಳನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಡಿ ನಿರ್ವಹಿಸಲು 500 ಕೋಟಿ ರೂ. ಅನುದಾನ ಘೋಷಿಸಲಾಗಿದೆ.
ಇನ್ನು ರಾಯಚೂರು, ವಿಜಯಪುರ, ಮಂಡ್ಯ, ಮತ್ತು ಕೋಲಾರ ಜಿಲ್ಲೆಗಳಲ್ಲಿ 4 ಸಾವಿರ ಕೋಟಿ ರೂ. ವೆಚ್ಚದಲ್ಲಿ ಜಲಧಾರೆಯ ಮೊದಲ ಹಂತದ ಯೋಜನೆ ಪ್ರಾರಂಭಿಸಲು ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಾಗಿದೆ.
ನರೇಗಾ ಯೋಜನೆಯಡಿ 12 ಕೋಟಿ ಮಾನವ ದಿನಗಳ ಸೃಜನೆಯ ಗುರಿಯನ್ನು ಸರ್ಕಾರ ಹೊಂದಿರುವುದು ಹೇಳಿದ ಮುಖ್ಯಮಂತ್ರಿ, ಸುಭದ್ರ ಶಾಲೆ ಯೋಜನೆಯಡಿ ರಾಜ್ಯದ 6825 ಗ್ರಾಮೀಣ ಶಾಲೆಗಳಿಗೆ ನರೇಗಾ ಯೋಜನೆಯಡಿ 90 ಕೋಟಿ ರೂ. ವೆಚ್ಚದಲ್ಲಿ ಕಾಂಪೌಂಡ್ ತಡೆಗೋಡೆಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ಜಿಲ್ಲಾ ಪಂಚಾಯಿತಿಯ ಅನಿರ್ಬಂಧಿತ ಅಭಿವೃದ್ಧಿ ಅನುದಾನವನ್ನು ಗರಿಷ್ಠ 8 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದ್ದು, ಇದಕ್ಕಾಗಿ 172 ಕೋಟಿ ರೂ. ಅನುದಾನವನ್ನು ಘೋಷಿಸಲಾಗಿದೆ. ತಾಲೂಕು ಪಂಚಾಯಿತಿಯ ಅನಿರ್ಬಂಧಿತ ಅಭಿವೃದ್ಧಿ ಅನುದಾನವನ್ನು ಗರಿಷ್ಠ 2 ಕೋಟಿ ರೂ. ಗೆ. ಹೆಚ್ಚಿಸಲಾಗಿದ್ದು, ಇದಕ್ಕಾಗಿ 372 ಕೋಟಿ ರೂ. ಅನುದಾನವನ್ನು ಘೋಷಿಸಲಾಗಿದೆ.
ಮಹಾತ್ಮ ಗಾಂಧೀಜಿ ಅವರ 150 ನೇ ಜಯಂತಿ ಅಂಗವಾಗಿ ಗ್ರಾಮ ಪಂಚಾಯಿತಿಗಳ ಆಡಳಿತದಲ್ಲಿ ಪಾರದರ್ಶತೆ ಬಿಂಬಿಸಲು ಮತ್ತು ಸಾರ್ವಜನಿಕರ ಮಾಹಿತಿಗಾಗಿ ಗ್ರಾಮ ಪಂಚಾಯಿತಿ ಆಯವ್ಯಯ ಕಿರು ಪುಸ್ತಕ ಪ್ರಕಟಣೆ ಮಾಡುವ ಬಗ್ಗೆಯೂ ಸಿಎಂ ಕುಮಾರಸ್ವಾಮಿ ತಮ್ಮ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.