ಕೊರೋನಾ ಹೊಡೆತ ಬಳಿಕ ಕೇಂದ್ರದಿಂದ ಮೊದಲ ಬಜೆಟ್: ಭಾರೀ ನಿರೀಕ್ಷೆಯಲ್ಲಿ ಜನತೆ, ಕರ್ನಾಟಕಕ್ಕೆ ಏನೇನು ಸಿಗಬಹುದು?

ಕೊರೋನಾ ವೈರಸ್ ನಿಗ್ರಹಕ್ಕಾಗಿ ಹೇರಲಾದ ಲಾಕ್ಡೌನ್ ಹಾಗೂ ಅದರಿಂದ ಆರ್ಥಿಕತೆ ಮೇಲೆ ಹೊಡೆತ ಬಿದ್ದ ಬಳಿಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಬಜೆಟ್ ಮಂಡನೆ ಮಾಡಲಿದ್ದು, 2021-2022ನೇ ಸಾಲಿನ ಹಣಕಾಸು ಬಜೆಟ್ ಬಗ್ಗೆ ಇಡೀ ದೇಶವೇ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಕೊರೋನಾ ವೈರಸ್ ನಿಗ್ರಹಕ್ಕಾಗಿ ಹೇರಲಾದ ಲಾಕ್ಡೌನ್ ಹಾಗೂ ಅದರಿಂದ ಆರ್ಥಿಕತೆ ಮೇಲೆ ಹೊಡೆತ ಬಿದ್ದ ಬಳಿಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಬಜೆಟ್ ಮಂಡನೆ ಮಾಡಲಿದ್ದು, 2021-2022ನೇ ಸಾಲಿನ ಹಣಕಾಸು ಬಜೆಟ್ ಬಗ್ಗೆ ಇಡೀ ದೇಶವೇ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ.

ಕೊರೋನಾ ಸಾಂಕ್ರಾಮಿಕದ ಪರಿಣಾಮವಾಗಿ ಆರ್ಥಿಕವಾಗಿ ಕುಗ್ಗಿ ಹೋಗಿರುವ ಜನಸಾಮಾನ್ಯರು ಕೇಂದ್ರ ಬಜೆಟ್ ಮೇಲೆ ಭಾರೀ ನಿರೀಕ್ಷೆಗಳನ್ನೇ ಇಟ್ಟುಕೊಂಡಿದ್ದಾರೆ.

ಕೊರೋನಾ ವೈರಸ್ ಆರ್ಭಟದ ಸಂದರ್ಭದಲ್ಲಿ ದೇಶದ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯ ಪ್ರತಿಯೊಬ್ಬರಿಗೂ ತಿಳಿಯುವಂತಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಉಳಿದೆಲ್ಲಾ ಕ್ಷೇತ್ರಗಳು ಹೊಡೆತ ತಿಂದರೂ ದೇಶದ ಅಭಿವೃದ್ಧಿಗೆ ಕೊರೋನಾ ವೇಳೆ ಉತ್ತಮ ಕೊಡುಗೆ ನೀಡಿರುವ ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಯಿದೆ. ಇದೇ ವೇಳೆ, ನಿರುದ್ಯೋಗ ಸಮಸ್ಯೆ ನಿವಾರಣೆಗೆ, ಆರ್ಥಿಕತೆಗೆ ಉತ್ತೇಜನ ನೀಡಲು ವಿವಿಧ ಉದ್ದಿಮೆ ವಲಯಗಳಿಗೆ ಹಲವು ಘೋಷಣೆಗಳನ್ನು ಮಾಡುವ ಸಾಧ್ಯತೆಗಳಿವೆ. ಜನರ ಕೈಗೆ ಹೆಚ್ಚಿನ ಹಣ ಲಭ್ಯವಾಗುವಂತೆ ಮಾಡುವ ಮೂಲಕ ಆರ್ಥಿಕತೆ ಚೇತರಿಸಿಕೊಳ್ಳುವುದಕ್ಕೆ ಬೇಕಾದ ಪ್ರಮುಖ ಕ್ರಮಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ.

ಕೇಂದ್ರ ಬಜೆಟ್ ನತ್ತ ಕರ್ನಾಟಕದ ಚಿತ್ತ...
ಈ ನಡುವೆ ಕೊರೋನಾ ಸಾಂಕ್ರಾಮಿಕ ರೋಗ, ಪ್ರವಾಹ, ಬೆಳೆನಷ್ಟದಿಂದ ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದ ಬಜೆಟ್ ಮೇಲೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಒಂದೇ ಸರ್ಕಾರ ಇರುವುದರಿಂದ ರಾಜ್ಯಕ್ಕೆ ಮಹತ್ತರ ಅನುದಾನ ಸಿಗಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಇನ್ನು ಬಜೆಟ್ ಮಂಡನೆ ಮಾಡುತ್ತಿರುವವರು ಕೂಡ ಕರ್ನಾಟಕ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಇದರಿಂದಾಗೂ ಕೂಡ ಕೇಂದ್ರ ಬಜೆಟ್ ನಿಂದ ಕರ್ನಾಟಕಕ್ಕೆ ಮಹತ್ವದ ಯೋಜನೆಗಳು ಹಾಗೂ ಅನುದಾನ ಸಿಗುವ ನಿರೀಕ್ಷೆಗಳಿವೆ.

ರಾಜ್ಯದ ರೈಲ್ವೇ ಯೋಜನೆಗಳಿಗೆ ಬೆಂಗಳೂರು ಮೆಟ್ರೋ ವಿಸ್ತರಣೆಗೆ ಹಣಕಾಸಿನ ನೆರವು, ಬೆಂಗಳೂರು ಉಪನಗರ ರೈಲ್ವೇ ಯೋಜನೆಗೆ ಅನುದಾನ, ಧಾರವಾಡ-ಕಿತ್ತೂರು-ಬೆಳಗಾವಿ ರೈಲ್ವೇ ಯೋಜನೆ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ರಾಷ್ಟ್ರೀಯ ಯೋಜನೆ ಮಾನ್ಯತೆ ನೀಡುವ ನಿರೀಕ್ಷೆ, ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲ್ವೇ ಯೋಜನೆಗೆ ಅನುದಾನ ನೀಡಬಹುದು ಎಂಬ ನಿರೀಕ್ಷೆಗಳಿವೆ.

ಇನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕನಿಷ್ಟ ಬೆಂಬಲ ಬೆಲೆ ರೂ.885 ಕೋಟಿ ಬಾಕಿ ನೀಡಬೇಕಿದ್ದು, ಈ ಹಣ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಪ್ರವಾಹದಿಂದ ತೀವ್ರ ಹಾನಿಯುಂಟಾಗಿದ್ದು, 23 ಜಿಲ್ಲೆಗಳ 130 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ತಾಲೂಕುಗಳಲ್ಲಿ ಆಗಿರುವ ಮಳೆ ನಷ್ಟ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಸಿಗಬಹುದು ಎಂದು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಇದರ ಜೊತೆಗೆ ರಾಜ್ಯ ನೀರಾವರಿ ಯೋಜನೆಗಳು, ಬಂದರು ಅಭಿವೃದ್ಧಿ, ಇತರೆ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ನೆರವಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

ಕಳೆದ ಜನವರಿ ತಿಂಗಳಿನಲ್ಲಿಯೇ ಜಿಎಸ್‌ಟಿ ಮಂಡಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ರಾಜ್ಯದ ನಿರೀಕ್ಷೆಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರುಗೆ ವಿವರಿಸಿದ್ದರು. ಈ ಹಿನ್ನೆಲೆ ರಾಜ್ಯಕ್ಕೆ ಅನುದಾನ ನೀಡಿಕೆಯಲ್ಲಿ ಯಾವುದೇ ಕಡಿತಗಳಾಗುವುದಿಲ್ಲ ಎಂಬ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com