ಮಹಿಳಾ ಗಾರ್ಮೆಂಟ್‌ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಬಸ್‌ ಪಾಸ್‌: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ವನಿತಾ ಸಂಗಾತಿ” ಯೋಜನೆಯಡಿ ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ  ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಮಾಸಿಕ ಬಸ್ ಪಾಸ್ ವಿತರಣೆಗೆ 25 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು:“ವನಿತಾ ಸಂಗಾತಿ” ಯೋಜನೆಯಡಿ ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ  ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಮಾಸಿಕ ಬಸ್ ಪಾಸ್ ವಿತರಣೆಗೆ 25 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿಂದು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಅವರು, “ವನಿತಾ ಸಂಗಾತಿ” ಯೋಜನೆಯಡಿ ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಮಾಸಿಕ ಬಸ್ ಪಾಸ್ ವಿತರಣೆಗೆ 25 ಕೋಟಿ ರೂ. ಅನುದಾನ ನೀಡಲಾಗುವುದು. ನಗರ ಪ್ರದೇಶಗಳಲ್ಲಿ ದುಡಿಯುತ್ತಿರುವ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರ ಆರೋಗ್ಯ ರಕ್ಷಣೆಗೆ 10 “ಮೊಬೈಲ್ ಕ್ಲಿನಿಕ್” ಪ್ರಾರಂಭಿಸಲಾಗುವುದು ಎಂದರು.

ಕಟ್ಟಡ ಕಾರ್ಮಿಕರ ಮಕ್ಕಳ ಪಾಲನೆಗೆ ಕಟ್ಟಡ ನಿರ್ಮಾಣ ಸ್ಥಳದಲ್ಲಿ 10 ಸಂಚಾರಿ ಶಿಶುಪಾಲನಾ ಕೇಂದ್ರಗಳನ್ನು ಒಳಗೊಂಡಂತೆ ಒಟ್ಟು 110 “ಕಿತ್ತೂರು ರಾಣಿ ಚೆನ್ನಮ್ಮ” ಶಿಶು ಪಾಲನಾ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು, ಮುಖ್ಯಮಂತ್ರಿಗಳ ಆರೋಗ್ಯ ಸುರಕ್ಷಾ” ಯೋಜನೆಯಡಿಯಲ್ಲಿ ಒಂದು ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು “ಉಚಿತ ಪ್ರಿಪೇಯ್ಡ್ ಹೆಲ್ತ್ ಕಾರ್ಡ್” ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ ಏಳು ಹೊಸ ಬಾಲಮಂದಿರಗಳ ಸ್ಥಾಪನೆ ಮಾಡಲಾಗುವುದು, ಇದಕ್ಕಾಗಿ 5.67 ಕೋಟಿ ರೂ. ಅನುದಾನ ಒದಗಿಸಲಾಗುವುದು.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯಲ್ಲಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಸುಧಾರಣಾ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಿ, ಅದಕ್ಕಾಗಿ ಐದು ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
 
ನೆರೆಹಾವಳಿಯಿಂದ ಹಾನಿಯಾದ 842 ಅಂಗನವಾಡಿ ಕೇಂದ್ರಗಳ ಪುನರ್ ನಿರ್ಮಾಣಕ್ಕೆ 138 ಕೋಟಿ ರೂ.ನೀಡಲಾಗುವುದು.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಪಾರದರ್ಶಕವಾಗಿ ಮಹಿಳೆಯರಿಗೆ ತಲುಪಿಸಲು ಮಹಿಳಾ ಸುರಕ್ಷತಾ ಪೋರ್ಟಲ್ ಪ್ರಾರಂಭಿಸಲಾಗುವುದು.  ಬಾಲಮಂದಿರದಿಂದ 21 ವರ್ಷ ತುಂಬಿದ ನಂತರ ಬಿಡುಗಡೆ ಹೊಂದುವವರಿಗೆ ಜೀವನೋಪಾಯ ರೂಪಿಸಿಕೊಳ್ಳಲು “ಉಪಕಾರ” ಯೋಜನೆಯಡಿ ಮೂರು ವರ್ಷ ಅವಧಿಗೆ ಮಾಸಿಕ 5000 ರೂ. ಆರ್ಥಿಕ ನೆರವು ನೀಡಿ, ಕೌಶಲ್ಯಾಭಿವೃದ್ಧಿ ತರಬೇತಿಗೆ ಕ್ರಮಕೈಗೊಳ್ಳಲು ಒಂದು ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಮಹಿಳಾ ಪೂರಕ ಪೌಷ್ಟಿಕ ಉತ್ಪಾದನಾ ಕೇಂದ್ರಗಳ ಆಧುನೀಕರಣಕ್ಕೆ ಮಹಿಳಾ ಅಭಿವೃದ್ಧಿ ನಿಗಮದಿಂದ 20 ಲಕ್ಷ ರೂ. ವರೆಗೆ ಬಡ್ಡಿ ರಹಿತ ಕಿರು ಸಾಲ ಸೌಲಭ್ಯ ನೀಡಲಾಗುವುದು. ಇದಕ್ಕಾಗಿ 20 ಕೋಟಿ ರೂ. ಅನುದಾನ ನೀಡಲಾಗುವುದು.  ಸ್ತ್ರೀಶಕ್ತಿ ಸ್ವ-ಸಹಾಯ ಸಂಘದ ಉತ್ಪನ್ನಗಳನ್ನು ಸರ್ಕಾರದ ಇಲಾಖೆಗಳಲ್ಲಿ ಅವಶ್ಯಕತೆಗನುಸಾರ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು.  ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಟ್ರಾನ್ಸ್‌ ಜೆಂಡರ್‌ರವರ ಮೂಲಹಂತದ (Base line) ಸಮೀಕ್ಷೆ ಕೈಗೊಳ್ಳಲು 70 ಲಕ್ಷ ರೂ. ಅನುದಾನ ನೀಡಲಾಗುವುದು.  ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ವಿತರಿಸಲು 60 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ದೃಷ್ಟಿದೋಷವುಳ್ಳ ವ್ಯಕ್ತಿಗಳಿಗಾಗಿ ಬೆಂಗಳೂರಿನಲ್ಲಿ ಹಾಗೂ ಕಲಬುರಗಿಯಲ್ಲಿ 30 ಲಕ್ಷ ರೂ.ಗಳ ವೆಚ್ಚದಲ್ಲಿ ಬ್ರೈಲ್ ಕಂ ಟಾಕಿಂಗ್ ಲೈಬ್ರರಿ ಸ್ಥಾಪಿಸಲಾಗುವುದು. ಮೈಸೂರಿನ ಸರ್ಕಾರಿ ಬ್ರೈಲ್ ಮುದ್ರಣಾಲಯಕ್ಕೆ 80 ಲಕ್ಷ ರೂ.ಗಳ ವೆಚ್ಚದಲ್ಲಿ ಆಧುನಿಕ ಮುದ್ರಣ ಯಂತ್ರ ಖರೀದಿ ಮಾಡಲಾಗುವುದು.  ರಾಜ್ಯದ 500 ಅಂಧ ವಿದ್ಯಾರ್ಥಿಗಳಿಗೆ ತಲಾ 25,000 ರೂ.ಗಳ ಮೊತ್ತದ ಟಾಕಿಂಗ್ ಮೊಬೈಲ್, ಬ್ರೈಲ್ ವಾಚ್ ಹಾಗೂ ವಾಕಿಂಗ್ ಸ್ಟಿಕ್‍ಗಳನ್ನೊಳಗೊಂಡ ಕಿಟ್ ವಿತರಣೆ ಮಾಡಲಾಗುವುದು. ಇದಕ್ಕಾಗಿ 1.25 ಕೋಟಿ ರೂ. ಅನುದಾನ ನೀಡಲಾಗುವುದು.  ಅಂಧ ತಾಯಂದಿರಿಗೆ ನೀಡುವ ಮಾಸಿಕ 2000 ರೂ. ಶಿಶುಪಾಲನಾ ಭತ್ಯೆ ಯೋಜನೆ ಮಗುವಿನ ಮೊದಲ ಎರಡು ವರ್ಷಗಳಿಂದ ಐದು ವರ್ಷದ ವರೆಗೆ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.

“ಆಹಾರ” ತಂತ್ರಾಂಶ ಉನ್ನತೀಕರಿಸಲು ಕ್ರಮ ಕೈಗೊಳ್ಳಲಾಗುವುದು.  ಕಾನೂನು ಮಾಪನ ಶಾಸ್ತ್ರ ಇಲಾಖೆಯ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ಉಸ್ತುವಾರಿ  ಬಿಗಿಗೊಳಿಸಲು “ಇ-ಮಾಪನ” ತಂತ್ರಾಂಶ ಉನ್ನತೀಕರಣ ಮಾಡಲಾಗುವುದು, 2020-21ನೇ ಸಾಲಿನಲ್ಲಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ಒಟ್ಟು ಅನುದಾನ 72,093 ಕೋಟಿ ರೂ,. ನಿಗದಿ ಮಾಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಆಯವ್ಯಯದಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ 37,783 ಕೋಟಿ ರೂ.ಗಳ 953 ಕಾರ್ಯಕ್ರಮಗಳ  ನಿಗದಿ ಮಾಡಲಾಗಿದ್ದು, ಇದು ಒಟ್ಟಾರೆ ಆಯವ್ಯಯ ಗಾತ್ರದ ಶೇ.15.88 ರಷ್ಟಾಗಿದೆ. ರಾಜ್ಯದ ಇತಿಹಾಸದಲ್ಲಿ  ಪ್ರಥಮ ಬಾರಿಗೆ ಮಕ್ಕಳ ಆಯವ್ಯಯ ಮಂಡನೆ ಮಾಡಲಾಗಿದೆ. ರಾಜ್ಯದಲ್ಲಿರುವ 18 ವರ್ಷದ ಕೆಳಗಿರುವ ಎಲ್ಲಾ  ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆ ಅಡಕವಾಗಿದೆ. 2020-21ನೇ ಸಾಲಿನ ಆಯವ್ಯಯದಲ್ಲಿ  36,340 ಕೋಟಿ ರೂ.ಗಳ 279 ಕಾರ್ಯಕ್ರಮಗಳ ಪ್ರಸ್ತಾಪಿಸಲಾಗಿದೆ.. ಇದು ಒಟ್ಟಾರೆ ಆಯವ್ಯಯ ಗಾತ್ರದ  15.28 ರಷ್ಟಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com