ವಿದ್ಯುತ್ ಪೂರೈಕೆದಾರರ ಆಯ್ಕೆಗೆ ಗ್ರಾಹಕರಿಗೆ ಅವಕಾಶ, ಹೈಡ್ರೋಜನ್ ಎನರ್ಜಿ ಮಿಷನ್ ಆರಂಭ: ನಿರ್ಮಲಾ ಸೀತಾರಾಮನ್
ವಿದ್ಯುತ್ ಸೇವೆ ಒದಗಿಸುವ ಡಿಸ್ಕಾಮ್ ನ್ನು ಆರಿಸುವ ಅವಕಾಶವನ್ನು ಗ್ರಾಹಕರಿಗೆ ನೀಡುವ ಸೌಲಭ್ಯವನ್ನು ಕೇಂದ್ರ ಸರ್ಕಾರ ಸದ್ಯದಲ್ಲಿಯೇ ಘೋಷಣೆ ಮಾಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Published: 01st February 2021 02:14 PM | Last Updated: 01st February 2021 02:32 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ವಿದ್ಯುತ್ ಸೇವೆ ಒದಗಿಸುವ ಡಿಸ್ಕಾಮ್ ನ್ನು ಆರಿಸುವ ಅವಕಾಶವನ್ನು ಗ್ರಾಹಕರಿಗೆ ನೀಡುವ ಸೌಲಭ್ಯವನ್ನು ಕೇಂದ್ರ ಸರ್ಕಾರ ಸದ್ಯದಲ್ಲಿಯೇ ಘೋಷಣೆ ಮಾಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಬಜೆಟ್ ಮಂಡನೆ ವೇಳೆ ಇದನ್ನು ಪ್ರಕಟಿಸಿರುವ ಅವರು, ಪ್ರಸ್ತುತ ದೇಶದಲ್ಲಿರುವ ವಿದ್ಯುತ್ ಪೂರೈಕೆ ಸಂಸ್ಥೆಗಳನ್ನು ರಾಜ್ಯ ಸರ್ಕಾರಗಳು ನಿಯಂತ್ರಿಸುತ್ತವೆ. ವಿದ್ಯುತ್ ಪೂರೈಕೆ ಸಂಸ್ಥೆಗಳಿಂದ ದಿನಪೂರ್ತಿ ವಿದ್ಯುತ್ ನ್ನು ಗ್ರಾಹಕರಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಸಮಸ್ಯೆಯಿದೆ.
ಈ ಸಮಸ್ಯೆಯನ್ನು ನಿವಾರಿಸಲು ವಿದ್ಯುತ್ ಪೂರೈಕೆಯ ಏಕಸ್ವಾಮ್ಯವನ್ನು ನಿವಾರಿಸಿ ಗ್ರಾಹಕರಿಗೆ ಆಯ್ಕೆ ಮಾಡಲು ಅವಕಾಶ ನೀಡಲಾಗುತ್ತದೆ. ತಮಗೆ ಇಚ್ಛೆಯಿರುವ ಸೇವಾ ಪೂರೈಕೆದಾರರಿಂದ ವಿದ್ಯುತ್ ಪಡೆಯಬಹುದು. ಬದಲಿ ಮಾರ್ಗವನ್ನು ಸೂಚಿಸಲು ಈ ನಿಟ್ಟಿನಲ್ಲಿ ಚೌಕಟ್ಟು ರಚಿಸಲಾಗುವುದು ಎಂದು ವಿವರಿಸಿದರು.
ಡಿಸ್ಕಾಮ್ ನಲ್ಲಿರುವ ಹಣಕಾಸು ಕೊರತೆಯನ್ನು ಕೂಡ ಪ್ರಸ್ತಾಪಿಸಿದ ಅವರು, ಕಳೆದ ಡಿಸೆಂಬರ್ ಹೊತ್ತಿಗೆ 1,35 ಲಕ್ಷ ಕೋಟಿ ರೂಪಾಯಿ ಬಾಕಿ ಉಳಿದಿದೆ ಎಂದರು.
ಕಳೆದ 6 ವರ್ಷಗಳಲ್ಲಿ 2.8 ಕೋಟಿ ಮನೆಗಳಿಗೆ ವಿದ್ಯುತ್ ಒದಗಿಸಲು 139 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. 1.41 ಲಕ್ಷ ಸರ್ಕ್ಯುಟ್ ಕಿಲೋ ಮೀಟರ್ ವರೆಗೆ ವಿದ್ಯುತ್ ಪ್ರವಹಿಸುವಿಕೆಯನ್ನು ಸೇರಿಸಲಾಗಿದೆ ಎಂದರು.
ಹೈಡ್ರೋಜನ್ ಇಂಧನ ಯೋಜನೆ: ಮುಂದಿನ ಹಣಕಾಸು ವರ್ಷದಲ್ಲಿ ಹಸಿರು ಇಂಧನ ಮೂಲಗಳಿಂದ ಜಲ ವಿದ್ಯುತ್ ತಯಾರಿಸಲು ಹೈಡ್ರೋಜನ್ ಇಂಧನ ಮಿಷನ್ ಆರಂಭಿಸುವ ಪ್ರಸ್ತಾವನೆ ಕೂಡ ಇದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.