ಕೃಷಿ ಕ್ಷೇತ್ರಕ್ಕೆ ಸಿಎಂ ಹೆಚ್ಚಿನ ಆದ್ಯತೆ: ಬಜೆಟ್ ನಲ್ಲಿ ಯಡಿಯೂರಪ್ಪ ಏನು ಕೊಟ್ಟಿದ್ದಾರೆ, ರೈತರನ್ನೇ ಕೇಳಿ?

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಮಂಡಿಸಿದ ರಾಜ್ಯ ಬಜೆಟ್​ನಲ್ಲಿ ನಿರೀಕ್ಷೆಯಂತೆ ಕೃಷಿ ಕ್ಷೇತ್ರಕ್ಕೆ ಕೆಲ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. 

Published: 09th March 2021 01:21 PM  |   Last Updated: 09th March 2021 02:48 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಬೆಂಗಳೂರು: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಮಂಡಿಸಿದ ರಾಜ್ಯ ಬಜೆಟ್​ನಲ್ಲಿ ನಿರೀಕ್ಷೆಯಂತೆ ಕೃಷಿ ಕ್ಷೇತ್ರಕ್ಕೆ ಕೆಲ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. 

2022ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಕನಸಿಗೆ ಪೂರಕವಾಗಿ ಯಡಿಯೂರಪ್ಪ ಸಹ ಹಲವು ಕ್ರಮಗಳನ್ನು ಬಜೆಟ್ ಮೂಲಕ ಪರಿಚಯಿಸಿದ್ದಾರೆ. ಕೊರೊನಾ ಕಾರಣದಿಂದಾಗಿ ರಾಜ್ಯದ ಬೊಕ್ಕಸದ ವೆಚ್ಚವನ್ನು ಮಿತಿಯಲ್ಲಿಡುವ ಅನಿವಾರ್ಯತೆಯ ನಡುವೆಯೂ ನೀರಾವರಿ ಯೋಜನೆಗಳನ್ನು ಕೈಬಿಟ್ಟಿಲ್ಲ.

ಗೋ ಸಂಪತ್ತಿನ ರಕ್ಷಣೆಗಾಗಿ ಪ್ರತಿ ಜಿಲ್ಲೆಗೆ ಒಂದರಂತೆ ಗೋಶಾಲೆ ಸ್ಥಾಪಿಸುವುದಾಗಿ ಬಜೆಟ್​ನಲ್ಲಿ ಹೇಳಲಾಗಿದೆ. ದೇಶೀಯ ಪಶುಸಂಪತ್ತಿನ ಶಾಶ್ವತ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ ನೀಡಲು ಹೆಸರಘಟ್ಟದಲ್ಲಿ ಥೀಮ್ ಪಾರ್ಕ್ ಸ್ಥಾಪಿಸಲಾಗುವುದು.

ನಂದಿದುರ್ಗ ಮೇಕೆ ತಳಿಗಳನ್ನು ಅಭಿವೃದ್ಧಿಪಡಿಸಿ, ಉತ್ಕೃಷ್ಟ ದರ್ಜೆಯ ಹೋತ ವಿತರಿಸಲು  1 ಕೋಟಿ ರು. ಅನುದಾನ ನೀಡಲಾಗಿದೆ. ‘ಸಮಗ್ರ ಗೋಸಂಕುಲ ಸಮೃದ್ಧಿ ಯೋಜನೆ’ಯಡಿ  1 ಕೋಟಿ ರು. ವೆಚ್ಚದಲ್ಲಿ ರಾಜ್ಯದ ರೈತರಿಗೆ ಹೊರರಾಜ್ಯದ ದೇಶಿ ತಳಿಗಳನ್ನು ಪರಿಚಯಿಸಲು ಕ್ರಮ ಕೈಗೊಳ್ಳಲಾಗುವುದು. ಕುರಿ ಮತ್ತು ಮೇಕೆಗಳು ಆಕಸ್ಮಿಕವಾಗಿ ಸಾವನ್ನಪ್ಪಿದಾಗ ಅವುಗಳ ಮಾಲೀಕರಿಗೆ ಪರಿಹಾರಧನ ನೀಡುವ ‘ಅನುಗ್ರಹ ಕೊಡುಗೆ’ ಯೋಜನೆಯನ್ನು ಮುಂದುವರಿಸಲಾಗಿದೆ. 

ಜಿಲ್ಲೆಗೊಂದು ಗೋಶಾಲೆ, ತಳಿ ಸಂವರ್ಧನೆಗೆ ಕ್ರಮ, ಮೀನುಗಾರಿಕೆಗೆ ರಿಯಾಯ್ತಿ ಡೀಸೆಲ್ ಸೇರಿದಂತೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳ ಉತ್ಸಾಹ ಹೆಚ್ಚಿಸುವ ಹಲವು ಕ್ರಮಗಳನ್ನು ಯಡಿಯೂರಪ್ಪ ಇಂದು ಮಂಡಿಸಿದ ಬಜೆಟ್​ ಹೊಂದಿದೆ.   ಹಣ್ಣು ಮತ್ತು ತರಕಾರಿ ಬೆಳೆಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಬೆಳೆಗಾರರಿಗೆ ತರಬೇತಿ ಮತ್ತು ತಾಂತ್ರಿಕ ಬೆಂಬಲ. ದ್ರಾಕ್ಷಿ ಕೃಷಿಯ ಉತ್ತೇಜನಕ್ಕೆ ಕರ್ನಾಟಕ ದ್ರಾಕ್ಷಾರಸ ಮಂಡಳಿಯನ್ನು ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿಯನ್ನಾಗಿ ರಚಿಸಲು ಕ್ರಮ ಕೈಗೊಳ್ಳಲಾಗಿದೆ. 

ರೈತರಿಗೆ ನೀಡಬೇಕಿದ್ದ ಅನುದಾನದಲ್ಲಿ ಸಾಕಷ್ಟು ಕಡಿಮೆಯಾಗಿದೆ, ಇದು ರೈತರನ್ನ ಮರೆತ ಬಜೆಟ್, ಒಬ್ಬ ಅಕೌಂಟೆಂಟ್ ರೀತಿಯಲ್ಲಿ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಸರ್ಕಾರದ ವಿರುದ್ದ ರೈತ ಮುಖಂಡ ಬಡಗಲಪುರ ನಾಗೇಂದ್ರ ವ್ಯಂಗ್ಯವಾಡಿದ್ದಾರೆ. ಈ ಬಜೆಟ್ ನಿಂದ ಕೃಷಿ ಕ್ಷೇತ್ರಕ್ಕೆ ಯಾವುದೇ ಲಾಭ ಇಲ್ಲ, ಸಂಕಷ್ಟದಲ್ಲಿರುವ ಕೃಷಿ ಕ್ಷೇತ್ರಕ್ಕೆ ಪುನಶ್ಚೇತನ ಮಾಡುವ ಉದ್ದೇಶ ಇಲ್ಲ, ನೀರಾವರಿಗೆ ಅತ್ಯಂತ ಕಡಿಮೆ ಪ್ರಮಾಣದ ಅನುದಾನ ಮೀಸಲಿಟ್ಟಿದ್ದಾರೆ. ಎತ್ತಿನಹೊಳೆ ಯೋಜನೆಯನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಈ ಬಜೆಟ್ ನಿಂದ ಗ್ರಾಮೀಣ ಜನರಿಗೆ ಯಾವುದೇ ಉಪಯೋಗವಿಲ್ಲ ಎಂದು ನಾಗೇಂದ್ರ ಕಿಡಿಕಾರಿದ್ದಾರೆ.

ಕೊರೊನಾದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಅನ್ನದಾತರು ಜೀವನ ನಡೆಸಲು ಕೂಡ ಕಷ್ಟಪಡುತ್ತಿದ್ದಾರೆ. ಕೃಷಿ ಯಂತ್ರಗಳ ಖರೀದಿಗೆ ಕೇವಲ 5 ಕೋಟಿ ರು ಹಣ ಮೀಸಲಿಟ್ಟಿರುವುದು ಸಾಕಾಗುವುದಿಲ್ಲ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.


Stay up to date on all the latest ರಾಜ್ಯ ಬಜೆಟ್ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp