ರಾಜ್ಯ ಬಜೆಟ್ 2021-2022: ಮಹಿಳೆಯರಿಗೆ ಸಿಎಂ ಯಡಿಯೂರಪ್ಪ ಭರ್ಜರಿ ಗಿಫ್ಟ್
2021-2022ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
Published: 08th March 2021 01:03 PM | Last Updated: 08th March 2021 02:04 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: 2021-2022ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಮಾಡುತ್ತಿರುವ ಯಡಿಯೂರಪ್ಪ ಅವರು ಮಹಿಳೆಯರಿಗೆ ವಿಶೇಷವಾದ ಯೋಜನೆಗಳನ್ನು ಘೋಷಿಣೆ ಮಾಡಿದ್ದಾರೆ. ಇದಕ್ಕಾಗಿ ಒಟ್ಟಾರೆ ರೂ.37,188 ಕೋಟಿ ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ.
ಉದ್ಯೋಗಸ್ಥ ಮಹಿಳೆಯರ ಅನುಕೂಲಕ್ಕಾಗಿ ಬೆಂಗಳೂರು ಮತ್ತು ಇತರ ಮಹಾನಗರಗಳಲ್ಲಿರುವ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಉನ್ನತೀಕರಣ, ಜಿಲ್ಲಾ ಕೇಂದ್ರಗಳಲ್ಲಿ ತಲಾ ಎರಡು ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಶಿಶು ಪಾಲನಾ ಕೇಂದ್ರ ತೆರೆಯಲು ಕ್ರಮ, ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಶೇ.4ರ ರಿಯಾಯಿತಿ ಬಡ್ಡಿದರಲ್ಲಿ ಮಹಿಳಾ ಅಭಿವೃದ್ಧಿ ನಿಗಮ/ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ರೂ.2 ಕೋಟಿ ವರೆಗೆ ಸಾಲ ಸೌಲಭ್ಯ.
ಸಂಜೀವಿನ ವ್ಯಾಪ್ತಿಯ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಗೆ ಆರು ಸಾವಿರ ಸಣ್ಣ ಉದ್ಯಮ ಸ್ಥಾಪನೆಗೆ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಬೆಂಬಲ, 60 ಸಾವಿರ ಮಹಿಳೆಯರಿಗೆ ಅನುಕೂಲ, ಮಹಿಳೆಯರ ಸಣ್ಣ ಉದ್ಯಮಗಳಿಗೆ ತಾಂತ್ರಿಕ ನೆರವು 2,260 ಕಿರು ಉದ್ದಿಮೆಗಳ ಮೂಲಕ 25 ಸಾವಿರ ಮಹಿಳೆಯರಿಗೆ ಉತ್ತೇಜನ, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ವಿಭಾಗ ಮಟ್ಟದಲ್ಲಿ ವಾರ್ಷಿಕ ಮೇಳ ಆಯೋಜನೆ ಹಾಗೂ ಇ-ಮಾರುಕಟ್ಟೆ ಸೌಲಭ್ಯ ಜಾರಿ.
ಬೆಂಗಳೂರಿನಲ್ಲಿ ಗಾರ್ಮೆಂಟ್ ಉದ್ಯಮದ ಮಹಿಳಾ ಕಾರ್ಮಿಕರಿಗೆ ರೂ.30 ಕೋಟಿ ವೆಚ್ಚದಲ್ಲಿ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್ ಪಾಸ್ ನೀಡುವ ವನಿತಾ ಸಂಗಾತಿ ಯೋಜನೆಗೆ ಚಾಲನೆ, ಮಹಿಳೆಯರು ಉದ್ಯೋಗ ಕೈಗೊಳ್ಳಲು ಪೂರಕ ವಾತಾವರಣ ನಿರ್ಮಾಣಕ್ಕಾಗಿ ವಿವಿಧ ನಿಯಾಮಾವಳಿಗಳ ಮರು ಪರಿಶೀಲನೆ, ಮಹಿಳಾ ಆಯವ್ಯಯ ಮತ್ತು ಮಕ್ಕಳ ಆಯವ್ಯಯವನ್ನು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಳವಡಿಸಲು ಕ್ರಮ.
ಸೇಫ್ ಸಿಟಿ ಯೋಜನೆಯಡಿ ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿ 7,500 ಕ್ಯಾಮೆರಾ ಅಳವಡಿಕೆ, ತಂತ್ರಜ್ಞಾನ ಆಧಾರಿತ ಇ-ಬೀಟ್ ಮೂಲಕ ರಾತ್ರಿ ಗಸ್ತನ್ನು ತೀವ್ರಗೊಳಿಸಲು ಕ್ರಮ.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸೂಕ್ತ ನೆರವು ಹಾಗೂ ಮಾರ್ಗದರ್ಶನ ನೀಡಲು ನಿಮ್ಹಾನ್ಸ್ ಮತ್ತು ರಾಷ್ಟ್ರೀಯ ಕಾನೂನು ಶಾಲೆಯ ಸಹಯೋಗದೊಂದಿಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಲೈಸನ್ಸ್ ಪಡೆದ ಮಹಿಳೆಯರಿಗೆ ಪ್ರಾಂಗಣದಲ್ಲಿನ ನಿವೇಶನ, ಗೋದಾಮು, ಅಂಗಡಿ, ಅಂಗಡಿ ಗೋದಾಮುಗಳ ಹಂಚಿಕೆಯಲ್ಲಿ ಶೇ.10ರಷ್ಟು ಮೀಸಲಾತಿ, ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ 6 ತಿಂಗಳ ಮಕ್ಕಳ ಆರೈಕೆ ರಜೆ ಸೌಲಭ್ಯ, ಮಹಿಳಾ ವಾಣಿಜ್ಯೋದ್ಯಮಿಗಳನ್ನು ಬೆಂಬಲಿಲಸು ಐದು ಕೋಟಿ ವೆಚ್ಚದಲ್ಲಿ ಇಡಬ್ಯೂಇ ಕಾರ್ಯಕ್ರಮ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.