ಹಿಂದೆಂದೂ ಇಲ್ಲದಷ್ಟು ಆರ್ಥಿಕ ಸಂಕಷ್ಟದಲ್ಲಿ ರಾಜ್ಯ: ಪರಿಸ್ಥಿತಿ ಸರಿದೂಗಿಸುವ ವಿಶ್ವಾಸ: ಸಿಎಂ ಯಡಿಯೂರಪ್ಪ

ಕೇಂದ್ರದಿಂದ ಸಂಪನ್ಮೂಲ ಕಡಿತ ಸೇರಿದಂತೆ ರಾಜ್ಯ ಹಿಂದೆಂದೂ ಇಲ್ಲದಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ರಾಜ್ಯದಲ್ಲಿ ಸ್ವಂತ ಸಂಪನ್ಮೂಲ ಕ್ರೋಢೀಕರಣಗೊಳಿಸಿ ವಿತ್ತ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಸಿಎಂ ಬಿಎಸ್ ಯಡಿಯೂರಪ್ಪ
ಸಿಎಂ ಬಿಎಸ್ ಯಡಿಯೂರಪ್ಪ

ಬೆಂಗಳೂರು: ಕೇಂದ್ರದಿಂದ ಸಂಪನ್ಮೂಲ ಕಡಿತ ಸೇರಿದಂತೆ ರಾಜ್ಯ ಹಿಂದೆಂದೂ ಇಲ್ಲದಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ರಾಜ್ಯದಲ್ಲಿ ಸ್ವಂತ ಸಂಪನ್ಮೂಲ ಕ್ರೋಢೀಕರಣಗೊಳಿಸಿ ವಿತ್ತ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

2020- 21ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, ಕೇಂದ್ರದಿಂದ ರಾಜ್ಯದಕ್ಕೆ ಬರಬೇಕಿದ್ದ ತೆರಿಗೆ ಆದಾಯದಲ್ಲಿ 8,887 ಕೋಟಿ ರೂ ಕಡಿತವಾಗಿದ್ದು, ಇದರಿಂದ ರಾಜ್ಯದ ರಾಜಸ್ವ ಸಂಪನ್ಮೂಲದಲ್ಲಿ ಇಳಿಕೆಯಾಗಿದೆ. ಕೇಂದ್ರದ ಜಿ.ಎಸ್.ಟಿ. ಪರಿಹಾರ ಉಪಕರ ನಿರೀಕ್ಷಿತ ಸಂಗ್ರಹಣೆಯಿಲ್ಲದ ಕಾರಣ ರಾಜ್ಯಕ್ಕೆ ಅಂದಾಜು 3,000 ಕೋಟಿ ರೂ ಕಡಿತವಾಗಿದೆ. ಇದೇ ಕಾರಣದಿಂದಾಗಿ 2019 - 20 ನೇ ಸಾಲಿನ ಆರ್ಥಿಕ ಗುರಿ ತಲುಪಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಕಷ್ಟ ಪರಿಸ್ಥಿತಿಯನ್ನು ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ. 

15ನೇ ಹಣಕಾಸು ಆಯೋಗ ಸಲ್ಲಿಸಿದ್ದ ಮಧ್ಯಂತರ ವರದಿ ಪ್ರಕಾರ 2020 -21 ಕ್ಕೆ ರಾಜ್ಯ ಸರ್ಕಾರಗಳಿಗೆ ಕೇಂದ್ರದ ತೆರಿಗೆ ಪಾಲು ನಿರ್ಧರಿಸಲಾಗಿದೆ.14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 4.71 ರಷ್ಟಿದ್ದ ತೆರಿಗೆ ಪಾಲು 15ನೇ ಹಣಕಾಸು ಆಯೋಗದಲ್ಲಿ ಶೇ 3.64 ಕ್ಕೆ ಇಳಿಸಲಾಗಿದೆ. ಇದರ ಪರಿಣಾಮ 11,215 ಕೋಟಿ ರೂ ತೆರಿಗೆ ತಗ್ಗಿದೆ. ಆದಾಯ ದೂರ ಎಂಬ ಮಾನದಂಡದಿಂದಾಗಿ ರಾಜ್ಯಕ್ಕೆ ಕಡಿಮೆ ಅಂಕ ನೀಡಲಾಗಿದ್ದು, ಇದರಿಂದಾಗಿಯೂ ರಾಜ್ಯಕ್ಕೆ ಆದಾಯದಲ್ಲಿ ಖೋತಾ ಕಂಡು ಬಂದಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

ಇದಲ್ಲದೇ ನೌಕರರರ ವೇತನ, ಪಿಂಚಣಿ, ಸರ್ಕಾರಿ ಸಾಲದ ಮೇಲಿನ ಬಡ್ಡಿ ಮೊತ್ತ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಅಂದಾಜು 10 ಸಾವಿರ ಕೋಟಿ ರೂ ನಷ್ಟು ಏರಿಕೆಯಾಗಿದ್ದು, ಇದಕ್ಕೆ ತಕ್ಕಂತೆ ಸಂಪನ್ಮೂಲದಲ್ಲಿ ಹೆಚ್ಚಳವಾಗಿಲ್ಲ. ಸಂಪನ್ಮೂಲ ಸಂಗ್ರಹದಲ್ಲಿ ತೀವ್ರ ಸಂಕಷ್ಟ ಎದುರಾದ ಕಾರಣದಿಂದಾಗಿ ಹಿಂದೆಂದೂ ಇಲ್ಲದಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಬಜೆಟ್ ಪುಸ್ತಕದಲ್ಲ ನಮೂದಿಸಿದ್ದಾರೆ. ಆದರೆ ಪ್ರಸ್ತಕ ವರ್ಷ ಸ್ವಂತ ತೆರಿಗೆ ಸಂಗ್ರಹಣೆ ಉತ್ತಮವಾಗಿದ್ದು, ಪ್ರಮುಖವಾಗಿ ಜಿ.ಎಸ್.ಟಿ. ಸಂಗ್ರಹದಲ್ಲಿ ಈ ಬಾರಿ ಶೇ 14 ರಷ್ಟು ಬೆಳವಣಿಗೆಯಾಗಿದೆ. ಒಟ್ಟಾರೆ ಸ್ವಂತ ತೆರಿಗೆ ಸಂಗ್ರಹದ ಗುರಿ ತಲುಪುವ ನಿರೀಕ್ಷೆಯಿದೆ. ಇದರ ಆಧಾರದ ಮೇಲೆ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗುವುದಾಗಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ರಾಜ್ಯದಲ್ಲಿ 2002 ರಲ್ಲಿ ವಿತ್ತೀಯ ಹೊಣೆಗಾರಿಕೆ ಅಧಿನಿಯಮ ಜಾರಿಗೆ ತಂದ ನಂತರ ಎಲ್ಲಾ ಸರ್ಕಾರಗಳು ವಿತ್ತೀಯ ಶಿಸ್ತು ಪಾಲನೆ ಮಾಡಿವೆ. ಇದೇ ರೀತಿ ರಾಜ್ಯದ ಆರ್ಥಿಕ ಶಿಸ್ತು ಪಾಲನೆ ಮಾಡಲು ತಾವೂ ಸಹ ಪ್ರಯತ್ನ ನಡೆಸಲಿದ್ದು, ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಮಿತಿಯಲ್ಲೇ ಬಜೆಟ್ ಮಂಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ. 

ಬಜೆಟ್ ನ ಒಟ್ಟು ಗಾತ್ರ 2,37,893 ಕೋಟಿ ರೂ ಆಗಿದ್ದು, 2020–21ನೇ ಸಾಲಿನಲ್ಲಿ ಒಟ್ಟು  2,33,134 ಕೋಟಿ ರೂ ಜಮೆಗಳನ್ನು ನಿರೀಕ್ಷಿಸಲಾಗಿದೆ. ಅಂತೆಯೇ 2,37,893 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದ್ದು, ಆದಾಯಕ್ಕೂ ವೆಚ್ಚಕ್ಕೂ 4759 ಅಂತರವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com