
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ: ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಸಾಧಿಸಿದ ಐತಿಹಾಸಿಕ ಗೆಲುವು ಸೋಮವಾರ ಸಂಸತ್‌ನಲ್ಲೂ ಪ್ರತಿಧ್ವನಿಸಿತು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ 2021-22ನೇ ಸಾಲಿನ ಬಜೆಟ್ ಭಾಷಣದಲ್ಲೂ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ದದ ಭಾರತ ಸಾಧಿಸಿದ ಗೆಲುವನ್ನು ಶ್ಲಾಘಿಸಿದ್ದಾರೆ.
"ಕ್ರಿಕೆಟ್ ಅನ್ನು ಪ್ರೀತಿಸುವ ದೇಶವಾಗಿ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಸಾಧಿಸಿದ ಅಭೂತಪೂರ್ವ ಯಶಸ್ಸನ್ನು ಸ್ಮರಿಸಿಕೊಳ್ಳುತ್ತೇನೆ" ಎಂದು ನಿರ್ಮಲಾ ಸೀತಾರಾಮನ್ ಅವರು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ವಶಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ ಸಾಧನೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
"ಈ ಗೆಲುವು ನಮಗೆ ವ್ಯಕ್ತಿಗಳಾಗಿ ನಾವು ಅದರಲ್ಲೂ ವಿಶೇಷವಾಗಿ ನಮ್ಮ ಯುವಕರು ಹೊಂದಿರುವ ಸಾಮರ್ಥ್ಯ ಹಾಗೂ ಗೆಲುವನ್ನು ಪಡೆಯುವ ಸಲುವಾಗಿ ಹೇರಳವಾದ ಭರವಸೆಯನ್ನು ನಮಗೆ ನೆನಪಿಸಿದೆ" ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಅಂತ್ಯವಾದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದಿತ್ತು. ಅದರಲ್ಲೂ ಗಬ್ಬಾದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ, ಮೂರೂವರೆ ದಶಕಗಳಿಂದ ಅಜೇಯವಾಗಿದ್ದ ಆಸ್ಟ್ರೇಲಿಯಾದ ಸೊಕ್ಕು ಮುರಿದಿತ್ತು.