ದಲಿತರು, ಬಡವರ ವಿರೋಧಿ ಬಜೆಟ್, ಎಚ್.ಕೆ. ಕುಮಾರಸ್ವಾಮಿ; 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಂಡಿಸಿರುವುದು ದಲಿತ ವಿರೋಧಿ ಮತ್ತು ಬಡವರ ವಿರೋಧಿ ಬಜೆಟ್ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಶಿವಕುಮಾರ್-ಕುಮಾರಸ್ವಾಮಿ
ಶಿವಕುಮಾರ್-ಕುಮಾರಸ್ವಾಮಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಂಡಿಸಿರುವುದು ದಲಿತ ವಿರೋಧಿ ಮತ್ತು ಬಡವರ ವಿರೋಧಿ ಬಜೆಟ್ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಗಳ ಸುಣ್ಣ ಬಣ್ಣಕ್ಕೂ ಲಾಯಕ್ಕಿಲ್ಲದ ಬಜೆಟ್ ಎಂದು ವ್ಯಂಗ್ಯವಾಡಿದ್ದಾರೆ. ಇದು ಸಂಪೂರ್ಣ ನಿರಾಶದಾಯಕ ಬಜೆಟ್ ಆಗಿದೆ. ಆಯವ್ಯಯದಲ್ಲಿ ನಿರ್ದಿಷ್ಟ ಹಣ ಮೀಸಲು ಬಗ್ಗೆ ಪ್ರಸ್ತಾಪ ಇಲ್ಲ. ತೈಲ ಬೇಲೆ ಏರಿಕೆ ಮಾಡಿ ಎಲ್ಲಾ ಬೆಲೆಗಳನು ಏರಿಸುವ ಕೆಲಸ ಮಾಡಿದ್ದಾರೆ ಎಂದರು.

ಬೆಂಗಳೂರು  ನಗರಕ್ಕೆ ಕೇವಲ 8000 ಕೋಟಿ ನೀಡಿದ್ದಾರೆ, ಮಾನವ- ಪ್ರಾಣಿ ಸಂಘರ್ಷ ಹೆಚ್ಚುತ್ತಿದೆ, ಅದರ  ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.  20000 ಕೋಟಿಯ ಎತ್ತಿನಹೊಳೆಗೆ ಕೇವಲ 1500  ಕೋಟಿ ಇಟ್ಟರೆ ಅದನ್ನು ಪೂರ್ಣಗೊಳಿಸಲಾಗುವುದಿಲ್ಲ ಎಂದು ಟೀಕಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಯೋಜನೆಗಳನ್ನೇ ಮುಂದುವರೆಸಿದ್ದಾರೆ. ಅಲ್ಲದೆ ಈ ಬಾರಿ ಮಂಡಿಸಲಾದ ಘೋಷಣೆಗಳಲ್ಲಿ ಸ್ಪಷ್ಟತೆ ಇಲ್ಲ. ಬಿಜೆಪಿಯವರಿಂದ ಹೊಸ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂಬುದನ್ನು ಬಜೆಟ್ ನಿರೂಪಿಸಿದೆ ಎಂದರು. 

ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ತೆರಿಗೆ ಪಾಲು ಸಿಗುತ್ತದೆಯೋ ಇಲ್ಲವೋ ಎಂಬ ಅನುಮಾನ ರಾಜ್ಯ ಸರ್ಕಾರಕ್ಕಿದೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂಬುದನ್ನು ಯಡಿಯೂರಪ್ಪ ಅವರೇ ಹೇಳಿಕೊಂಡಿದ್ದಾರೆ. ಹೀಗಿರುವಾಗ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡ ಮುರಗೇಶ್ ನಿರಾಣಿ  ತಮ್ಮ ಜೊತೆ ಯಾವುದೇ ‌ರೀತಿಯ ಚರ್ಚೆ ಮಾಡಿಲ್ಲ. ಅವರು ನಿನ್ನೆ ಆದಿ ಚುಂಚನಗಿರಿ ಪೂಜೆಗೆ ಬಂದಿದ್ದರು. ಆಗ ತಾವು ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಅಲ್ಲದೇ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ತಾವು ಹೋಗುವುದಿಲ್ಲ. ಅದರ ಅವಶ್ಯಕತೆಯೂ ತಮಗಿಲ್ಲ ಎಂದರು. 

ಬಹಳ ಶ್ರಮಪಟ್ಟು ಯಡಿಯೂರಪ್ಪ ‌ಮುಖ್ಯಮಂತ್ರಿ ಆಗಿದ್ದಾರೆ. ನನಗೀಗ 60 ವರ್ಷವಾಗಿದ್ದು, ಹಿರಿಯ ನಾಗರಿಕನಾಗಿದ್ದೇನೆ. ನಾನು  ಇನ್ನು ಸ್ವಲ್ಪ ಆರೋಗ್ಯ ಇಟ್ಟುಕೊಂಡಿದ್ದೇನೆ. ಜನ ಅಧಿಕಾರ ಕೊಡುತ್ತಾರೆ ಎಂಬ ನಂಬಿಕೆ ಇದೆ. ಆದರೆ ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಗುಂಪುಗಳ ಜೊತೆಯಲ್ಲಿ ನಾನು ಭಾಗಿಯಾಗಿಲ್ಲ ಎಂದರು.

ಹುರುಪಿನಲ್ಲಿ ಸರ್ಕಾರ ಮಾಡಿದಂತೆ ಬಜೆಟ್ ಮಂಡನೆ ಮಾಡಿಲ್ಲ: ಡಿಕೆ ಶಿವಕುಮಾರ್ 

ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಯಡಿಯೂರಪ್ಪ ಮಂಡಿಸಿರುವ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯಡಿಯೂರಪ್ಪ ಹುರುಪಿನಲ್ಲಿ ಸರ್ಕಾರ ಮಾಡಿದಂತೆ ಬಜೆಟ್ ಮಂಡನೆ ಮಾಡಲಿಲ್ಲ. 

ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ, ಕೇಂದ್ರದಿಂದ ಅನುದಾನ ಸಿಗುತ್ತಿಲ್ಲ ಎಂಬುದನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಬಜೆಟ್ ನಲ್ಲಿ ನೀಡಲಾಗಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಯಡಿಯೂರಪ್ಪ ಮಂಡಿಸಿರುವ 7 ಬಜೆಟ್ ಗಳ ಪೈಕಿ ಈ ಬಜೆಟ್ ಕಳೆಗುಂದಿದ ಬಜೆಟ್ ಆಗಿದೆ, ಕಾಂಗ್ರೆಸ್ ಸರ್ಕಾರಗಳ ಯೋಜನೆಗಳಿಗೆ ಹೊಸ ಹೆಸರುಗಳನ್ನಿಟ್ಟಿದ್ದಾರೆಯೇ ಹೊರತು ಬೇರೇನೂ ಇಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com