
ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ಬಜೆಟ್ ಮಂಡನೆ ವೇಳೆ ಸಭಾತ್ಯಾಗ ಮಾಡಲು ನಿರ್ಧರಿಸಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಬಜೆಟ್'ಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಬಜೆಟ್ ಮಂಡನೆಗೆ ರಾಜ್ಯ ಸರ್ಕಾರವು ನೈತಿಕತೆಯನ್ನು ಕಳೆದುಕೊಂಡಿದೆ. ಎರಡೂವರೆ ಲಕ್ಷ ಕೋಟಿ ಬಜೆಟ್ ಇದಾಗಿದ್ದು, ಅನೈತಿಕವಾಗಿ ಖರ್ಚು ಮಾಡುವುದು ತಪ್ಪು. ಅದ್ದರಿಂದ ಬಜೆಟ್ ಮಂಡನೆ ವೇಳೆ ಸದನದಲ್ಲಿ ಕಾಂಗ್ರೆಸ್ ಇರುವುದಿಲ್ಲ. ಬಜೆಟ್ ವಿರೋಧಿಸಿ ಧರಣಿ ನಡೆಸಲಿದ್ದೇವೆಂದು ಹೇಳಿದ್ದಾರೆ.
ಕೆಐಎಡಿಬಿ ಹಗರಣದಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಜನವರಿ 17ರಂದು ಬಿಎಸ್ವೈ ಹಾಗೂ ಮುರುಗೇಶ್ ನಿರಾಣಿ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಿಕೊಂಡಿದ್ದರು. ನಾನು ಇದನ್ನ ಸದನಲ್ಲೂ ಪ್ರಸ್ತಾಪ ಮಾಡಿದ್ದೆ. ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕೆಂದು ಯಡಿಯೂರಪ್ಪ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಮುಖ್ಯಮಂತ್ರಿಗಳನ್ನು ಬಂಧಿಸಲು ಸಾಧ್ಯವೇ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವ್ಯಂಗ್ಯವಾಡಿದ್ದರು. ಹೀಗಾಗಿ ನಾನು ಸದನದಲ್ಲಿ ಬಿಎಸ್ವೈ ಜಾಮೀನು ಮೇಲೆ ಇದ್ದಾರೆ ಎಂದು ಹೇಳಿದ್ದೆ. ಆದರೆ, ಅದಕ್ಕೆ ಯಡಿಯೂರಪ್ಪ ಲಘುವಾಗಿ ಪ್ರತಿಕ್ರಿಯಿಸಿದ್ದರು ಎಂದು ಟೀಕಿಸಿದ್ದಾರೆ.
ಯಡಿಯೂರಪ್ಪ, ನಿರಾಣಿ ಜಾಮೀನಿನ ಮೇಲೆ ಇದ್ದಾರೆ. ಇದರ ಜತೆಗೆ ಆರು ಸಚಿವರು ಸಿವಿಲ್ ಕೋರ್ಟ್ ಮೊರೆ ಹೋಗಿದ್ದಾರೆ. ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಸೋಮಶೇಖರ್, ಬಿ.ಸಿ.ಪಾಟೀಲ್, ಭೈರತಿ ಬಸವರಾಜ್, ಸುಧಾಕರ್ ಈ ಆರು ಸಚಿವರು ಕೋರ್ಟ್ಗೆ ಹೋಗಿದ್ದಾರೆ.
ರಮೇಶ್ ಜಾರಕಿಹೊಳಿ ಸಿ.ಡಿ. ಸ್ಫೋಟದ ಬೆಳವಣಿಗೆ ನಂತರ ಕೋರ್ಟ್ ಮೊರೆ ಹೋಗಿದ್ದಾರೆ. ಸುದ್ದಿ ಪ್ರಸಾರಕ್ಕೆ ತಾತ್ಕಾಲಿಕ ನಿರ್ಬಂಧಕ ಆಜ್ಞೆ ತಂದಿದ್ದಾರೆ. ಇದರಿಂದ ಮಾಧ್ಯಮಗಳ ಸ್ವಾತಂತ್ರ್ಯದ ಹರಣ ಆದಂತಾಗಿದೆ. ಈ ಸರ್ಕಾರ ಅನೈತಿಕತೆಯ ಮೂಟೆ ಹೊತ್ತುಕೊಂಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನಾನು ತಪ್ಪು ಮಾಡಿಲ್ಲ, ಹೀಗಾಗಿ ಕೋರ್ಟ್ಗೆ ಹೋಗಿಲ್ಲ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ. ಆದರೆ ಉಳಿದವರು ಏನು ಮಾಡಿದ್ದಾರೆ ಎಂದು ಇದೇ ವೇಳೆ ಪ್ರಶ್ನೆ ಮಾಡಿದ್ದಾರೆ.
ಇವರೆಲ್ಲ ಪ್ರಮಾಣ ವಚನ ಸ್ವೀಕರಿಸಿ, ಸಚಿವರಾದವರು. ಈಗ ಭಯ ಇದೆ ಎಂದು ಕೋರ್ಟ್ಗೆ ಹೋಗಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಯಾವ ನೈತಿಕತೆ ಇದೆ. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗಿ ಮುಂದುವರಿಯಲು ಹಾಗೂ ಬಜೆಟ್ ಮಂಡಿಸಲು ನೈತಿಕತೆ ಇಲ್ಲ ಎಂದು ಟೀಕಿಸಿದ್ದಾರೆ.