'ಬಹಿ ಖಾತಾ' ಎಂದರೇನು, ಅದನ್ನು ಹೇಗೆ ಉಚ್ಛರಿಸಬೇಕೆಂದು ಇನ್ನೂ ನನಗೆ ಗೊತ್ತಿಲ್ಲ': ನಿರ್ಮಲಾ ಸೀತಾರಾಮನ್ 

ದೇಶದ ಮೊದಲ ಪೂರ್ಣಾವಧಿ ವಿತ್ತ ಸಚಿವೆ ಎಂಬ ಹಿರಿಮೆ ಗಳಿಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಅವರು ಹಲವಾರು ವರ್ಷಗಳ ಸಂಪ್ರದಾಯವನ್ನು ಕಳೆದ ವರ್ಷ ಮುರಿದಿದ್ದರು. ಅದು ಬಜೆಟ್ ಪ್ರತಿಗಳನ್ನು ಹೊತ್ತು ತರುವ ಬ್ರೀಫ್ ಕೇಸ್.
ಬಹಿ ಖಾತಾದೊಂದಿಗೆ ಸಚಿವೆ ನಿರ್ಮಲಾ ಸೀತಾರಾಮನ್
ಬಹಿ ಖಾತಾದೊಂದಿಗೆ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ದೇಶದ ಮೊದಲ ಪೂರ್ಣಾವಧಿ ವಿತ್ತ ಸಚಿವೆ ಎಂಬ ಹಿರಿಮೆ ಗಳಿಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಅವರು ಹಲವಾರು ವರ್ಷಗಳ ಸಂಪ್ರದಾಯವನ್ನು ಕಳೆದ ವರ್ಷ ಮುರಿದಿದ್ದರು. ಅದು ಬಜೆಟ್ ಪ್ರತಿಗಳನ್ನು ಹೊತ್ತು ತರುವ ಬ್ರೀಫ್ ಕೇಸ್. ಅದು ಈ ವರ್ಷವೂ ಮುಂದುವರಿದಿದೆ. 


ಇಷ್ಟು ವರ್ಷಗಳ ಕಾಲ ಬಜೆಟ್ ಪ್ರತಿಗಳನ್ನು ವಿತ್ತ ಸಚಿವರು ಸೂಟ್ ಕೇಸ್ ಅಥವಾ ಬ್ರೀಫ್ ಕೇಸ್ ನಲ್ಲಿ ಇಟ್ಟು ಸಂಸತ್ತಿಗೆ ಆಗಮಿಸುತ್ತಿದ್ದರು. ಸಂಸತ್ತಿಗೆ ಪ್ರವೇಶಿಸುವ ಮುನ್ನ ಆವರಣದಲ್ಲಿ ನಿಂತ ಸುದ್ದಿಗಾರರು, ಫೋಟೋಗ್ರಾಫರ್ ಗಳತ್ತ ಬ್ರೀಫ್ ಕೇಸ್ ತೋರಿಸಿ ನಗೆ ಬೀರುತ್ತಾರೆ. ಕಳೆದ ವರ್ಷ ಬಜೆಟ್ ಮಂಡನೆ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಶಕಗಳ ಕಾಲದ ಸಂಪ್ರದಾಯಕ್ಕೆ ಕೊನೆ ಹಾಡಿ ಬಜೆಟ್ ಪ್ರತಿಗಳನ್ನು ಕೆಂಪು ಬಟ್ಟೆ ಸುತ್ತಿದ ಫೋಲ್ಡರ್ ನೊಂದಿಗೆ ಲೋಕಸಭೆಗೆ ಬಂದರು.


ಅದು ಆಗ ಭಾರೀ ಸುದ್ದಿಯಾಯಿತು. ಏನಿದು, ಚರ್ಮದ ಸೂಟ್ ಕೇಸ್ ಎಲ್ಲಿ ಎಂದು ಎಲ್ಲರಿಗೂ ಅಚ್ಚರಿಯಾಯಿತು. ಆಗ ಅದಕ್ಕೆ ಮುಖ್ಯ ಆರ್ಥಿಕ ಸಲಹೆಗಾರ ಕೆ ಸುಬ್ರಹ್ಮಣ್ಯನ್ ಮಾಧ್ಯಮಗಳಿಗೆ ಉತ್ತರ ಕೊಟ್ಟು, ಬ್ರೀಫ್ ಕೇಸ್ ಬ್ರಿಟಿಷ್ ಗುಲಾಮ ಸಂಸ್ಕೃತಿ. ಗುಲಾಮದಿಂದ ಹೊರಬಂದು ನಮ್ಮ ಭಾರತೀಯ ಸಂಸ್ಕೃತಿಗೆ ಆದ್ಯತೆ ನೀಡಲು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬದಲಾವಣೆ ಮಾಡಲು ಹೇಳಿದರು ಎಂದು.


ಈ ಬಾರಿಯ ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ಕಳೆದ ಸೋಮವಾರ ಖಾಸಗಿ ಸುದ್ದಿಸಂಸ್ಥೆಯೊಂದರ ದುಂಡು ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.


ಕೆಂಪು ಬಟ್ಟೆ ಸುತ್ತಿದ್ದಕ್ಕೆ ಬಹಿ-ಖಾತಾ ಎಂದು ಕರೆಯುತ್ತಾರೆ. ಆದರೆ ಬಹಿ-ಖಾತಾ ಎಂದರೇನು, ಅದನ್ನು ಹೇಗೆ ಉಚ್ಛರಿಸುವುದು ಎಂದು ಖುದ್ದು ಸಚಿವೆಗೇ ಗೊತ್ತಿಲ್ಲವಂತೆ!


ಸೂಟ್ ಕೇಸ್ ನ್ನು ನೋಡಿದ ಕೂಡಲೇ ನನ್ನ ಮನಸ್ಸಿನಲ್ಲಿ ನಕಾರಾತ್ಮಕ ಅರ್ಥ ಮೂಡುತ್ತಿತ್ತು. ನಮ್ಮ ಸರ್ಕಾರ ಯಾವತ್ತೂ ಬ್ರೀಫ್ ಕೇಸ್ ವ್ಯವಹಾರವನ್ನು ಒಪ್ಪುವುದಿಲ್ಲ ಮತ್ತು ಮನ್ನಿಸುವುದೂ ಇಲ್ಲ. ಎನ್ ಡಿಎಯದ್ದು ಬ್ರೀಫ್ ಕೇಸ್ ಸಂಸ್ಕೃತಿಯಲ್ಲ. ಬ್ರಿಟಿಷರ ಈ ಗುಲಾಮ ಸಂಸ್ಕೃತಿಯಿಂದ  ಹೊರಬರಲು ತೀರ್ಮಾನಿಸಿದೆ. ಬಜೆಟ್ ಪ್ರತಿ ಎಂಬುದು ತುಂಬಾ ಪವಿತ್ರವಾದ ಸರ್ಕಾರದ ದಾಖಲೆಗಳು. ನಾವು ಹೇಗೆ ಪುಸ್ತಕವನ್ನು ದೇವರ ಮುಂದಿಟ್ಟು ಪ್ರಾರ್ಥನೆ ಮಾಡಿ ಅಧ್ಯಯನ ಆರಂಭಿಸುತ್ತೇವೆಯೋ ಅದೇ ರೀತಿ ಬಜೆಟ್ ಪ್ರತಿ ಕೂಡ. ಇದು ಸರ್ಕಾರದ ಆಯವ್ಯಯದ ಪುಸ್ತಕ, ಹಾಗಾಗಿ ನನಗೆ ಇದಕ್ಕೂ ತುಂಬಾ ಗೌರವ ಕೊಡಬೇಕೆನ್ನಿಸಿ ಬಹಿ ಖಾತಾ ಸಂಸ್ಕೃತಿ ಜಾರಿಗೆ ತಂದೆನು ಎಂದು ಹೇಳಿದರು.

ಬಜೆಟ್ ಪ್ರತಿಯನ್ನು  ಸೂಟ್ ಕೇಸ್ ನಲ್ಲಿ  ತರುವ ಮೊದಲ ಶಿಷ್ಟಾಚಾರ, ಪರಂಪರೆಯನ್ನು ಮೊದಲ  ಹಣಕಾಸು ಸಚಿವ ಷಣ್ಮುಗಂ ಚೆಟ್ಟಿ ಆರಂಭಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com