ಮಲ್ಲಿಕಾರ್ಜುನ್ ಖರ್ಗೆ
ಮಲ್ಲಿಕಾರ್ಜುನ್ ಖರ್ಗೆ

ಬಜೆಟ್ ಚುನಾವಣಾ ಪ್ರಣಾಳಿಕೆ, ಸರ್ಕಾರದಿಂದ ಮತದಾರರಿಗೆ ಲಂಚ: ಖರ್ಗೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶುಕ್ರವಾರ ಮಂಡಿಸಿದ ಬಜೆಟ್ ಬಿಜೆಪಿ ಚುನಾವಣಾ ಪ್ರಣಾಳಿಕೆಯಾಗಿದ್ದು, ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶುಕ್ರವಾರ ಮಂಡಿಸಿದ ಬಜೆಟ್ ಬಿಜೆಪಿ ಚುನಾವಣಾ ಪ್ರಣಾಳಿಕೆಯಾಗಿದ್ದು, ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಮತದಾರರಿಗೆ ಲಂಚ ನೀಡುತ್ತಿದೆ ಎಂದ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದ್ದಾರೆ.
ಬಜೆಟ್ ಬಳಿಕ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಈ ಬಜೆಟ್ ಮೂಲಕ ಮೋದಿ ಸರ್ಕಾರ ಲೋಕಸಭೆ ಚುನಾವಣೆಗೆ ಮತದಾರರಿಗೆ ಲಂಚದ ಆಮಿಷ ಒಡ್ಡುತ್ತಿದೆ ಎಂದು ಟೀಕಿಸಿದ್ದಾರೆ.
ಈ ಬಜೆಟ್ ​ನಲ್ಲಿ ನೀಡಲಾಗಿರುವ ಭರವಸೆಗಳೆಲ್ಲವೂ ಚುನಾವಣಾ ಗಿಮಿಕ್ ಅಷ್ಟೇ. ಈ ವರ್ಷದ ಮೇ ತಿಂಗಳವರೆಗೂ ಮಾತ್ರ ಅಧಿಕಾರದಲ್ಲಿರುವ ಬಿಜೆಪಿಗೆ ತಾನು ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಒಟ್ಟಾರೆ ಇದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಏನು ಸಾಧನೆ ಮಾಡಿದೆ, ಐದ ವರ್ಷಗಳಲ್ಲಿ ಯಾವೆಲ್ಲಾ ಭರವಸೆಗಳನ್ನ ಈಡೇರಿಸಿದೆ ಎಂಬುದನ್ನು ತಿಳಿಸಲಿಲ್ಲ. ದೇಶದ ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೂ 15 ಲಕ್ಷ ರು. ಕೊಡುವ ಸುಳ್ಳು ಭರವಸೆ ಬಗ್ಗೆ ಚಕಾರ ಎತ್ತಲಿಲ್ಲ. ಐದು ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸುವ ದೊಡ್ಡ ಭರವಸೆ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಈ ಹಿಂದೆಯೂ ಮಾಡುತ್ತಾ ಬಂದಂತೆ ಈ ಬಜೆಟ್​ನಲ್ಲೂ ಅದೇ ಸುಳ್ಳು ಭರವಸೆಗಳನ್ನ ಮುಂದುವರಿಸಿಕೊಂಡು ಹೋಗಲಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಇನ್ನು ಬಜೆಟ್ ​ನಲ್ಲಿ ಘೋಷಿಸಿದ ರೈತರಿಗೆ ನೇರ ಹಣ ಬೆಂಬಲ ಯೋಜನೆ ಬಗ್ಗೆ ಅಪಸ್ವರ ಎತ್ತಿದ ಮಲ್ಲಿಕಾರ್ಜುನ ಖರ್ಗೆ, ಇದು ರೈತ ಬಾಂಧವರಿಗೆ ಮಾಡಿದ ಕುಹಕ ಎಂದಿದ್ದಾರೆ. ಎರಡೂವರೆ ಹೆಕ್ಟೇರ್​ಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ 6 ಸಾವಿರ ರುಪಾಯಿ ಕೊಡುತ್ತಿದ್ದಾರೆ. ಮೂರು ತಿಂಗಳಿಗೆ ಮೊದಲ ಕಂತಾಗಿ 2 ಸಾವಿರ ರು. ನೀಡುತ್ತಾರೆ. ಇದು ಚುನಾವಣೆಯಷ್ಟರಲ್ಲಿ ರೈತರಿಗೆ ತೃಪ್ತಿ ಕೊಡಲು ನೀಡುತ್ತಿರುವ ಹಣವಾಗಿದೆ ಎಂದು ಖರ್ಗೆ ಟೀಕಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com