ಕರ್ನಾಟಕ ಬಜೆಟ್ 2019: ಹೊಸ ಕ್ರೀಡಾ ವಸತಿ ಶಾಲೆಗಳ ನಿರ್ಮಾಣ

ಯುವ ಸಬಲೀಕರಣ ಮತ್ತು ಕ್ರೀಡೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದ್ದು, ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್ ಹಾಗೂ ಮಡಿಕೇರಿಯಲ್ಲಿ ಹೊಸ ಕ್ರೀಡಾ ವಸತಿನಿಲಯಗಳ ನಿರ್ಮಾಣಕ್ಕಾಗಿ ಪ್ರಸಕ್ತ ಸಾಲಿನಲ್ಲಿ 12.5
ಕರ್ನಾಟಕ ಬಜೆಟ್ 2019: ಹೊಸ ಕ್ರೀಡಾ ವಸತಿ ಶಾಲೆಗಳ ನಿರ್ಮಾಣ
ಕರ್ನಾಟಕ ಬಜೆಟ್ 2019: ಹೊಸ ಕ್ರೀಡಾ ವಸತಿ ಶಾಲೆಗಳ ನಿರ್ಮಾಣ
ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದ್ದು,  ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್ ಹಾಗೂ ಮಡಿಕೇರಿಯಲ್ಲಿ ಹೊಸ ಕ್ರೀಡಾ ವಸತಿನಿಲಯಗಳ ನಿರ್ಮಾಣಕ್ಕಾಗಿ ಪ್ರಸಕ್ತ ಸಾಲಿನಲ್ಲಿ 12.5 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ನಿಲಯಗಳಲ್ಲಿ ಹದಿಹರೆಯದ ಕ್ರೀಡಾಪಟುಗಳಿಗೆ ಪ್ರವೇಶ ನೀಡುತ್ತಿರುವುದರಿಂದ ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳ ವ್ಯವಸ್ಥೆ ಕಲ್ಪಿಸುವುದು ಅತ್ಯಗತ್ಯ. ಆದುದರಿಂದ, 2019-20ನೇ ಸಾಲಿನಲ್ಲಿ ರಾಜ್ಯದ ರಾಯಚೂರು, ಹಾವೇರಿ, ಮಂಗಳೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಕಲಬುರಗಿ, ಕೋಲಾರ, ಹಾಸನ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಲು 15 ಕೋಟಿ ರೂ.ಗಳನ್ನು ಒದಗಿಸಲಾಗಿದೆ  ಎಂದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಜೆಟ್‌ ಭಾಷಣದಲ್ಲಿ ತಿಳಿಸಿದರು.
ಮಂಡ್ಯ, ಬೀದರ್, ತುಮಕೂರು ಮತ್ತು ಹಾಸನ ಜಿಲ್ಲಾ ಕ್ರೀಡಾಂಗಣಗಳ ಸೌಲಭ್ಯಗಳನ್ನು 4 ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುವುದು. ಕ್ರೀಡಾಪಟುಗಳಿಗೆ ಪೌಷ್ಟಿಕ ಸಮತೋಲಿತ ಆಹಾರ ಒದಗಿಸುವ ದೃಷ್ಟಿಯಿಂದ ಕ್ರೀಡಾ ವಸತಿ ನಿಲಯಗಳಲ್ಲಿರುವ ಕ್ರೀಡಾಪಟುಗಳ ಊಟೋಪಚಾರದ ಬಾಬ್ತು ದಿನಭತ್ಯೆಯನ್ನು ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಚಾಲ್ತಿಯಲ್ಲಿರುವ ಮಟ್ಟಕ್ಕೆ ಹೆಚ್ಚಿಸಲಾಗುವುದು. ಈ ಉದ್ದೇಶಕ್ಕಾಗಿ 2019-20ನೇ ಸಾಲಿನಲ್ಲಿ 6 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ ಎಂದು ಅವರು ಪ್ರಕಟಿಸಿದರು.
ಯುವಜನರಲ್ಲಿ ಸಾಹಸ ಪ್ರವೃತ್ತಿ ಉತ್ತೇಜಿಸಲು ಹಾಗೂ ಪ್ರವಾಸೋದ್ಯಮಕ್ಕೆ ಪೂರಕವಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಮೂಲಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ 10 ಸ್ಥಳಗಳಲ್ಲಿ ಸಾಹಸ ಕ್ರೀಡೋತ್ಸವಗಳನ್ನು ಆಯೋಜಿಸಲಾಗುವುದು. ಈ ಉದ್ದೇಶಕ್ಕಾಗಿ 2019-20ನೇ ಸಾಲಿನಲ್ಲಿ 2 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಯುವ ಕ್ರೀಡಾಪಟುಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ, ಉತ್ತೇಜಿಸಲು ಅನುವಾಗುವಂತೆ 13 ರಿಂದ 15 ವಯೋಮಾನದವರಿಗಾಗಿ ‘ಮಿನಿ ಒಲಿಂಪಿಕ್ ಗೇಮ್ಸ್-2019’ ಆಯೋಜಿಸಲಾಗುವುದು. 
ಭಾರತದ ರಾಷ್ಟ್ರೀಯ ಕ್ರೀಡೆಯಾದ ‘ಹಾಕಿ’ಯಲ್ಲಿ ಕರ್ನಾಟಕ ರಾಜ್ಯದಿಂದ ಆಯ್ಕೆಯಾದವರಲ್ಲಿ ಬಹುತೇಕ ಕ್ರೀಡಾಪಟುಗಳು ಕೊಡವ ಸಮಾಜದವರು. ಹಾಕಿ ಕ್ರೀಡೆಗೆ ಈ ಸಮಾಜದ ಕೊಡುಗೆಯನ್ನು ಗುರುತಿಸಿ, ವಿರಾಜಪೇಟೆಯ ಬಾಳುಗೋಡದಲ್ಲಿರುವ ಕೊಡವ ಸಮಾಜದ ಹಾಕಿ ಕ್ರೀಡಾಂಗಣವನ್ನು 5 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com