ಗಂಗಾವತಿ: ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಮಾತ್ರ ಕಾಟಾಚಾರದ ಅನುದಾನ; ಬಜೆಟ್ ಬಗ್ಗೆ ಜನರಿಗೆ ನಿರಾಸೆ

ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮೂವರು ಬಿಜೆಪಿ ಶಾಸಕರಿದ್ದರೂ ಯಾರಿಗೂ ಸಚಿವ ಸ್ಥಾನ ನೀಡದೇ ಕಡೆಗಣಿಸಲಾಗಿತ್ತು. ಸಿಎಂ ಬಿಎಸ್. ಯಡಿಯೂರಪ್ಪ, ಮಂಡಿಸಲಿರುವ ಬಜೆಟ್‍ನಲ್ಲಿ ಈ ಭಾರಿಯಾದರೂ ಜಿಲ್ಲೆಗೆ ವಿಶೇಷ ಅನುದಾನ ನೀಡುತ್ತಾರೆ ಎಂದು ಸಾವಿರಾರು ನಿರೀಕ್ಷೆ ಇಟ್ಟುಕೊಂಡ ಜನರಿಗೆ ನಿರಾಸೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗಂಗಾವತಿ: ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮೂವರು ಬಿಜೆಪಿ ಶಾಸಕರಿದ್ದರೂ ಯಾರಿಗೂ ಸಚಿವ ಸ್ಥಾನ ನೀಡದೇ ಕಡೆಗಣಿಸಲಾಗಿತ್ತು. ಸಿಎಂ ಬಿಎಸ್. ಯಡಿಯೂರಪ್ಪ, ಮಂಡಿಸಲಿರುವ ಬಜೆಟ್‍ನಲ್ಲಿ ಈ ಭಾರಿಯಾದರೂ ಜಿಲ್ಲೆಗೆ ವಿಶೇಷ ಅನುದಾನ ನೀಡುತ್ತಾರೆ ಎಂದು ಸಾವಿರಾರು ನಿರೀಕ್ಷೆ ಇಟ್ಟುಕೊಂಡ ಜನರಿಗೆ ನಿರಾಸೆಯಾಗಿದೆ. 

ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯ ನಿರ್ಮಾಣವಾಗಿ 75 ವರ್ಷ ತುಂಬಿದ ಹಿನ್ನೆಲೆ ಏನಾದರೂ ವಿಶೇಷ ಅನುದಾನ, ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಸಂಗ್ರಹಕ್ಕೆ ಪರ್ಯಾಯ ಅಥವಾ ಹೂಳಿಗೆ ಶಾಶ್ವತ ಏನಾದರೂ ಯೋಜನೆ ಘೋಷಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.  ಆದರೆ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಬಿಎಸ್‍ವೈ, ಕೇವಲ ರೈತ ಪರವಾದ ಬಜೆಟ್ ಎಂದು ಕೊಪ್ಪಳವನ್ನು ಕಡೆಗಣಿಸಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅದೂ ಅಲ್ಪಸ್ವಲ್ಪ ಮೂಗಿಗೆ ತುಪ್ಪ ಸವರಿದಂತೆ ಅನುದಾನ ನೀಡಲಾಗಿದೆ. 

ಗಂಗಾವತಿ ತಾಲ್ಲೂಕಿ ಐತಿಹಾಸಿಕ ಹಾಗೂ ಧಾರ್ಮಿಕ ತಾಣವಾದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ರೂ.20 ಕೋಟಿ ಹಾಗೂ ನವಲಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮಾನಂತರ ಜಲಾಶಯದ ಯೋಜನೆಯ ವಿಸ್ತೃತ ವರದಿಗೆ (ಡಿಟೆಲ್ಡ್ ಪ್ರಾಜಕ್ಟ್ ರಿಪೋರ್ಟ್) ರೂ.20 ಕೋಟಿ ಅನುದಾನ ನೀಡಲಾಗಿದೆ. ಅಲ್ಲದೇ ಯಲಬುರ್ಗಾಕ್ಕೆ ಅಗ್ನಿಶಾಮಕ ದಳ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟಿರುವುದು ಬಿಟ್ಟರೆ ಬಜೆಟ್‍ನಲ್ಲಿ ಕೊಪ್ಪಳಕ್ಕೆ ಯಾವುದೇ ಪ್ರತ್ಯೇಕ ಅನುದಾನ ಮಂಜೂರು ಮಾಡದಿರುವುದು ಜಿಲ್ಲೆಯ ಜನತೆಯಲ್ಲಿ ತೀವ್ರ ನಿರಾಸೆಗೆ ಕಾರಣವಾಗಿದೆ. 

ಬಜೆಟ್‍ನಲ್ಲಿ ಕೇವಲ ಸ್ವಪಕ್ಷೀಯರಿಗೆ ಅಂದರೆ ಬಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಕ್ಕೆ ಮಾತ್ರ ಅನುದಾನ ನೀಡಿದ್ದು, ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕೊಪ್ಪಳ ಹಾಗೂ ಕುಷ್ಟಗಿಗೆ ಯಾವುದೇ ಪ್ರತ್ಯೇಕ ಅನುದಾನ ಕಲ್ಪಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.  ಗಂಗಾವತಿಯಲ್ಲಿ ಕೃಷಿ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಕುಷ್ಟಗಿಯ ಕೃಷ್ಣ ಬೀ ಸ್ಕೀಂ, ಕನಕಗಿರಿಯ ರೈಸ್ ಟೆಕ್ನಾಲಜಿ ಪಾರ್ಕ್, ಫುಡ್ ಪಾರ್ಕ್ ಸೇರಿದಂತೆ ಜಿಲ್ಲೆಯ ಸಾಕಷ್ಟು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಯಾವಕ್ಕೂ ಅನುದಾನ ಮೀಸಲಿಟ್ಟಿಲ್ಲ. 

-ವರದಿ: ಶ್ರೀನಿವಾಸ .ಎಂ.ಜೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com