ಕೃಷಿಗೆ ಆದ್ಯತೆ, ಪೆಟ್ರೋಲ್, ಡೀಸೆಲ್, ಮದ್ಯದ ದರ ಏರಿಕೆ, 2.37 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ ಬಿಎಸ್ ವೈ

ಹಿಂದೆಂದೂ ಕಂಡರಿಯದ ಆರ್ಥಿಕ ಸಂಕಷ್ಟದ ನಡುವೆಯೇ ಕೃಷಿ ಕ್ಷೇತ್ರಕ್ಕೆ ಆದ್ಯತೆ, ರೈತರ ಪ್ರಗತಿಗಾಗಿ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್, ಪೊಲೀಸರಿಗೆ ಗೃಹಭಾಗ್ಯ, ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ ಯೋಜನೆ, ಶಿಕ್ಷಣಕ್ಕೆ ಒತ್ತು, ಹೆಚ್ಚಿನ.....
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ಹಿಂದೆಂದೂ ಕಂಡರಿಯದ ಆರ್ಥಿಕ ಸಂಕಷ್ಟದ ನಡುವೆಯೇ ಕೃಷಿ ಕ್ಷೇತ್ರಕ್ಕೆ ಆದ್ಯತೆ, ರೈತರ ಪ್ರಗತಿಗಾಗಿ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್, ಪೊಲೀಸರಿಗೆ ಗೃಹಭಾಗ್ಯ, ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ ಯೋಜನೆ, ಶಿಕ್ಷಣಕ್ಕೆ ಒತ್ತು, ಹೆಚ್ಚಿನ ಸಂಪನ್ಮೂಲ ಕೃಢೀಕರಣಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ, ಮದ್ಯದ ಮೇಲೆ ಅಬಕಾರಿ ತೆರಿಗೆ ಹೆಚ್ಚಳವನ್ನೊಳಗೊಂಡ ೨.೩೭ ಲಕ್ಷ ಕೋಟಿ ರೂಪಾಯಿ ಗಾತ್ರದ ೨೦೨೦-೨೧ನೇ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

ಇಂದು ಬೆಳಗ್ಗೆ ೧೧ ಗಂಟೆಗೆ ವಿಧಾನಸಭೆಯಲ್ಲಿ ೨೦೨೦-೨೧ ನೇ ಸಾಲಿನ ಆಯವ್ಯಯ ಪತ್ರವನ್ನು ಮಂಡಿಸಿದ ಸಿಎಂ ಯಡಿಯೂರಪ್ಪ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಪರೋಕ್ಷವಾಗಿ ಜನ ಸಾಮಾನ್ಯರ ಜೇಬಿಗೆ ಮತ್ತಷ್ಟು ಹೊರೆ ಹೊರಿಸಿದ್ದಾರೆ. ಹೊಸ ಹೊಸ ಯೋಜನೆಗಳನ್ನು ಪ್ರಕಟ ಮಾಡದೇ ಇರುವ ಯೋಜನೆಗಳಿಗೆ ಬೆಲ್ಲ ಸವರಿದ್ದಾರೆ. 

ಕೆಲ ದಿನಗಳ ಹಿಂದೆಯಷ್ಟೇ ಸಾರಿಗೆ ದರ ಹೆಚ್ಚಳ ಮಾಡಿರುವ ನಡುವೆಯೇ ಈಗ ಬಜೆಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ಹೊರಿಸಿ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದಾರೆ.

ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ದರವನ್ನು ೧.೬೦ ರೂಗಳಷ್ಟು ಹೆಚ್ಚಳ ಮಾಡಲಾಗಿದ್ದು, ಪತ್ರಿ ಲೀಟರ್ ಡೀಸೆಲ್ ಮೇಲೆ ೧.೫೯ ರೂಗಳಷ್ಟು ಹೆಚ್ಚಳ ಮಾಡಲಾಗಿದೆ. ಇದೇ ರೀತಿ ಮದ್ಯದ ಮೇಲಿನ ದರಗಳನ್ನು ಶೇಕಡಾ ೬ ರಷ್ಟು ಹೆಚ್ಚಳ ಮಾಡಲಾಗಿದ್ದು, ಹದಿನೆಂಟು ಸ್ಲ್ಯಾಬ್‌ಗಳಲ್ಲಿ ಮದ್ಯದ ದರ ಏರಿಕೆಯಾಗಲಿದ್ದು, ಆ ಮೂಲಕ ಕಳೆದ ವರ್ಷಕ್ಕಿಂತ ೧೭೫೦ ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹಿಸಲು ತೀರ್ಮಾನಿಸಲಾಗಿದೆ.

ಸಾರಿಗೆ ವ್ಯವಸ್ಥೆಯ ಮೇಲೂ ತೆರಿಗೆಯ ಹೊರೆ ಬಿದ್ದಿದ್ದು, ಹನ್ನೆರಡು ಸೀಟುಗಳಿಗಿಂತ ಹೆಚ್ಚು, ಇಪ್ಪತ್ತು ಸೀಟುಗಳಿಗಿಂತ ಕಡಿಮೆ ಸಾಮರ್ಥ್ಯದ ವಾಹನಗಳು ಪ್ರತಿ ಸೀಟಿಗೆ ಮೂರು ತಿಂಗಳಿಗೊಮ್ಮೆ ತಲಾ 900 ನೂರು ರೂಪಾಯಿ ಕೊಡಬೇಕು ಎಂದು ಸ್ಪಷ್ಟ ಪಡಿಸಿದೆ.

ಮೀನುಗಾರಿಕೆಗೆ ಪ್ರೋತ್ಸಾಹ ನೀಡಲು ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ ಜಾರಿಗೆ ತರುವುದಾಗಿ ಪ್ರಕಟಿಸಿದ್ದಾರೆ. ಚರ್ಮ ಕುಶಲಕರ್ಮಿಗಳ ಬದುಕು ಹಸನುಮಾಡಲು ಚರ್ಮ ಶಿಲ್ಪ ಯೋಜನೆಯಡಿ ಫಲಾನುಭವಿಗಳಿಗೆ ಸಹಾಯಧನ ಒದಗಿಸುವ ಯೋಜನೆಯನ್ನು ಪ್ರಸ್ತಾಪ ಮಾಡಿದ್ದಾರೆ.
  
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಹಳ ಕನಸಿನ ಯೋಜನೆಯಾದ ಭಾಗ್ಯಲಕ್ಷಿ ಯೋಜನೆ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ನೀಡುವ ಯೋಜನೆಯನ್ನು ಆರ್ಥಿಕ ಸಂಕಷ್ಟದ ನಡುವೆಯೂ ಮುಂದುವರಿಸಿಕೊಂಡು ಹೋಗುವುದಾಗಿ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.
  
ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಎಲ್ಲಾ ಗ್ರಾಮೀಣ ಭಾಗದ ಜನತೆಗೆ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಎಂಬ ಯೋಜನೆಯ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲು ಸಂಕಲ್ಪ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಏಷ್ಯಾದ ಮೂಲ ಸೌಲಭ್ಯ ಬಂಡವಾಳ ಬ್ಯಾಂಕಿನಿಂದ ಸಾಲ ಪಡೆದು ಜಲಧಾರೆ ಎಂಬ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.
  
ನಿರುದ್ಯೋಗ ಸಮಸ್ಯೆ ನಿವಾರಿಸಲು ಹಾವೇರಿ ಜಿಲ್ಲೆಯ ಶಿಗ್ಗಾವಿ, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೂತನ ಜವಳಿ ಪಾರ್ಕ್ ಸ್ಥಾಪನೆ ಮಾಡಿ ಸ್ಥಳೀಯರಿಗೆ ಉದ್ಯೋಗ ನೀಡಲು ಅವಕಾಶ ಮಾಡಿಕೊಡಲಾಗಿದೆ. ಕೈಗಾರಿಕೋದ್ಯಮಿಗಳು ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಉದ್ದಿಮೆ ಸ್ಥಾಪಿಸಲು ನೆರವಾಗುವಂತೆ ನೂತನ ಕೈಗಾರಿಕಾ ನೀತಿಯನ್ನು ಜಾರಿಗೆ ತರುವುದಾಗಿ ಪ್ರಕಟಿಸಿದ್ದಾರೆ.
  
ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಐತಿಹಾಸಿಕ ಪ್ರಾಚೀನ ದೇವಾಲಯಗಳಿದ್ದು, ಇವುಗಳ ಪುನರುಜ್ಜೀವನಕ್ಕಾಗಿ ಸಂರಕ್ಷಣಾ ಎಂಬ ಹೊಸ ಯೋಜನೆಯ ಪ್ರಕಟ, ರಾಜ್ಯಾದ್ಯಂತ ನಗರಪ್ರದೇಶಗಳಲ್ಲಿ ಸರ್ಕಾರಿ ಜಮೀನುಗಳನ್ನು ಖಾಸಗೀ ವ್ಯಕ್ತಿಗಳು ಮತ್ತು ಬಲಾಢ್ಯರು ಒತ್ತುವರಿ ಮಾಡುವುದನ್ನು ಪತ್ತೆ ಹಚ್ಚಿ ಸರ್ಕಾರಿ ಜಮೀನು ಸಂರಕ್ಷಣೆಗಾಗಿ ಜಮೀನು ಸಂರಕ್ಷಣಾ ಸಮಿತಿ ರಚಿಸಲಾಗುತ್ತಿದೆ.  ಬಡವರು ಮತ್ತು ಮಧ್ಯಮ ವರ್ಗದವರ ಕನಸಿನ ಸೂರು ಕಟ್ಟಿಕೊಳ್ಳಲು ಅನುಕೂಲವಾಗುವಂತೆ 20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಅಪಾರ್ಟ್ ಮೆಂಟ್ ಗಳ ನೋಂದಣಿ ಮುದ್ರಾಂಕ ಶುಲ್ಕವನ್ನು ಶೇ.5 ರಿಂದ 2ಕ್ಕೆ ಇಳಿಸುವ ಪ್ರಸ್ತಾಪ ಮಾಡಿದ್ದಾರೆ.
  
ರಾಜ್ಯದ ಬೊಕ್ಕಸಕ್ಕೆ ವರಮಾನ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ 12 ಸಾವಿರ ಕೋಟಿ ರೂ.ಆದಾಯ ಸಂಗ್ರಹ ಮಾಡಲಾಗುವ ಗುರಿ ಹೊಂದಲಾಗಿದೆ. ಅಬಕಾರಿ ಇಲಾಖೆಯಿಂದ ಪ್ರಸಕ್ತ ವರ್ಷ 22 ಸಾವಿರ ಕೋಟಿ ತೆರಿಗೆ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ. ಸಾರಿಗೆ ಇಲಾಖೆಯಿಂದ 7 ಸಾವಿರ ಕೋಟಿ ರೂ.ಆದಾಯ ಸಂಗ್ರಹ ಮಾಡುವ ಗುರಿ  ಹೊಂದಲಾಗಿದೆ ಎಂದು ಹಣಕಾಸು ಸಚಿವರು ಪ್ರಕಟಿಸಿದ್ದಾರೆ.
  
ಬೆಂಗಳೂರು ನಗರದಲ್ಲಿ 500 ಕೋಟಿ ವೆಚ್ಚದಲ್ಲಿ ಖಾಸಗೀ ಸಹಭಾಗಿತ್ವದಲ್ಲಿ ಜಾಗತಿಕ ಮಟ್ಟದ ಫಿಲ್ಮ್ ಸಿಟಿ ತೆರೆಯುವ ಪ್ರಸ್ತಾಪ ಮಾಡಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಪೌಷ್ಠಿಕ ಆಹಾರ ಪದಾರ್ಥ ಪೂರೈಕೆ ಮಾಡುವ ಉತ್ಪಾದನಾ ಕೇಂದ್ರಗಳನ್ನು ರಚಿಸಿ ಅದಕ್ಕೆ ಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಉತ್ಪಾದನಾ ಕೆಂದ್ರಗಳ ಸಾಮರ್ಥ್ಯವನ್ನು ಹೆಚ್ಚಿಸಲು 15 ಲಕ್ಷ ರೂ.ಗಳಿಂದ 20 ಲಕ್ಷ ರೂಪಾಯಿ ವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿಯೂ ಘೋಷಣೆ ಮಾಡಿದ್ದಾರೆ.
  
ರಾಜ್ಯದಲ್ಲಿ ತೋಟಗಾರಿಕೆ ಕೃಷಿಗೆ ಉತ್ತೇಜನ ನೀಡಲು ಸಣ್ಣ ಮತ್ತು ಅತೀ ಸಣ್ಣ ರೈತರು ತೋಟಗಾರಿಕಾ ಕೃಷಿ ಪದ್ಧತಿಗೆ ವರ್ಗಾವಣೆಗೊಂಡರೆ ಪ್ರತಿ ಹೆಕ್ಟೇರಿಗೆ 5 ಸಾವಿರ ರೂ.ಗಳಂತೆ 10 ಸಾವಿರ ಸಹಾಯ ಧನವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ಶಕ್ತಿ ನೀಡಲು, ಸಾಲದ ಸುಲಿಗೆ ಸಿಕ್ಕಿಕೊಳ್ಳದಂತೆ ಪ್ರತಿ ವರ್ಷ 10 ಸಾವಿರ ಹಣಕಾಸು ನೆರವು ನೀಡುವುದರ ಜೊತೆಗೆ ಎಲ್ಲಾ ರೈತರಿಗೆ ಹಾಗೂ ಮೀನಗಾರರಿಗೆ  ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಲಾಗುವುದು.
  
ಸಾರ್ವಜನಿಕ ಮತ್ತು ಖಾಸಗೀ ಸಹಭಾಗಿತ್ವದಲ್ಲಿ ಬೆಳಗಾವಿ, ಹುಬ್ಬಳ್ಳಿ ಮಂಗಳೂರು, ಶಿವಮೊಗ್ಗ, ಹಾಸನ, ತುಮಕೂರು ಮತ್ತು ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು  ತರಬೇತಿ ಕೇಂದ್ರಗಳನ್ನು 353 ಕೋಟಿ ರೂ. ವೆಚ್ಚದಲ್ಲಿ ಉತ್ಕೃಷ್ಟದ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಬಜೆಟ್ ನಲ್ಲಿ ಪ್ರಕಟಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com