
ಸಿಎಂ ಯಡಿಯೂರಪ್ಪ
ಬೆಂಗಳೂರು: ವಿಪಕ್ಷಗಳ ತೀವ್ರ ವಿರೋಧ ಹಾಗೂ ಗದ್ದಲದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ಮಂಡನೆ ಭಾಷಣ ಆರಂಭಮಾಡಿದ್ದಾರೆ.
2021-2022ನೇ ಸಾಲಿನ ಆಯವ್ಯಯ ಮಂಡನೆ ಮಾಡುತ್ತಿರುವ ಯಡಿಯೂರಪ್ಪ ಅವರು, ಸರ್ಕಾರದ ಸಾಧನೆಗಳನ್ನು ವಿವರಿಸುತ್ತಿದ್ದಾರೆ. ಇದೇ ವೇಳೆ ಕೊರೊನಾ ಸಂದರ್ಭದಲ್ಲಿ ಶ್ರಮಿಸಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ
ಕೊರೊನಾ ಸಂಕಷ್ಟದ ನಡುವೆಯೂ ಸರ್ಕಾರ ಕೆಲಸ ಮಾಡಿದೆ. ಆರೋಗ್ಯ, ಮೂಲಸೌಕರ್ಯಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿದೆ. ವೈದ್ಯರು, ಪೊಲೀಸರು, ಕಂದಾಯ, ನಗರಾಭಿವೃದ್ಧಿ ಸಿಬ್ಬಂದಿ ಕೊರೊನಾ ಸಂಕಷ್ಟದಲ್ಲಿ ಹಗಲಿರಳು ಕೆಲಸ ಮಾಡಿದ್ದಾರೆ. ಕೊರೊನಾ ಸಂಕಷ್ಟವನ್ನು ನಾವು ಒಂದು ಕ್ಷಣವೂ ಮರೆಯುವಂತಿಲ್ಲ. ಕೊರೊನಾ ಸಂಕಷ್ಟ ಒಂದು ದುಸ್ವಪ್ನ ಎಂದು ಕೊರೋನಾ ಸಂದರ್ಭವನ್ನು ಸ್ಮರಿಸಿಕೊಂಡಿದ್ದಾರೆ.
ಕೋವಿಡ್ ಸಂಕಷ್ಟದ ನಡುವೆಯೂ ಸರ್ಕಾರ ರಾಜ್ಯದ ಜನರ ಹಿತಾಸಕ್ತಿ ಕಾಪಾಡುವಲ್ಲಿ ಸಫಲವಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ 2 ಶಿಶುಪಾಲನಾ ಕೇಂದ್ರಗಳ ಸ್ಥಾಪನೆ ಮಾಡಲಾಗಿದ್ದು, ಕೋವಿಡ್ ಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಲಸಿಕೆ ಹಂಚಿಕೆಯಲ್ಲಿ ರಾಷ್ಟ್ರದ ಗಮನ ಸೆಳೆದಿದ್ದೇವೆಂದು.
ಕೊರೊನಾ ಲಾಕ್ ಡೌನ್ ಕಾರಣಕ್ಕೆ ಅರ್ಥಿಕ ವರ್ಷದ ಮೊದಲ 3 ತಿಂಗಳು ರಾಜಸ್ವ ಸಂಗ್ರಹ ಇಳಿಕೆ ಆಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಈಗ ರಾಜ್ಯದಲ್ಲಿ ಆಹಾರ ಧಾನ್ಯ ಉತ್ಪಾದನೆಯಲ್ಲಿ ನೂತನ ದಾಖಲೆ ನಿರ್ಮಿಸಿರುವುದು ಸಂತಸದ ಸಂಗತಿ ಎಂದು ಹೇಳಿದ್ದಾರೆ.
ಕೊರೊನಾ ಸಂಕಷ್ಟದಿಂದಾಗಿ ಸಾಕಷ್ಟು ನಷ್ಟವಾಗಿದೆ. ಕೈಗಾರಿಕಾ ವಲಯ ಶೇ 5.1 ಹಾಗೂ ಸೇವಾ ವಲಯ ಶೇ 3.1 ಇಳಿಕೆ ಆಗಿದೆ. ಆದರೆ, ಕೃಷಿ ಕ್ಷೇತ್ರದಲ್ಲಿ ಶೇ 6.4ರಷ್ಟು ಬೆಳವಣಿಗೆ ಕಂಡಿದೆ. ಹಾಗೆಯೇ ಮಾಹಿತಿ ತಂತ್ರಜ್ಞಾನಕ್ಕೆ ಶೇ 40ರಷ್ಟು ಕರ್ನಾಟಕದ ಕೊಡುಗೆ ಇದ್ದು, ಜಿಡಿಪಿಗೆ ಶೇ 8ರಷ್ಟು ಕರ್ನಾಟಕದ ಕೊಡುಗೆ ಇದೆ ಎಂದು ತಿಳಿಸಿದ್ದಾರೆ.