
ಆದಿ ಕವಿ ಪಂಪನಿಂದ ಮುದ್ದಣನವರೆಗೂ ಎಲ್ಲಾ ಕೃತಿಗಳ ಡಿಜಿಟಲೀಕರಣ: ಕಲೆ ಸಂಸ್ಕೃತಿಗೆ ರಾಜ್ಯ ಬಜೆಟ್ ನಲ್ಲಿ ಭರಪೂರ ಅನುದಾನ!
ಬೆಂಗಳೂರು: ಸಿಎಂ ಯಡಿಯೂರಪ್ಪ ಮಾ.08 ರಂದು 8 ನೇ ಬಾರಿಗೆ ರಾಜ್ಯದ ಆಯ-ವ್ಯಯ ಮಂಡಿಸಿದ್ದಾರೆ.
ತಮ್ಮ ಸುದೀರ್ಘ ಬಜೆಟ್ ಭಾಷಣದಲ್ಲಿ ಮಠ, ಧಾರ್ಮಿಕ ಕ್ಷೇತ್ರಗಳಿಗೆ ಎಂದಿನಂತೆ ಭರಪೂರ ಅನುದಾನವನ್ನು ಘೋಷಣೆ ಮಾಡಿದ್ದು, ಕೊರೋನಾ ತಂದೊಡ್ಡಿದ ಪರಿಸ್ಥಿತಿಗಳಿಂದ ರಾಜ್ಯದ ಆದಾಯ ಸಂಗ್ರಹ ಕಡಿಮೆಯಾಗಿರುವುದರ ನಡುವೆಯೂ ಸಿಎಂ ಸಂಸ್ಕೃತಿ, ಪರಂಪರೆ ರಕ್ಷಣೆಗಾಗಿ ಭರ್ಜರಿ ಅನುದಾನ ಘೋಷಣೆ ಮಾಡಿರುವುದು ಬಜೆಟ್ ನ ವಿಶೇಷತೆಯಾಗಿದೆ.
ಸಂಸ್ಕೃತಿ, ಪರಂಪರೆ ರಕ್ಷಣೆಗಾಗಿ ಬಜೆಟ್ ನ ವಿವರಣೆಗಳು ಹೀಗಿವೆ
- ಸಂಸ್ಕೃತಿ, ಪರಂಪರೆ ರಕ್ಷಣೆಗೆ 2021 ನೇ ಸಾಲಿನ ಬಜೆಟ್ ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಆದಿ ಕವಿ ಪಂಪನಿಂದ ಮುದ್ದಣನ ಕಾಲಘಟ್ಟದವರೆಗಿನ ಎಲ್ಲಾ ಕೃತಿಗಳ ಡಿಜಿಟಲೀಕರಣ ಮಾಡಿ ಆನ್ಲೈನ್ ನಲ್ಲಿ ಲಭ್ಯವಿರುವಂತೆ ಮಾಡಲು ಕ್ರಮ
- ಕಿತ್ತೂರಿನ ಕೋಟೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಪ್ರವಾಸಿ ಸೌಲಭ್ಯಗಳಿಗಾಗಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂಪಾಯಿ ಅನುದಾನ
- ಬಸವಕಲ್ಯಾಣದಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಅನುಭವ ಮಂಟಪ ನಿರ್ಮಿಸುವ ಯೋಜನೆಗೆ 200 ಕೋಟಿ ರೂಪಾಯಿ ಬಿಡುಗಡೆ
- ಜಗಜ್ಯೋತಿ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಗ್ರಾಮದ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಅನುದಾನ
- ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದಲ್ಲಿ ಸ್ಥಾಪಿಸಲಾಗುತ್ತಿರುವ ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರಕ್ಕೆ ಸರ್ಕಾರದಿಂದ 10 ಕೋಟಿ ರೂಪಾಯಿ ಸಹಾಯಾನುದಾನ
- ಅಯೋಧ್ಯೆಯಲ್ಲಿ ಸುಸಜ್ಜಿತ ಯಾತ್ರಿ ನಿವಾಸ ನಿರ್ಮಾಣಕ್ಕೆ ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂಪಾಯಿ ಅನುದಾನ
- ರಾಜ್ಯಾದ್ಯಂತ ರಂಗಾಯಣಗಳ ಮೂಲಕ ಡಾ. ಎಸ್ಎಲ್ ಭೈರಪ್ಪನವರ ಪರ್ವ ನಾಟಕ ಪ್ರದರ್ಶನ
- ಭಾರತ ರತ್ನ ಪಂಡಿಟ್ ಭೀಮಸೇನ್ ಜೋಶಿಯವರ 100 ನೇ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸಂಗೀತೋತ್ಸವ ಹಾಗೂ ವಿಚಾರ ಸಂಕಿರಣ ಆಯೋಜನೆ