ರಾಜ್ಯ ಬಜೆಟ್ 2020: ನೆರೆ ಪರಿಹಾರಕ್ಕೆ ಆದ್ಯತೆ, ಸಾವಯವ ಕೃಷಿಗೆ ಪ್ರೋತ್ಸಾಹ ಎಂದ ಸಿಎಂ

7ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು ರೈತ ಪರ ಬಜೆಟ್ ಮಂಡಿಸುವುದಾಗಿ ಘೋಷಣೆ ಮಾಡಿದ್ದು, ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದಾಗಿ ಹೇಳಿದ್ದಾರೆ. 
ರಾಜ್ಯ ಬಜೆಟ್ ಮಂಡಿಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ
ರಾಜ್ಯ ಬಜೆಟ್ ಮಂಡಿಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ

ಬೆಂಗಳೂರು: 7ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು ರೈತ ಪರ ಬಜೆಟ್ ಮಂಡಿಸುವುದಾಗಿ ಘೋಷಣೆ ಮಾಡಿದ್ದು, ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದಾಗಿ ಹೇಳಿದ್ದಾರೆ.

ವಿಧಾನಸೌಧಲ್ಲಿ ಇಂದು 2020-21ನೇ ಸಾಲಿನ ಆಯವ್ಯಯ ಪಟ್ಟಿ ಮಂಡಿಸುತ್ತಿರುವ ಬಿಎಸ್ ಯಡಿಯೂರಪ್ಪ ಅವರು, ಪ್ರಕೃತಿಯ ಮುನಿಸು, ನೈಸರ್ಗಿಕ ವಿಕೋಪ ಪರಿಹಾರಕ್ಕೆ ಆದ್ಯತೆ ನೀಡಿದ್ದೇವೆ. ಒಂದೆಡೆ ನೆರೆ ಮತ್ತೊಂದೆಡೆ ಬರವನ್ನು ರಾಜ್ಯ ಏಕಕಾಲಕ್ಕೆ ಎದುರಿಸಿತು. 7 ಲಕ್ಷ ಜನರ ಬದುಕಿಗೆ ತೊಂದರೆಯಾಯಿತು. 4.69 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾನಿಗೀಡಾಯಿತು. ರಸ್ತ,ಎ ಸೇತುವೆ, ಶಾಲೆ, ಅಂಗನವಾಡಿಗಳಿಗೆ ಹಾನಿಯಾಯಿತು. 35,160 ಕೋಟಿ ರೂಪಾಯಿ ನಷ್ಟವಾಗಿದೆ. 1869 ಕೋಟಿ ರೂಪಾಯಿ ಕೇಂದ್ರ ಸರ್ಕಾರ ನೀಡಿದೆ ಎಂದು ಹೇಳಿದರು.

ಅಂತೆಯೇ ಈವರೆಗೆ 6.45 ಲಕ್ಷ ರೈತರಿಗೆ ಪರಿಹಾರ ಒದಗಿಸಿದ್ದೇವೆ.  ಪರಿಹಾರ ಮತ್ತು ಪುನರ್ವಸತಿಗೆ ಸಾಕಷ್ಟು ಗಮನ ಕೊಟ್ಟಿದ್ದೇವೆ. ಸುಭಿಕ್ಷ ಮತ್ತು ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದ್ದು, ಪ್ರಾದೇಶಿಕ ಅಸಮತೋಲನ ನಿವಾರಣೆ, ಕೃಷಿ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಕೌಶಲ ಅಭಿವೃದ್ಧಿ ಮೂಲಕ ನಿರುದ್ಯೋಗ ನಿವಾರಣೆಗೆ ಗಮನ ನೀಡುತ್ತಿದ್ದೇವೆ. ರಾಜ್ಯದ ಒಟ್ಟಾರೆ ಜಿಡಿಪಿ ಕಳೆದ ವರ್ಷ ಶೇ 7.8ರಷ್ಟಿತ್ತು. 2019–20ರ ಸಾಲಿನಲ್ಲಿ ಇದು ಶೇ 6.8 ಮುಟ್ಟಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಬಿಎಸ್ ವೈ ಹೇಳಿದರು.

ರೈತರಿಗೆ ಕಿಸಾನ್‌ ಕಾರ್ಡ್‌ ವಿತರಣೆ, ಸಾವಯವ ಕೃಷಿಗೆ ಪ್ರೋತ್ಸಾಹ
ಎಲ್ಲ ರೈತರು ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ ಒದಗಿಸುತ್ತೇವೆ. ರೈತರನ್ನು ಸಾಲಮುಕ್ತರಾಗಿಸಲು ಪಣ ತೊಟ್ಟಿದ್ದೇವೆ. ಬರ ನಿರೋಧಕ ಬೆಳೆಗಳಿಗೆ ಪ್ರೋತ್ಸಾಹ. ಸಿರಿಧಾನ್ಯಗಳನ್ನು ಬೆಳೆಯಲು ಪ್ರತಿ ಹೆಕ್ಟೇರ್‌ಗೆ ₹ 10 ಸಾವಿರದಂತೆ ಪ್ರೋತ್ಸಾಹಧನ ಕೊಡುತ್ತಿದ್ದೇವೆ. ಸಿರಿಧಾನ್ಯಗಳ ಪಟ್ಟಿಗೆ ಇನ್ನಷ್ಟು ಧಾನ್ಯಗಳನ್ನು ಸೇರಿಸುತ್ತೇವೆ. ನೀರಿನಲ್ಲಿ ಕರಗುವ ಗೊಬ್ಬರ, ಸೂಕ್ಷ್ಮ ಪೋಷಕಾಂಶಗಳ ಮಾಹಿತಿ ಮತ್ತು ಸಂಪನ್ಮೂಲಗಳನ್ನು ರೈತರಿಗೆ ಒದಗಿಸುತ್ತೇವೆ. ಸಾವಯವ ಕೃಷಿಗೆ ಪ್ರೋತ್ಸಾಹ ನೀಡಲು 200 ಕೋಟಿ ರೂ ಮೀಸಲಿಟ್ಟಿದ್ದೇವೆ ಎಂದು ಹೇಳಿದರು.

ಆಹಾರ ಸಂಸ್ಕರಣಾ ಘಟಕಗಳಿಗೆ ಅಗತ್ಯ ನೆರವು
ನೀರು ಮತ್ತು ಗೊಬ್ಬರದ ವೈಜ್ಞಾನಿಕ ಬಳಕೆಗೆ ಕ್ರಮ ತೆಗೆದುಕೊಳ್ಳುತ್ತೇವೆ. ಆಹಾರ ಸಂಶೋಧನೆಗಳ ಬಲವರ್ಧನೆ ನಮ್ಮ ಆದ್ಯತೆ. ಆಹಾರ ಸಂಸ್ಕರಣಾ ಘಟಕಗಳು ಮತ್ತು ಉದ್ದಿಮೆಗಳಿಗೆ ತೋಟಗಾರಿಕೆ, ಆಹಾರ ಸಂಸ್ಕರಣಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮೌಲ್ಯವರ್ಧಿತ ಸಂಸ್ಕರಣೆ, ದಾಸ್ತಾನು ಮತ್ತು ಪ್ಯಾಕಿಂಗ್‌ಗೆ ಸಂಬಂಧಿಸಿದ ಅಗತ್ಯ ನೆರವು ಒದಗಿಸಲಾಗುವುದು. ಸುಜಲಾ–3 ಯೋಜನೆ ಮಾದರಿಯಲ್ಲಿಯೇ ವಿಶ್ವಬ್ಯಾಂಕ್ ಸಹಕಾರದಲ್ಲಿ 10 ಲಕ್ಷ ಹೆಕ್ಟೇರ್ ಜಲಾನಯನ ಪ್ರದೇಶದಲ್ಲಿ ಭೂ ಮೌಲ್ಯ ಸಂವರ್ಧನಗೆ ಕ್ರಮ. ಜಲಸಂರಕ್ಷಣೆ ಮತ್ತು ಮಳೆ ನೀರು ಸಂರಕ್ಷಣೆಗಾಗಿ ವಿಶೇಷ ಯೋಜನೆ ರೂಪಿಸುತ್ತೇವೆ. 810 ಅತಿ ಸಣ್ಣ ಜಲಾನಯನ ಪ್ರದೇಶಗಳಲ್ಲಿ ಯೋಜನೆ ಜಾರಿ ಮಾಡುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com